Advertisement

Article: ಸ್ವನಿಯಂತ್ರಣವೇ ಯಶಸ್ಸಿನ ಮೆಟ್ಟಿಲು

01:12 AM Oct 26, 2023 | Team Udayavani |

ಯಶಸ್ಸಿನ ಬೆನ್ನೇರಿ ಹೊರಟಿರುವ ಯುವ ಸಮು ದಾಯ ಅದಕ್ಕಾಗಿ ಬೇರೆ ಬೇರೆ ದಾರಿಗಳನ್ನು ತುಳಿಯು ತ್ತಿದ್ದು, ಅವುಗಳಲ್ಲಿ ಎಲ್ಲವೂ ಸರಿಯಾದ ಮಾರ್ಗವಲ್ಲ ಎಂಬುದು ಅರಿವಾಗುವ ಹೊತ್ತಿಗೆ ಸಾಕಷ್ಟು ಹಿನ್ನಡೆ ಆಗಿರುತ್ತದೆ. ಆಗಲೂ ಎಚ್ಚೆತ್ತುಕೊಳ್ಳದೆ ತಾನು ಕಂಡು ಕೊಂಡದ್ದೇ ಸರಿಯಾದುದು ಎಂಬಂತೆ ಬಹುತೇಕರು ವರ್ತಿಸುತ್ತಿರುವುದು ಅವರಿಗೆ ವೈಯಕ್ತಿಕವಾಗಿಯೂ ದೊಡ್ಡ ಹಾನಿ ಮಾಡಿರುತ್ತದೆ, ಪರೋಕ್ಷವಾಗಿ ಸಮಾಜದ ಮೇಲೂ ಪರಿಣಾಮ ಬೀರಿರುತ್ತದೆ.

Advertisement

ಯುವ ಸಮುದಾಯವನ್ನು ಕಾಡುತ್ತಿರುವ ಸಮಸ್ಯೆ ಗಳು, ಅವರಿಗೆ ಎದುರಾಗುವ ತೊಡುಕುಗಳು ಹಲ ವಾರಿವೆ. ಆದರೆ ಬಹುತೇಕ ಅವರೇ ಸೃಷ್ಟಿಸಿಕೊಂಡದ್ದು ಹಾಗೂ ಇನ್ನೂ ಕೆಲವು ವಿವೇಚನೆಯ ಕೊರತೆಯಿಂದ ಉಂಟಾದದ್ದು. ಋಣಾತ್ಮಕ ವಿಷಯಗಳಿಗೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿರುವುದು, ಯುವ ಮನಸ್ಸಿನ ಲ್ಲಿರುವ ಚಂಚಲತೆ ಮುಂತಾದವು ಯಶಸ್ಸಿನ ಪಥದಲ್ಲಿ ಸಿಗುವ ದೊಡ್ಡ ಸವಾಲು. ಆದರೆ ಯುವ ಸಮುದಾ ಯವು ಸ್ವನಿಯಂತ್ರಣದ ಕಡೆಗೆ ಒತ್ತು ನೀಡಿದರೆ ಯಶ ಸ್ಸಿನ ಸೌಧದ ಮೊದಲ ಮೆಟ್ಟಿಲನ್ನು ಏರುವುದು ಸುಲಭ.

ಯುವ ಮನಸ್ಸುಗಳನ್ನು ಬೇರೆ ಬೇರೆ ಶಕ್ತಿಗಳು ತಮ್ಮತ್ತ ಸೆಳೆಯುವುದು ಸಹಜ. ಮಾಗದ ಮನಸ್ಸುಗಳು ಸುಲ ಭವಾಗಿ ಅವುಗಳತ್ತ ಆಕರ್ಷಿತವಾಗುವುದು ಸಹಜ ವಾದರೂ ವಾಸ್ತವವನ್ನು ಅರಿತುಕೊಂಡು ಜವಾಬ್ದಾರಿ ಯಿಂದ ವರ್ತಿಸಿದರೆ ಸಮಸ್ಯೆಯ ಹೊಂಡದಲ್ಲಿ ಬೀಳು ವುದನ್ನು ತಪ್ಪಿಸಿಕೊಳ್ಳಬಹುದು. ಈ ಸಮಾಜವು ಒಳಿತು -ಕೆಡುಕುಗಳಿಂದ ತುಂಬಿಕೊಂಡಿದ್ದು, ತಮಗೆ ಬೇಕಾದು ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆಕರ್ಷಿತವಾಗಿರುವುದರಲ್ಲಿ ಅಪಾಯ ಹೆಚ್ಚೇ. ಒಳಿತಿನ ಅಂಶಗಳು ಬೇಗನೆ ಮನಸ್ಸನ್ನು ಸೆಳೆಯದಿದ್ದರೂ ಹಠ ಹಿಡಿದು ಅದರ ರುಚಿಯನ್ನು ಆಸ್ವಾದಿಸಲು ಸಫ‌ಲ ರಾದರೆ ನಾವು ಗೆಲುವಿನ ಮೆಟ್ಟಿಲನ್ನು ಏರುತ್ತಿದ್ದೇವೆ ಎಂದೇ ಅರ್ಥ.

ಎಲ್ಲವನ್ನೂ ಹಿರಿಯರೇ ನಿಯಂತ್ರಿಸುವುದು ಕಷ್ಟ
ಮಕ್ಕಳು ತಪ್ಪು ದಾರಿಯಲ್ಲಿ ಸಾಗಬಾರದು ಎಂಬುದು ಎಲ್ಲರೂ ಕಾಳಜಿ ವಹಿಸಿ ಎಚ್ಚರಿಕೆಯಿಂದಿರುತ್ತಾರೆ. ಆದರೆ ಮಕ್ಕಳ ಪ್ರತಿಯೊಂದು ವಿಷಯವನ್ನೂ ನಿಯಂತ್ರಿ ಸುವುದು ಹೆತ್ತವರಿಗೆ ಸಾಧ್ಯವಿಲ್ಲ. ಹೆತ್ತವರ ಮುಂದೆ ಒಂದು, ಗೆಳೆಯರ ಜತೆಗೆ ಇನ್ನೊಂದು, ಸಮಾಜದಲ್ಲಿ ಮತ್ತೂಂದು ರೀತಿಯ ವರ್ತನೆ ತೋರುವವರೂ ಸಾಕಷ್ಟು ಮಂದಿಯಿದ್ದಾರೆ. ಅವರ ನಡೆನುಡಿ ಪ್ರಾಮಾಣಿಕವಾಗಿರುವುದಿಲ್ಲ. ಇದು ಅವರ ಯಶಸ್ಸಿನ ಪಥಕ್ಕೆ ದೊಡ್ಡ ಬೇಲಿ ಹಾಕುತ್ತದೆ. ಹಾಗೆಂದು ಯುವ ಸಮುದಾಯ ತಪ್ಪು ದಾರಿಯಲ್ಲಿ ಸಾಗಬೇಕೆಂದೇ ಈ ರೀತಿ ನಡೆದುಕೊಳ್ಳುತ್ತಿಲ್ಲ. ಅದೆಲ್ಲವೂ ಆ ಕ್ಷಣದ ಆಕರ್ಷ ಣೆಯಷ್ಟೆ. ಅದು ತಪ್ಪು ಎಂಬುದು ಅವರಿಗೆ ಗೊತ್ತಿರು ತ್ತದೆ, ಹಾಗಿದ್ದರೂ ಅದರತ್ತ ಮನಸ್ಸು ಹರಿಯದಂತೆ ನೋಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇವ ತ್ತೂಂದು ದಿನ ನಾಳೆಯಿಂದ ಬಿಟ್ಟರಾಯಿತು ಎಂದು ರುಚಿ ನೋಡಿ ತಪ್ಪು ದಾರಿಯ ಆರಂಭಿಕ ಹೆಜ್ಜೆ ಇಡು ವವರು ಎಲ್ಲರನ್ನೂ ಕತ್ತಲೆಯಲ್ಲಿಟ್ಟುಕೊಂಡೇ ಆ ಪಥ ದಲ್ಲಿ ತುಂಬಾ ದೂರ ಸಾಗಿರುತ್ತಾರೆ.

ಅಷ್ಟು ಹೊತ್ತು ಹೆತ್ತವರಿಗೂ ಅದು ತಿಳಿದಿರುವುದಿಲ್ಲ. ಕೆಲವು ಸಂದರ್ಭ ಗಳಲ್ಲಿ ಮಕ್ಕಳ ಮೇಲೆ ಅತಿಯಾದ ವಿಶ್ವಾಸ, ಇನ್ನು ಕೆಲವು ಸಂದರ್ಭಗಳಲ್ಲಿ ನಿರ್ಲಕ್ಷ್ಯ, ಇನ್ನು ಕೆಲವು ಸಂದರ್ಭ ಗಳಲ್ಲಿ ಮಕ್ಕಳೇ ವ್ಯವಸ್ಥಿತವಾಗಿ ಹೆತ್ತವ ರನ್ನು ಕತ್ತಲೆಯಲ್ಲಿಡುವಲ್ಲಿ ಸಫ‌ಲರಾಗುವುದೇ ಪರಿಸ್ಥಿತಿ ಕೈಮೀರಲು ಕಾರಣ. ಆದ್ದರಿಂದ ತಪ್ಪು ಎಂಬುದು ತಿಳಿದಿ ದ್ದರೂ ಅದೇ ದಾರಿಯಲ್ಲಿ ಕುತೂಹಲ ಅಥವಾ ಆಸಕ್ತಿ ಗಾಗಿ ಹೆಜ್ಜೆ ಇಡುವುದು ತಮಗೆ ತಾವೇ ಮಾಡಿಕೊಳ್ಳುವ ಮಹಾಮೋಸ ಎನ್ನಬೇಕಾಗುತ್ತದೆ.

Advertisement

ಮುಕ್ತವಾಗಿರಲಿ
ತಾವು ಏನು ಮಾಡಿದರೂ ಅದನ್ನು ಎಲ್ಲಿ ರಹಸ್ಯ ವಾಗಿಟ್ಟರೂ ಮನೆಯಲ್ಲಿ ಮಾತ್ರ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಮನೆಮಂದಿ ನಮ್ಮ ಹಿತೈಷಿಯಾಗಿ ರುತ್ತಾರೆ ಹಾಗೂ ತಪ್ಪನ್ನು ಕ್ಷಮಿಸಿ, ತಿದ್ದಿ ನಡೆಯಲು ಪ್ರೇರೇಪಿಸುತ್ತಾರೆ. ತಪ್ಪು ಮಾಡುವುದು ಸಹಜ. ಆದರೆ ಅದನ್ನು ಒಪ್ಪಿಕೊಳ್ಳದಿರುವುದು ಅಥವಾ ಗುಟ್ಟಾಗಿರಿ ಸಿಕೊಳ್ಳುವುದು ಮಹಾಪರಾಧ. ತಪ್ಪು ಮಾಡಿದ ಮಾತ್ರಕ್ಕೆ ಯಾರೂ ಸಂಕಷ್ಟಕ್ಕೆ ಸಿಲುಕಬೇಕಾಗಿಲ್ಲ. ಮಾಡಿರುವ ತಪ್ಪನ್ನು ಗುಟ್ಟಾಗಿಟ್ಟು ಮನಸ್ಸಿನಲ್ಲೇ ಕೊರಗುತ್ತಿದ್ದರೆ ಅಥವಾ ಆ ತಪ್ಪುಗಳನ್ನು ಮನೆ ಹಾಗೂ ಸಮಾಜಕ್ಕೆ ಅರಿಯದಂತೆ ಮತ್ತೆ ಮತ್ತೆ ಮಾಡುತ್ತಲೇ ಇರುವುದು ವ್ಯಕ್ತಿಯ ಹಿತಕ್ಕೆ ಅತೀ ಮಾರಕವಾಗಿ ಪರಿಣಮಿಸುತ್ತದೆ. ನಮ್ಮ ನಡೆನುಡಿ ಮುಕ್ತವಾಗಿದ್ದರೆ ಸರಿತಪ್ಪುಗಳನ್ನು ವಿಮರ್ಶಿಸಲು ಸಾಧ್ಯವಾಗುತ್ತದೆ.

ಸ್ವವಿಮರ್ಶೆ ಯಶಸ್ಸಿಗೆ ಪೂರಕ
ನಾವು ನಮ್ಮ ನಡೆನುಡಿಯನ್ನು ಸ್ವವಿಮರ್ಶೆಗೆ ಒಳ ಪಡಿಸಿ, ಸರಿ ಯಾವುದು, ತಪ್ಪು ಯಾವುದು ಎಂಬುದರ ಬಗ್ಗೆ ನಾವೇ ವಿಮರ್ಶಿಸಿಕೊಂಡರೆ ಅದರಿಂದ ಉತ್ತಮ ಫ‌ಲಿತಾಂಶ ಸಿಗಲು ಸಾಧ್ಯ. ಜೀವನದಲ್ಲಿ ಸೋತವರು, ಗೆದ್ದವರು, ಸೋತು ಗೆದ್ದವರು ಹಾಗೂ ಗೆದ್ದು ಸೋತವರ ಬದುಕನ್ನು ಒಂದು ನಿರ್ಧಾರವೇ ರೂಪಿಸಿರುತ್ತದೆ. ಇದಕ್ಕೆ ನಮ್ಮ ಕಣ್ಣ ಮುಂದೆಯೇ ಸಾಕಷ್ಟು ಉದಾ ಹರಣೆಗಳು ಸಿಗುತ್ತವೆ. ಅದರ ಜತೆಗೆ ನಮ್ಮನ್ನು ಹೋಲಿಸಿ ಕೊಂಡು ವಿಮರ್ಶೆ ಮಾಡಿಕೊಳ್ಳುವುದು, ತಪ್ಪಿದ್ದೆಲ್ಲಿ ಅಥವಾ ತಾನು ತಪ್ಪುತ್ತಿದ್ದೇನೆಯೇ ಎಂದು ತಿಳಿದು ಕೊಳ್ಳಲು ಇದು ಹೆಚ್ಚು ಪೂರಕವಾಗಿದೆ. ಪ್ರಾಮಾಣಿ ಕವಾಗಿ ಸ್ವವಿಮರ್ಶೆ ಮಾಡಿಕೊಂಡು ತಿದ್ದಿಕೊಡು ಅಪಾಯದಿಂದ ತಪ್ಪಿಸಿಕೊಳ್ಳಲು ಇರುವ ದಾರಿಯನ್ನೂ ನಾವು ಅವಗಣಿಸಿ, ತಪ್ಪು ದಾರಿಯನ್ನೇ ಆಯ್ಕೆ ಮಾಡಿ ಕೊಂಡರೆ ಮುಂದಿನದನ್ನು ಊಹಿಸಿಕೊಳ್ಳಲೂ ಕಷ್ಟ. ಸ್ವನಿ ಯಂತ್ರಣ ಎಂಬುದು ನಮಗೆ ನಾವೇ ಹಾಕಿ ಕೊಳ್ಳುವ ಕಡಿವಾಣ. ಇದು ಎಲ್ಲರಿಗೂ ಅತೀ ಅಗತ್ಯವಾಗಿದೆ.

ಕೆಡುಕಿನೆಡೆಗೆ ಸೆಳೆತ ಹೆಚ್ಚು
ಕೆಡುಕು ಯಾವತ್ತೂ ಆಕರ್ಷಕವಾಗಿರುತ್ತದೆ. ಅಂಥ ಕೆಡುಕಿನ ಕಡೆಗೆ ನಮ್ಮನ್ನು ಸೆಳೆಯುವ ಶಕ್ತಿಗಳು ಸಮಾಜದಲ್ಲಿ ಆಳವಾಗಿ ಬೇರೂರಿರುತ್ತವೆ. ಅದು ಸಭ್ಯ ತೆಯ ಸೋಗನ್ನೂ ಹಾಕಿಕೊಂಡಿರಬಹುದು. ಅದರ ಬಗ್ಗೆ ಎಚ್ಚರದಿಂದಿರುವುದು ಅತೀ ಅಗತ್ಯ. ಈ ಸಮಾ ಜವು ನಾವು ನೋಡಿದಂತೆ ಇರುವುದೇ ಇಲ್ಲ. ಎಲ್ಲವೂ ಕೃತಕ. ಸಭ್ಯ, ಗೌರವಾನ್ವಿತ ಎಂದು ಕರೆಸಿಕೊಳ್ಳು ವವರೆಲ್ಲರೂ ಅದಕ್ಕೆ ಅರ್ಹರು ಎನ್ನುವಂತಿಲ್ಲ. ಆದ್ದರಿಂದ ನಾವು ಯಾರೊಂದಿಗೆ ಹೇಗೆ ವ್ಯವಹರಿಸುತ್ತೇವೆ, ಅವರು ಎಷ್ಟು ವಿಶ್ವಾಸಾರ್ಹರು, ಅವರ ನಡೆನುಡಿ ಪ್ರಾಮಾಣಿ ಕವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. “ಬೆಳ್ಳಗೆ ಕಂಡದ್ದೆಲ್ಲ ಹಾಲಲ್ಲ’ ಎಂಬ ನಮ್ಮ ಹಿರಿ ಯರ ಮಾತು ಸದಾ ಸ್ಮರಣೀಯ ಹಾಗೂ ಆ ಮಾತು ಸದಾ ನಮ್ಮ ಜಾಗೃತಗೊಳಿಸುತ್ತಿರಬೇಕು. “ಸಹವಾಸ ದೋಷದಿಂದ ಕೆಟ್ಟು ಹೋದ’ ಎಂಬ ಮಾತು ಕೂಡ ಸಾಮಾನ್ಯ. ಆದರೆ ಸಹವಾಸ ನಮ್ಮನ್ನು ಕೆಡಿಸುವುದಲ್ಲ, ಕೆಟ್ಟ ಸಹವಾಸವನ್ನು ದೀರ್ಘ‌ ಕಾಲ ನಾವು ಜೀವಂತ ಇರಿಸಿಕೊಳ್ಳುವುದು ನಾವು ದಾರಿ ತಪ್ಪಲು ಪ್ರಮುಖ ಕಾರಣ.

ಸಮಾಜಕ್ಕೂ ಇದೆ ಜವಾಬ್ದಾರಿ
ನಾವು ವೇದಿಕೆಯಲ್ಲಿ ಸಾಕಷ್ಟು ಉಪದೇಶ, ಹೊಗ ಳಿಕೆಯ ಮಾತುಗಳನ್ನು ಕೇಳುತ್ತಿರುತ್ತೇವೆ. ಗೌರವಾ ನ್ವಿತರು ಹಾಗೂ ಪ್ರಾಮಾಣಿಕರು ಎಂದು ಕೆಲವರನ್ನು ವೇದಿಕೆಯ ಗೌರವ ಕೊಟ್ಟು ಉಪಚರಿಸುತ್ತೇವೆ. ಆದರೆ ಅವರು ಅದಕ್ಕೆ ಎಷ್ಟು ಅರ್ಹರು?, ಸಮಾಜಕ್ಕೆ ಅವರ ಕೊಡುಗೆ ಏನು?, ಅವರ ನಡೆನುಡಿ ಎಷ್ಟು ಪ್ರಾಮಾಣಿ ಕವಾಗಿದೆ? ಎಂಬುದನ್ನು ವಿಮರ್ಶಿಸಿಯೇ ನಾಲ್ಕು ಮಂದಿಯ ಮುಂದೆ ಯಾರನ್ನಾದರೂ ಗೌರವಿಸಬೇಕು. ಹೀಗೆ ಗೌರವ ಪಡೆದುಕೊಂಡವರ ಬಗ್ಗೆ ಮಕ್ಕಳು ಉತ್ತಮ ಭಾವನೆ ಬೆಳೆಸಿಕೊಳ್ಳುವುದು ಸಹಜ. ಆದರೆ ನಾವು ವೇದಿಕೆಯ ಗೌರವ ಕೊಡುವವರು ಗೋಮುಖ ವ್ಯಾಘ್ರರಾಗಿದ್ದರೆ, ಅವರಲ್ಲಿ ಗೋಸುಂಬೆಯಂಥ ಬಣ್ಣ ಬದಲಾಯಿಸುವ ಸ್ವಭಾವದವರಾಗಿದ್ದರೆ, ಹೊರಗೆ ಸಭ್ಯರಂತೆ ಕಂಡು ಒಳಗೆ ಜನರನ್ನು ಪರೋಕ್ಷವಾಗಿ ಶೋಷಿಸುವವರಾಗಿದ್ದರೆ ಅದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಗಣ್ಯರು ಎಂದು ಸಮಾಜಕ್ಕೆ ಯಾರನ್ನಾದರೂ ಪರಿಚಯ ಮಾ ಡುವ ಮೊದಲು ಸಾಕಷ್ಟು ಬಾರಿ ಚಿಂತಿಸಬೇಕಾಗಿದೆ. ನಕಲಿ ಗಣ್ಯರು ಅಥವಾ ಗೋಸುಂಬೆ ವರ್ತನೆಯ ಸಭ್ಯರನ್ನು ವೈಭವೀಕರಿಸುವುದು ಖಂಡಿತಾ ಸರಿಯಲ್ಲ.

ಬಾಳಿನಲ್ಲಿ ಒಳಿತು, ಕೆಡುಕಿನ ತಿರುವು ಸಿಗಲು ಗಂಭೀರ ಕಾರಣಗಳು ಬೇಕೆಂದಿಲ್ಲ. ಆದರೆ ನಾವು ನಮ್ಮ ಮನಸ್ಸನ್ನು ನಿಗ್ರಹಿಸಿಕೊಳ್ಳದಿದ್ದರೆ ಅಪಾಯಕ್ಕೆ ಸಿಲುಕಿ ಕೊಳ್ಳುವುದು ಖಚಿತ. ಆದ್ದರಿಂದ ಯುವ ಸಮುದಾ ಯವು ಸಮಾಜಕ್ಕಿಂತ ಹೆಚ್ಚಿನ ವಿಶ್ವಾಸವನ್ನು ಮನೆಯವರಲ್ಲಿ ಇರಿಸಿಕೊಳ್ಳಬೇಕು. ಮನೆಮಂದಿಯೇ ನಮ್ಮ ಪರಮಮಿತ್ರ ಹಾಗೂ ಪರಮೋಚ್ಚ ಹಿತೈಷಿ. ಮನೆ ಮಂದಿಯಲ್ಲಿ ಗುಟ್ಟು ಮಾಡಿದಷ್ಟು ಹಾನಿ ಹೆಚ್ಚು.

ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next