Advertisement

“ಕಲಾವಿದರು, ಕಲಾನಿಪುಣರು ಸಂಘಟಿತರಾಗುವ ಅಗತ್ಯವಿದೆ’

07:55 AM Aug 11, 2017 | |

ಹೊಸಂಗಡಿ: ಸಂಘಟಿತ ಪ್ರಯತ್ನಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸುವುದರೊಂದಿಗೆ ಕ್ರಿಯಾ ಶೀಲತೆಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಲಾವಿದರು, ವಿವಿಧ ಕಲಾಕ್ಷೇತ್ರಗಳ ನಿಪುಣರು ಸಂಘಟಿತರಾಗುವ ಅಗತ್ಯವಿದೆ ಎಂದು ಹಿರಿಯ ರಂಗ ಕಲಾವಿದ, ಸವಕ್‌ ಜಿಲ್ಲಾಧ್ಯಕ್ಷ ಎಂ.ಉಮೇಶ ಸಾಲ್ಯಾನ್‌ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ರಂಗಕಲಾವಿದರು ಮತ್ತು ಕಾರ್ಮಿಕರ (ಸ್ಟೇಜ್‌ ಆರ್ಟಿಸ್ಟ್‌ ಆಂಡ್‌ ವರ್ಕರ್ಸ್‌ ಅಸೋಸಿಯೇಶನ್‌)ನ ನೇತೃತ್ವದಲ್ಲಿ ಹೊಸಂಗಡಿಯ ಶಾರದಾ ಕಲಾ ಆರ್ಟ್ಸ್ನ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಸಮಿತಿಯ  ಸಭೆ ಮತ್ತು ಮಂಜೇಶ್ವರ ತಾಲೂಕು ಸಮಿತಿ ರೂಪೀಕರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವರ್ತಮಾನ ಕಾಲಘಟ್ಟವನ್ನು ಭೂತಕಾಲದ ಅನುಭವಗಳೊಂದಿಗೆ ಭವಿಷ್ಯತ್ತಿನ ದೃಷ್ಟಿಯಿಂದ ಚಿಕಿತ್ಸಕ ಮನಃಸ್ಥಿತಿಯಲ್ಲಿ ತಿದ್ದಿತೀಡುವ ಮೂಲಕ ಸಮಾಜ ಸಂರಚನೆಯಲ್ಲಿ ಪ್ರಧಾನ ಪಾತ್ರವಹಿಸುವ ವಿವಿಧ ಕ್ಷೇತ್ರಗಳ ಕಲಾವಿದರು ಸಮಾನ ದೃಷ್ಟಿಕೋನದಿಂದ ಒಂದಾಗುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸವಕ್‌ ಕಾರ್ಯನಿರ್ವಹಿಸಲಿದೆ ಎಂದವರು ತಿಳಿಸಿದರು. ಕಲೆ, ಕಲಾವಿದರಿಗೆ ಎಲ್ಲಿಯ ವರೆಗೆ ಸ್ಪಂದಿಸುತ್ತದೋ ಅಲ್ಲಿಯವರೆಗೆ ಸಮಾಜ ನೈಜ ಅಸ್ತಿತ್ವದೊಂದಿಗೆ ನಿರಂತರ ಕ್ರಿಯಾಶೀಲವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸವಕ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ| ರಾಜೇಶ್‌ ಆಳ್ವ ಬದಿ ಯಡ್ಕ ಸಂಘಟನೆಯ ವಿವಿಧ ಕಾರ್ಯಯೋಜನೆ, ಸಾಗಿಬಂದ ಮಾರ್ಗಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸವಕ್‌ನ ಜಿಲ್ಲಾ ಕಾರ್ಯದರ್ಶಿ, ಶಾರದಾ ಕಲಾ ಆರ್ಟ್ಸ್ನ ನಿರ್ದೇಶಕ ಕೃಷ್ಣ ಜಿ. ಮಂಜೇಶ್ವರ, ಸತೀಶ ಅಡಪ ಸಂಕಬೈಲು, ರಾಮ ಸಾಲ್ಯಾನ್‌, ದಿವಾಣ ಶಿವಶಂಕರ ಭಟ್‌, ಸವಕ್‌ನ ಕೋಶಾಧಿಕಾರಿ ಉಲ್ಲಾಸ್‌ ಉಪಸ್ಥಿತರಿದ್ದರು.

ತಾಲೂಕು ಸಮಿತಿ ರಚನೆ
ಸಭೆಯಲ್ಲಿ ಮಂಜೇಶ್ವರ ತಾಲೂಕು ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಯಕ್ಷಗಾನ ಕಲಾವಿದ ರಾಮ ಸಾಲ್ಯಾನ್‌, ಪ್ರಧಾನ ಕಾರ್ಯದರ್ಶಿಯಾಗಿ ನಾಟಕ ಕಲಾವಿದ ರಾಜೇಶ್‌ ಮುಗುಳಿ, ಕೋಶಾಧಿಕಾರಿಯಾಗಿ ಜೀನ್‌ ಲವೀನಾ ಮೊಂತೇರೋ ಮಂಜೇಶ್ವರ ಹಾಗೂ ಉಪಾಧ್ಯಕ್ಷರಾಗಿ ಯಕ್ಷಗಾನ ಸಂಘಟಕ ಸತೀಶ ಅಡಪ ಸಂಕಬೈಲು, ನಾಟಕ ಕಲಾವಿದ ದಿವಾಕರ ಪ್ರತಾಪನಗರ, ಗಾಯಕ ಸೋಮನಾಥ ಮಂಗಲ್ಪಾಡಿ, ಜಗನ್ನಿವಾಸ, ಜತೆ ಕಾರ್ಯದರ್ಶಿಗಳಾಗಿ ಶಶಿಕುಮಾರ್‌ ಕುಳೂರು, ರೂಪಶ್ರೀ ವರ್ಕಾಡಿ, ಪ್ರಶಾಂತ್‌ ವರ್ಕಾಡಿ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ತಾಲೂಕು ಸಂಯೋಜಕರಾಗಿ ದಿವಾಣ ಶಿವಶಂಕರ ಭಟ್‌ ಅವರನ್ನು ಆಯ್ಕೆಮಾಡಲಾಯಿತು.

Advertisement

ಸವಕ್‌ನ ಮಂಜೇಶ್ವರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ರಾಮ ಸಾಲ್ಯಾನ್‌ ಈ ಸಂದರ್ಭ ಮಾತನಾಡಿ, ಗಡಿನಾಡಿನ ಯಕ್ಷಗಾನ ಸಹಿತ ವೈವಿಧ್ಯಮಯ ಕಲೆಗಳಿಗೆ ಕೇರಳದಲ್ಲಿ ಮನ್ನಣೆಯನ್ನು ತರುವ ನಿಟ್ಟಿನಲ್ಲಿ ಸಂಘಟನೆ ಕಾರ್ಯವೆಸಗುವುದು ಎಂದು ತಿಳಿಸಿ, ರಾಜ್ಯ ಶಾಲಾ ಕಲೋತ್ಸವದ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಯಕ್ಷಗಾನ ಸ್ಪರ್ಧೆಗೆ ಇದೀಗ ಅವಕಾಶ ನೀಡದಿರುವುದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಸಂಘಟನೆ ಪ್ರಬಲ ಹೋರಾಟದ ಮೂಲಕ ಯಕ್ಷಗಾನ ಸ್ಪರ್ಧೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಿದೆ. ಜತೆಗೆ ಕಾಸರಗೋಡಿನ ತುಳು ಜಾನಪದ ಕಲೆಗಳಿಗೂ ಮಾನ್ಯತೆ ನೀಡಿ ಸ್ಪರ್ಧೆಗೆ ಅವಕಾಶ ನೀಡುವ ಬಗ್ಗೆ ಸಂಬಂಧಪಟ್ಟವರೊಂದಿಗೆ ಮನವಿ ನೀಡಲಿದೆ ಎಂದು ತಿಳಿಸಿದರು.

ಸವಕ್‌ ಜಿಲ್ಲಾ ಕಾರ್ಯದರ್ಶಿ ಕೃಷ್ಣ ಜಿ. ಮಂಜೇಶ್ವರ ಸ್ವಾಗತಿಸಿ, ವಂದಿಸಿದರು.ಸಮಕ್‌ ಕಾಸರಗೋಡು ತಾಲೂಕು ರಚನಾ ಸಭೆ ಆ. 11ರಂದು ಸಂಜೆ 4 ಗಂಟೆಗೆ ಮುಳ್ಳೇರಿಯಾ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಸಮಿತಿಯ ಪ್ರಕಟನೆಯಲ್ಲಿ  ಸಂಬಂಧಪಟ್ಟವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next