Advertisement

ಕಲಾ ಚತುರೆ ಗಾಯಿತ್ರಿ ನಾಯಕ

11:12 AM Feb 27, 2020 | Team Udayavani |

ನೂರು ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ಅಥವಾ ಶಿಲ್ಪದ ಮೂಲಕ ಹೇಳಿ ಬಿಡಬಹುದು. ಅದು ಕಲೆಗೆ ಇರುವ ತಾಕತ್ತು. ಕಲಾವಿದನಿಗೆ ಇರುವ ಜವಾಬ್ದಾರಿ ಕೂಡಾ ಹೌದು. ಆ ಬಗೆಯ ಕಲಾಪ್ರಜ್ಞೆಯನ್ನು ಬೆಳೆಸಿಕೊಂಡು, ಸಾಮಾಜಿಕ ಕಳಕಳಿಯ ಶಿಲ್ಪಗಳನ್ನು ರಚಿಸುವಲ್ಲಿ ಗಾಯಿತ್ರಿ ಜಗದೀಶ ನಾಯಕರದ್ದು ಎತ್ತಿದ ಕೈ.

Advertisement

ಉಡುಪಿಯ ಕಟಪಾಡಿಯವರಾದ ಗಾಯಿತ್ರಿ, ಬಾಲ್ಯದಲ್ಲಿಯೇ ಕಲೆಯ ಆಕರ್ಷಣೆಗೆ ಒಳಗಾದವರು. ಬಿ.ಕಾಂ. ಪದವಿಯ ನಂತರ, ಹವ್ಯಾಸವಾಗಿ ಕಲೆಯನ್ನು ರೂಢಿಸಿಕೊಂಡರು. ನಂತರ, ಕಲಾವಿದ ರಮೇಶ್‌ರಾವ್‌, ಶೈಲೇಶ್‌ ಕೋಟ್ಯಾನ್‌ ಮತ್ತು ಪ್ರಸಿದ್ಧ ಕಲಾವಿದ ವೆಂಕಿಪಲಿಮಾರ್‌ ಅವರ ಮಾಗದರ್ಶನದಲ್ಲಿ ಕಲಾ ಪರಿಣತಿ ಪಡೆದು, ಈಗ ಪೂರ್ಣಪ್ರಮಾಣದಲ್ಲಿ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆವೆ ಮಣ್ಣಿನ ಕಲಾಕೃತಿ
ಸುತ್ತಲಿನ ಪರಿಸರ, ಅಲ್ಲಿನ ನಿರಂತರ ಬದಲಾವಣೆಗಳನ್ನೇ ತಮ್ಮ ಕಲೆಗೆ ಸ್ಫೂರ್ತಿಯಾಗಿಸಿಕೊಳ್ಳುವುದು ಗಾಯಿತ್ರಿ ಅವರಿಗೆ ಕರಗತ. ಕರಾವಳಿಯಲ್ಲಿ ಹೆಂಚು ತಯಾರಿಸಲು ಬಳಸುವ ಆವೆ ಮಣ್ಣಿನಿಂದ ವಿಭಿನ್ನ ಕಲಾಕೃತಿಗಳನ್ನು ರಚಿಸುವಲ್ಲಿ ಇವರು ಪರಿಣತಿ ಪಡೆದಿದ್ದಾರೆ. ಮರಗಳನ್ನು ರಕ್ಷಿಸಿ, ನಿಸರ್ಗವನ್ನು ಹಾಳು ಮಾಡಬೇಡಿ, ಪ್ರಾಣಿ-ಪಕ್ಷಿಗಳಿಗೆ ಬದುಕಲು ಬಿಡಿ ಎಂಬಿತ್ಯಾದಿ ಸಂದೇಶ ಸಾರುವ ಅನೇಕ ಶಿಲ್ಪಗಳನ್ನು ರಚಿಸಿದ್ದಾರೆ. ಜೊತೆಗೆ, ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವಷ್ಟು ನೈಜವಾದ ಮಣ್ಣಿನ ಶಿಲ್ಪಗಳು, ಕಲಾಸಕ್ತರನ್ನು ಆಕರ್ಷಿಸಿವೆ. ಮನೆ, ಮಕ್ಕಳು, ತಾಯಿ, ಹುಡುಗಿ ಹೀಗೆ ಕುಟುಂಬ ವ್ಯವಸ್ಥೆಯನ್ನು ಬಿಂಬಿಸುವ ಶಿಲ್ಪಗಳು… ಕಲಾವಿದೆಯ ಕೈಚಳಕದಲ್ಲಿ ಜೀವ ಪಡೆದಿವೆ.

“ನಮ್ಮಿಂದ ಬೇರೆ ಬೇರೆ ರೀತಿಯಲ್ಲಿ ಪ್ರಕೃತಿ ನಾಶವಾಗುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಕಲೆ ಒಂದು ಪರಿಣಾಮಕಾರಿ ಮಾಧ್ಯಮ ಅನ್ನಿಸಿತು. ಹಾಗಾಗಿ ನಾನು ಶಿಲ್ಪಗಳ ಮೂಲಕ ಜನರಲ್ಲಿ ಆ ಕುರಿತು ಜಾಗೃತಿ ಮೂಡಿಸುವ ಆಶಯ ಹೊಂದಿದ್ದೇನೆ. ಮನುಷ್ಯನಿಂದಾಗಿ ಪ್ರಕೃತಿಯ ಅಳಿವು ಹೇಗೆ ಆಗುತ್ತದೆ. ಅದನ್ನು ಹೇಗೆ ಉಳಿಸಬಹುದು ಎಂಬ ಸಂದೇಶ ಸಾರುವ ಶಿಲ್ಪಗಳನ್ನು ರಚಿಸಿದ್ದೇನೆ. ‘
-ಗಾಯತ್ರಿ ನಾಯಕ

-ಬಳಕೂರು ವಿ.ಎಸ್‌ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next