ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ಕಲಾವಿದರು ಸೇರಿದಂತೆ ಇನ್ನಿತರ ಕಲಾ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಅನುದಾನ ನೀಡಲು ಮುಂದಾಗಿರುವ ವಿಷಯ ಇದೀಗ ಸಾಂಸ್ಕೃತಿಕ ವಲಯದಲ್ಲಿ ಬಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಈ ಬಗ್ಗೆ ಗುರುವಾರ ರವೀಂದ್ರ ಕಲಾಕ್ಷೇತ್ರದ ವಿಶ್ರಾಂತಿ ಕೊಠಡಿಯಲ್ಲಿ ಸಭೆ ಸೇರಿದ ಹಿರಿಯ ರಂಗ, ಜಾನಪದ ಮತ್ತು ಸಂಗೀತ ಕಲಾವಿದರು ಸಚಿವರು ಕೈಗೊಂಡಿರುವ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಕಲಾವಿದರು ಸಜ್ಜು: ಜಿಲ್ಲಾಧಿಕಾರಿಗಳ ಮೂಲಕ ಅನುದಾನ ನೀಡುವುದಾದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಏಕೆ ಬೇಕು ? ಎಂಬ ಮಾತು ಸಭೆಯಲ್ಲಿ ಕೇಳಿಬಂತು. ಅಲ್ಲದೆ ಸಾಂಸ್ಕೃತಿಕ ವಲಯದಲ್ಲಿ ‘ಕಳ್ಳರು ಮತ್ತು ಸುಳ್ಳರು’ ಇದ್ದಾರೆ ಎಂದು ಸಚಿವ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಹಲವು ಕಲಾವಿದರು ಬೇಸರ ವ್ಯಕ್ತಪಡಿಸಿದರು. ಸಚಿವರ ಈ ಹೇಳಿಕೆ ಖಂಡಿಸಿ ಮತ್ತು ಅನುದಾನ ಸ್ಥಗಿತ ಹಿಂಪಡೆಯುವಂತೆ ಆಗ್ರಹಿಸಿ ಇಡೀ ಕಲಾ ಸಮುದಾಯ ಜುಲೈ 10 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿತು.
ಸಭೆಯಲ್ಲಿ ಹಿರಿಯ ಕಲಾವಿದೆ ಬಿ.ಜಯಶ್ರೀ, ಸಿ.ಬಸವಲಿಂಗಯ್ಯ, ಕಿಕ್ಕೇರಿ ಕೃಷ್ಣಮೂರ್ತಿ, ಶ್ರೀನಿವಾಸ ಜಿ ಕಪ್ಪಣ್ಣ, ನಾಟಕ ಅಕಾಡೆಮಿ ಅಧ್ಯಕ್ಷ ಜಿ.ಲೋಕೇಶ್ ಸೇರಿದಂತೆ ಹಲವು ಹಿರಿಯ ಕಲಾವಿದರು ಭಾಗವಹಿಸಿದ್ದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ಸಚಿವರ ಹೇಳಿಕೆಗೆ ಜಾನಪದ ಕಲಾವಿದರು ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದು, ಇದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಜು.10ರಂದು ಪುರಭವನದ ಎದುರು ಕಲಾವಿದರು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್, ಯಾವುದೇ ಕಾರಣಕ್ಕೂ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯವು ಸಂಘ, ಸಂಸ್ಥೆಗಳಿಗೆ ನೀಡುತ್ತಿದ್ದ ಅನುದಾನ ನಿಲ್ಲಿಸಬಾರದು. ಇದು ಕಲಾ ಸಂಸ್ಕೃತಿಯ ಅಳಿವು-ಉಳಿವಿನ ವಿಷಯವಾಗಿದೆ ಎಂದು ಮನವಿ ಮಾಡಿದ್ದಾರೆ.