Advertisement

ಬಜೆ ಡ್ಯಾಂ: ಕೃತಕ ಒಳಹರಿವು ತುಸು ಹೆಚ್ಚಳ

01:03 AM May 15, 2019 | sudhir |

ಉಡುಪಿ: ಸುಮಾರು 10 ದಿನಗಳಿಗೆ ಹೋಲಿಸಿದರೆ ಬಜೆ ಡ್ಯಾಂಗೆ ಹರಿದು ಬರುವ ನೀರಿನ ಹರಿವು ತುಸು ಹೆಚ್ಚಾಗಿದೆ. ಇದು ನೀರು ಬೇಗನೆ ಆವಿಯಾಗುವುದನ್ನು ತಡೆಯಲಿದೆ ಎಂಬ ವಿಶ್ವಾಸ ಅಧಿಕಾರಿ, ಜನಪ್ರತಿನಿಧಿಗಳಲ್ಲಿ ಮೂಡಿದೆ. ನೀರಿನ ಬವಣೆ ಎರಡು ದಿನಗಳಲ್ಲಿ ಹೆಚ್ಚಾಗಿಲ್ಲವಾದರೂ ಒಂದು ಹಂತದಲ್ಲಿ ಸಮಸ್ಯೆ ಉಳಿದುಕೊಂಡಿದೆ.

Advertisement

ರೇಷನಿಂಗ್‌ನಂತೆ 6 ದಿನಗಳಿಗೆ ಒಂದು ವಿಭಾಗಕ್ಕೆ ನೀರು ಪೂರೈಸಲಾಗುತ್ತಿದ್ದು, ಎರಡನೇ ಸುತ್ತಿನಲ್ಲಿ ಮಂಗಳವಾರ ಈ ಹಿಂದೆ ಮೊದಲ ಸುತ್ತಿನಲ್ಲಿ ನೀಡಿದ ಪ್ರದೇಶಗಳಿಗೆ ಒದಗಿಸಲಾಯಿತು. ಜತೆಗೆ ಮೊದಲ ಸುತ್ತಿನಲ್ಲಿ ನೀರು ತಲುಪದೆ ಇರಬಹುದಾದ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿಗೂ ಪೂರೈಸುವ ಪ್ರಯತ್ನಗಳು ಮುಂದುವರಿದಿವೆ. ಬುಧವಾರ ದೊಡ್ಡಣಗುಡ್ಡೆ, ಗುಂಡಿಬೈಲು, ನಿಟ್ಟೂರು, ಸಂತೆಕಟ್ಟೆ, ಹನುಮಂತನಗರ ಮೊದಲಾದೆಡೆ ಪೂರೈಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಟ್ಟ ತುಸು ಹೆಚ್ಚಳ
ಶ್ರಮದಾನ, ಹಿಟಾಚಿ ಮೂಲಕ ಬಂಡೆಗಳ ತೆರವಿನಿಂದ ಮತ್ತು ನದಿಯ ಅಲ್ಲಲ್ಲಿ ದೊಡ್ಡ ಹಳ್ಳಗಳಲ್ಲಿ ತುಂಬಿರುವ ನೀರನ್ನು ಪಂಪ್‌ ಮಾಡುವ ಮೂಲಕ “ಕೃತಕ ಒಳಹರಿವು’ ಸೃಷ್ಟಿ ಫ‌ಲ ನೀಡಿದೆ. ಪರಿಣಾಮ ನೀರಿನ ಮಟ್ಟ ಸ್ವಲ್ಪ ಹೆಚ್ಚಳವಾಗಿತ್ತು. ಸೋಮವಾರ ಸುಮಾರು 1.06 ಮೀ. ಇದ್ದ ಮಟ್ಟ ಮಂಗಳವಾರ 1.80ಕ್ಕೆ ಹೆಚ್ಚಿತ್ತು. ಪ್ರಸ್ತುತ ಡ್ಯಾಂನ ಜ್ಯಾಕ್‌ವೆಲ್‌ ಸನಿಹದಲ್ಲಿಯೇ ನಿರಂತರವಾಗಿ ಹೂಳೆತ್ತುವ ಕೆಲಸ ಮುಂದುವರಿದಿದೆ. ಇದು ಶಾಸಕ ರಘುಪತಿ ಭಟ್‌ ಅವರ ಮುತುವರ್ಜಿಯಿಂದ ನಡೆಯುತ್ತಿದೆ.

ಹಳ್ಳಗಳಿಂದ ನೀರು ಪಂಪ್‌ ಮಾಡುವ ಕಾರ್ಯ ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳ ಮುತುವರ್ಜಿಯಲ್ಲಿ ಸಾಗಿದೆ. ಬಜೆ ಡ್ಯಾಂ ಬಳಿ ಹೂಳಿನೊಂದಿಗೆ ಮಂಗಳವಾರ ಖಾಲಿ ಗೋಣಿಗಳ ರಾಶಿ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಇಲ್ಲಿ 2007ರ ಅನಂತರ ಹೂಳೆತ್ತಿರಲಿಲ್ಲ. ಪೌರಾಯುಕ್ತ ಆನಂದ ಕಲ್ಲೋಳಿಕರ್‌, ಎಂಜಿನಿಯರ್‌ಗಳಾದ ಗಣೇಶ್‌, ರಾಘವೇಂದ್ರ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ ಅವರನ್ನೊಳಗೊಂಡ ತಂಡ ಸ್ಥಳದಲ್ಲಿದ್ದು, ನಿಗಾ ವಹಿಸಿದೆ. ಶಾಸಕರು, ಕೆಲವು ಮಂದಿ ನಗರಸಭಾ ಸದಸ್ಯರು, ಸಮಾಜಸೇವಕರು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮುಂದುವರಿಸಿದ್ದಾರೆ.

ದೂರು ಇಳಿಕೆ
ನಗರಸಭೆಯಿಂದ 8 ಟ್ಯಾಂಕರ್‌ಗಳಲ್ಲಿ ಮಂಗಳವಾರವೂ ನೀರು ಪೂರೈಸಲಾಗಿದೆ. ಎಸ್‌ಟಿ/ಎಸ್‌ಸಿ ಸೇರಿದಂತೆ ಕಾಲನಿಗಳು, ಮನೆಗಳಿಗೆ ಒದಗಿಸಲಾಯಿತು. ಸೋಮವಾರ 70ಕ್ಕೂ ಅಧಿಕ ದೂರುಗಳು ಬಂದಿದ್ದವು. ಆದರೆ ಮಂಗಳವಾರ ದೂರಿನ ಸಂಖ್ಯೆ 46ಕ್ಕೆ ಇಳಿದಿತ್ತು. ದೂರುಗಳಿಗೆ ಶೀಘ್ರ ಸ್ಪಂದಿಸಲು ಯತ್ನಿಸಲಾಗುತ್ತಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next