Advertisement

ಒಂದು ದೋಸೆಯೆಂಬ ಸ್ವರಕ್ಕೆ ಎಷ್ಟು ವ್ಯಂಜನ?

11:06 AM Apr 26, 2017 | Karthik A |

ಪ್ರಧಾನಿ ನರೇಂದ್ರ ಮೋದಿಯವರು ಹೊಟೇಲ್‌ಗ‌ಳ ಟೇಬಲ್‌ ಮೇಲೆ ಸೃಷ್ಟಿಯಾಗುತ್ತಿರುವ ಆಹಾರ ತ್ಯಾಜ್ಯಗಳ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಸೂಪರ್‌ ಪವರ್‌ ಆಗಲು ಹೊರಟಿರುವಂಥ ನಮ್ಮ ದೇಶದಲ್ಲಿ ಅಗತ್ಯವಾಗಿ ಆಗಬೇಕಾದ ಚರ್ಚೆಯಿದು. ಎಲ್ಲರೂ ಕೇಳಿಕೊಳ್ಳೋಣ – ಒಂದು ದೋಸೆಯೆಂಬ ಸ್ವರಕ್ಕೆ ಎಷ್ಟೊಂದು ವ್ಯಂಜನಗಳು ಬೇಕು?

Advertisement

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳ ತಮ್ಮ ಮನ್‌ ಕಿ ಬಾತ್‌ನಲ್ಲಿ ಬಹಳ ಅಮೂಲ್ಯವಾದ ವಿಷಯವನ್ನೇ ಪ್ರಸ್ತಾಪಿಸಿದ್ದಾರೆ. ಹೊಟೇಲ್‌ಗ‌ಳಲ್ಲಿ ಆಗುತ್ತಿರುವ ಆಹಾರ ತ್ಯಾಜ್ಯದ ಬಗೆಗಿನ ದೃಷ್ಟಿಕೋನ ಹಲವು ನೆಲೆಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಭಾರತದಂತ ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರದಲ್ಲಿ ಆಹಾರ ತ್ಯಾಜ್ಯದ ಕುರಿತು ಚರ್ಚೆ ನಡೆಯಬೇಕಾದದ್ದೇ. ಅದರಲ್ಲೂ ನಗರೀಕರಣ ಮತ್ತು ನಗರ ಸಂಸ್ಕೃತಿ ಕಾಳ್ಗಿಚ್ಚಿನಂತೆ ವ್ಯಾಪಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಇದು ತೀರಾ ಅಗತ್ಯವಾದುದೇ.

ಹೊಟೇಲ್‌ನಲ್ಲಿ ಟೇಬಲ್‌ ಮೇಲೆ ತ್ಯಾಜ್ಯವಾಗಿ ಪರಿವರ್ತಿತವಾಗುವ ಆಹಾರ ಪದಾರ್ಥಗಳಿಗೆ ಲೆಕ್ಕವಿಲ್ಲ. ದೊಡ್ಡ ದೊಡ್ಡ ಹೊಟೇಲ್‌ಗ‌ಳ ಕಥೆಗಳೂ ದೊಡ್ಡದೇ. ಬಫೆಗಳ ಲೆಕ್ಕದಲ್ಲಿ ನಡೆಯುವ ಆಹಾರ ವ್ಯರ್ಥದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಈ ಹಿನ್ನೆಲೆಯಲ್ಲೇ ಗ್ರಾಹಕರಿಗೆ ಬೇಕಾದಷ್ಟನ್ನೇ ಕೊಡಿ ಎನ್ನುವ ಅಭಿಧಿಪ್ರಾಯವನ್ನು ಪ್ರಧಾನಿ ಹೇಳಿದ್ದಾರೆ. ಇದು ನಮ್ಮ ರಾಷ್ಟ್ರದ ಸಂದರ್ಭದಲ್ಲಿ ಸೂಕ್ತವಾದುದೇ. ಪ್ರಧಾನಿ, ರಾಷ್ಟ್ರಪತಿಯಂಥವರು ಇಂಥದ್ದರ ಬಗ್ಗೆ ಚರ್ಚೆ ಆರಂಭಿಸಿರುವುದೇ ಒಂದು ಕೌತುಕದ ಸಂಗತಿ. ಯಾಕೆಂದರೆ, ನಮ್ಮನ್ನಾಳುವವರು ಬಹುತೇಕ ವರ್ಷಗಳನ್ನು ಪರಸ್ಪರ ಟೀಕಿಸುವುದರಲ್ಲೋ ಮತ್ಯಾವುದೋ ರಾಜಕೀಯ ಕ್ಷುಲ್ಲಕ ಜಗಳದಲ್ಲೋ ಹೇಳಿಕೆಗಳ ವರ್ಗಾವಣೆಯಲ್ಲೋ ಮುಳುಗಿದ್ದೇ ಹೆಚ್ಚು.

ಪ್ರಧಾನಿಯವರ ಅಭಿಪ್ರಾಯವನ್ನು ಟ್ವಿಟ್ಟರ್‌ಗಳಲ್ಲಿ ಬಹಳಷ್ಟು ಮಂದಿ ಚರ್ಚಿಸಿದ್ದಾರೆ. ಒಬ್ಬರಂತೂ ಸರಕಾರವನ್ನು ಗೇಲಿ ಮಾಡಿದರೆ, ಮತ್ತೂಬ್ಬರು ಅತಿಯಾದ ಆತ್ಮವಿಶ್ವಾಸದಿಂದ ಎನ್‌ಡಿಎ ಸರಕಾರ ಏನೇನೋ ಮಾಡಲಿಕ್ಕೆ ಹೊರಟಿದೆ ಎಂದೆಲ್ಲ ಹೇಳಿದ್ದರು. ಇನ್ನು ಕೆಲವರು ಪ್ರಧಾನಿಯವರ ಅಭಿಪ್ರಾಯ ಸರಿ ಎಂದು ಹೇಳಿದ್ದಾರೆ. ಇಲ್ಲಿ ಪ್ರಧಾನಿಯವರನ್ನೇನು ಬೆಂಬಲಿಸುತ್ತಿಲ್ಲ. ಆದರೆ ನಮ್ಮ ಸಮಾಜದ ದೃಷ್ಟಿಯಿಂದ ಇದೊಂದು ಒಳ್ಳೆಯ ಉಪಕ್ರಮವಲ್ಲವೇ ಎಂಬುದು ಇನ್ನಷ್ಟು ಚರ್ಚೆಗೆ ಒಳಗಾಗಬೇಕಿದೆ.

ಪರಿಸ್ಥಿತಿ ಏನಿದೆ?
ಪ್ರಸ್ತುತ ನಮ್ಮ ನಗರಗಳಲ್ಲಿರುವ ಹೊಟೇಲ್‌ಗ‌ಳಲ್ಲಿನ ಸ್ಥಿತಿಯನ್ನು ನೋಡಿದ್ದೇವೆಯೇ? ಒಂದು ವೇಳೆ ಇಲ್ಲವಾದರೆ ಒಮ್ಮೆ ನೋಡುವುದು ಸೂಕ್ತ. ಹಲವು ಹೊಟೇಲ್‌ಗ‌ಳಲ್ಲಿ ಆಹಾರ ನಿರ್ವಹಣೆ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ದಿನದ ನಿರ್ವಹಣೆ ಪದ್ಧತಿ ಚಾಲ್ತಿಯಲ್ಲಿರುವುದರಿಂದ ಮಾಡಿದ ಆಹಾರ ವ್ಯರ್ಥವಾಗುವುದು ಕಡಿಮೆ. ಒಂದು ವಾರದಲ್ಲಿ ಸ್ಥಳೀಯ ಗ್ರಾಹಕರು ಮತ್ತು ಅವರ ಮನೋಭಾವವನ್ನು ಅರ್ಥೈಸಿಕೊಳ್ಳುವ ಹೊಟೇಲಿಗರು, ಅಲ್ಲಿಗೆ ತಕ್ಕಂತೆ ತಮ್ಮ ಸಿದ್ಧತೆಯನ್ನೂ ಪುನರ್ರೂಪಿಸಿಕೊಳ್ಳುತ್ತಾರೆ. ಹಾಗಾಗಿಯೇ ಅವರದೇನಿದ್ದರೂ ನಿತ್ಯದ ನಿರ್ವಹಣೆಯ ಯೋಜನೆ.

Advertisement

ಪ್ರಸ್ತುತ ಹಲವು ಸೇವಾ ಸಂಸ್ಥೆಗಳೂ ಹೊಟೇಲ್‌ಗ‌ಳಲ್ಲಿ ಉಳಿಯುವ ಅಪಾರ ಪ್ರಮಾಣದ ಆಹಾರವನ್ನು ಪಡೆದು ಬಡವರಿಗೆ, ನಿರ್ಗತಿಕರಿಗೆ ಹಂಚುತ್ತಿವೆ. ಆ ಮೂಲಕ ಆಹಾರ ತಿಪ್ಪೆಗುಂಡಿಯನ್ನು ಸೇರುವುದನ್ನು ತಡೆಯುತ್ತಿವೆ. ಇದಕ್ಕೆ ಒಂದು ಬಗೆಯಲ್ಲಿ ನಾವು ಋಣಿಯಾಗಿರಲೇಬೇಕು. ಈ ಮೂಲಕ ಅಡುಗೆ ಮನೆಯಲ್ಲಿ ವ್ಯರ್ಥವಾಗುವ ಆಹಾರವನ್ನು ತಡೆಯಲಾಗುತ್ತಿದೆ. ಆದರೆ ಕಾಳಜಿ ವ್ಯಕ್ತವಾಗಿರುವುದು ನಮ್ಮ ಟೇಬಲ್‌ನಲ್ಲಿ ವ್ಯರ್ಥವಾಗುವ ಆಹಾರದ ಬಗ್ಗೆ.

ಅದೇನು ಮಹಾ ಎಂದು ಮೂಗು ಮುರಿಯಬೇಕಾಗಿಲ್ಲ. ಸಣ್ಣದೊಂದು ಉದಾಹರಣೆಯಿದು. ಒಬ್ಬ ಹೊಟೇಲ್‌ನವರೊಂದಿಗೆ ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ ವಿಷಯವನ್ನೇ ಪ್ರಸ್ತಾಪಿಸಿದೆ. ಅದಕ್ಕೆ ಅವರು, ‘ಒಳ್ಳೆಯದೇ. ವೇಸ್ಟ್‌ ಆಗಬಾರದು. ಆದರೆ ನಾವು ಗ್ರಾಹಕರಿಗೆ ಸ್ವಲ್ಪ ಕಡಿಮೆ ಕೊಟ್ಟರೆ ಅವರು ಬೇರೆ ರೀತಿಯೇ ನೋಡುತ್ತಾರೆ. ಒಂದುವೇಳೆ ಜಾಸ್ತಿ ಕೊಟ್ಟರೆ ವೇಸ್ಟ್‌ ಮಾಡುತ್ತಾರೆ’ ಎನ್ನುತ್ತಾರೆ. ಅದನ್ನು ವಿಸ್ತರಿಸುತ್ತಾ, ನಾವು ಅರ್ಧ ಕಪ್‌ ಕೊಟ್ಟರೆ ಮತ್ತೆ ಅರ್ಧ ಕಪ್‌ ಚಟ್ನಿಗೆ ಮತ್ತೂಮ್ಮೆ ಕೆಲಸ ಮಾಡಬೇಕು ಎಂಬುದು ಮತ್ತೂಬ್ಬರ ಅನಿಸಿಕೆ. ಇದು ನಿತ್ಯದ ಕೆಲಸದಲ್ಲಿ ಇರುವ ಅಡಚಣೆಗಳು. ಎಲ್ಲವೂ ಊಹಾತ್ಮಕ ನೆಲೆಯಲ್ಲೇ ನಡೆಯುತ್ತಿರುವಂಥದ್ದು.

ಒಂದು ದೋಸೆಯೆಂಬ ಸ್ವರಕ್ಕೆ ಎಷ್ಟು ವ್ಯಂಜನ?
ಯಾಕೆ ಈ ಪ್ರಶ್ನೆ ಪ್ರಸ್ತಾಪಿಸಿದನೆಂದರೆ, ಬೆಂಗಳೂರಿನಲ್ಲಿ ಯಾವುದೇ ಒಂದು ಹೊಟೇಲ್‌ಗೆ ಹೋಗಿ ದೋಸೆ ತೆಗೆದುಕೊಳ್ಳಿ. ಅದಕ್ಕೆ ಕೊಡುವ ವ್ಯಂಜನ (ಸೈಡ್ಸ್‌)ಗಳೆಷ್ಟು? ಕನಿಷ್ಠ ಮೂರು, ಕೆಲವು ಕಡೆ ನಾಲ್ಕು. ತೆಂಗಿನಕಾಯಿ ಚಟ್ನಿ (ಬಿಳಿ), ಸಾಂಬಾರ್‌, ಕೆಂಪು ಚಟ್ನಿ. ಒಮ್ಮೊಮ್ಮೆ ಚಟ್ನಿಪುಡಿಯೂ ಸೇರುವುದುಂಟು. ಇದರಲ್ಲಿ ಯಾವ ವ್ಯಂಜನವೂ ಪೂರ್ತಿಯಾಗಿ ಖಾಲಿಯಾಗುವುದಿಲ್ಲ. ಸುಮಾರು ಹದಿನೈದು ನಿಮಿಷಗಳ ಕಾಲ ನಡೆಸಿದ ಸಮೀಕ್ಷೆಯ ವಿವರವಿದು. ಬೆಂಗಳೂರಿನ ಒಂದು ಜನಪ್ರಿಯ ಹೊಟೇಲ್‌ನ ಸೆಲ್ಫ್ ಸರ್ವೀಸ್‌ ವಿಭಾಗ. ಹದಿನೈದು ನಿಮಿಷದ ಕಾಲಾವಧಿಯಲ್ಲಿ ಹತ್ತು ಮಂದಿ ದೋಸೆ ತೆಗೆದುಕೊಳ್ಳುತ್ತಾರೆ. ಎಲ್ಲರಿಗೂ ಚಟ್ನಿ ಮತ್ತು ಸಾಂಬಾರ್‌ ನೀಡಲಾಗುತ್ತದೆ. ಆ ಪೈಕಿ ಮೂರು ಮಂದಿ ಚಟ್ನಿಯನ್ನು ಮತ್ತೂಮ್ಮೆ ಪಡೆದು, ಅರ್ಧ ಕಪ್‌ ಸಾಂಬಾರ್‌ ಬಿಡುತ್ತಾರೆ. ಉಳಿದ ಏಳರಲ್ಲಿ ಮೂವರು ಮಂದಿ ಎರಡನ್ನೂ ಅರ್ಧ ಕಪ್‌ ಬಳಸುತ್ತಾರೆ. ಕೊನೆಯ ನಾಲ್ಕು ಮಂದಿಯಲ್ಲಿ ಇಬ್ಬರು ಸಾಂಬಾರ್‌ನ್ನು ಬರೀ ರುಚಿಗೆಂದು ಬಳಸಿದರೆ, ಮತ್ತಿಬ್ಬರು ಚಟ್ನಿಯನ್ನು ವಾಪಸ್‌ ಮಾಡಿ ಮತ್ತೂಂದು ಕಪ್‌ ಸಾಂಬಾರ್‌ ಪಡೆಯುತ್ತಾರೆ. ಇದರಲ್ಲಿ ವ್ಯರ್ಥವಾಗುವ ಆಹಾರ ಸಂಪನ್ಮೂಲಗಳನ್ನು ಲೆಕ್ಕ ಹಾಕಿ. ಇದು ಸಾಂಬಾರ್‌ ಕುರಿತಾಗಿಯಷ್ಟೇ ಹೇಳುತ್ತಿಲ್ಲ. ಇದೇ ರೀತಿಯಲ್ಲಿ ಇತರೆ ತಿಂಡಿ ತಿನಿಸುಗಳೂ ತಿಪ್ಪೆಗುಂಡಿಗೆ ಸೇರುತ್ತಿವೆ. ಇದರ ಬಗ್ಗೆಯೇ ಪ್ರಧಾನಿಯವರು ಪ್ರಸ್ತಾಪಿಸಿರುವುದು. ಈ ವ್ಯಂಜನಗಳ ಬಗೆ ಕುರಿತು ಮತ್ತು ಅವುಗಳು ಬಂದ ಬಗೆ ಕುರಿತು ಬೇರೆ ಲೇಖನದಲ್ಲಿ ಪ್ರಸ್ತಾಪಿಸುವುದು ಒಳಿತು. ಯಾಕೆಂದರೆ ಆ ಮೂಲಕ ನಾವು ಮತ್ತಷ್ಟು ಸೂಕ್ಷ್ಮಜ್ಞರಾಗಲು ಅವಕಾಶವಿದೆ. 

ಇದು ಮ್ಯಾಕ್ಸಿಮಮ್‌ ಪ್ರಪಂಚ!
ಜಾಗತೀಕರಣದ ಗಾಳಿ ವ್ಯಾಪಿಸುತ್ತಿದ್ದಾಗ ನಮ್ಮ ಬುದ್ಧಿಜೀವಿಗಳು, ಪರಿಣತರೆಲ್ಲ ಅದರ ಆರ್ಥಿಕ ದುಷ್ಪರಿಣಾಮಗಳ ಬಗ್ಗೆ ಬಹಳ ಮಾತುಗಳನ್ನಾಡಿದರು. ಅದರಿಂದ ಹೋಗಬಹುದಾದ ಉದ್ಯೋಗಾವಕಾಶ ಇತ್ಯಾದಿ ಬಗ್ಗೆಯೇ ಹೆಚ್ಚು ಚರ್ಚಿಸಿದೆವು. ವಾಸ್ತವವಾಗಿ ನಡೆಯಬೇಕಾಗಿದ್ದ ಚರ್ಚೆಯೆಂದರೆ, ಅಮೆರಿಕದ ಕನ್ಸೂಮರಿಸಂ ಬಗ್ಗೆ, ಕೊಳ್ಳುಬಾಕತನದ ಪ್ರವೃತ್ತಿಯ ಬಗ್ಗೆ. ಆದರೆ ಅದಾಗಿದ್ದು ಕಡಿಮೆ. ಎಲ್ಲೋ ಕೆಲವರು ತಮ್ಮ ದೂರದೃಷ್ಟಿಯಿಂದ ಪರಿಣಾಮದ ಕುರಿತು ಉಲ್ಲೇಖೀಸಿದ್ದರು. ಅದು ಕಿವಿಯೊಳಗೆ ಹೋಗಿ ಮನಸ್ಸಿಗೆ ಮುಟ್ಟಿದ್ದೇ ಕಡಿಮೆ.

ಆ ಕೊಳ್ಳುಬಾಕತನದ ಬಗೆಗಿನ ಪರಿಣಾಮವೇ ಇವತ್ತು ನಮ್ಮ ಹೊಟೇಲ್‌ಗ‌ಳ ಟೇಬಲ್‌ಗ‌ಳ ಮೇಲೆ ಸೃಷ್ಟಿಯಾಗುತ್ತಿರುವುದು. ವ್ಯಾಪಾರೀ ಧೋರಣೆಯ ನೆಲೆಯಲ್ಲಿ ಸಂಪನ್ಮೂಲಗಳು ವ್ಯರ್ಥವಾಗುವುದರ ಬಗ್ಗೆ ಅಮೆರಿಕನ್ನರೂ ಸೇರಿದಂತೆ ಪಾಶ್ಚಾತ್ಯ ಜಗತ್ತಿನ ಹಲವು ರಾಷ್ಟ್ರಗಳು ಆಗ ತಲೆಕೆಡಿಸಿಕೊಳ್ಳಲಿಲ್ಲ. ಈಗ ಸಂಪನ್ಮೂಲಗಳ ಕೊರತೆ ಸೃಷ್ಟಿಯಾಗುತ್ತಿರುವಾಗ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿದೆ. ಈ ಜಾಗತೀಕರಣದ ನೆಲೆಯಲ್ಲೇ ಬಂದಿರುವ ಕನ್ಸೂಮರಿಸಂನ ಗುಣ ನಮ್ಮ ಹೊಟೇಲ್‌ನ ಮೆನು ಪಟ್ಟಿಯಲ್ಲಿದೆ. ಹಾಗಾಗಿಯೇ, ನಿಮ್ಮ ಅಗತ್ಯಕ್ಕಿಂತ ನಮಗೆ ಖರ್ಚಾಗುವುದೆಷ್ಟೋ ಅಷ್ಟಕ್ಕೆ ಲೆಕ್ಕ ಹಾಕುತ್ತೇವೆ ಎಂಬುದು ಅಲ್ಲಿನವರ ಧೋರಣೆ. ಅದೇ ನಮ್ಮಲ್ಲೂ ಬರುತ್ತಿರುವುದು. 

ಹಾಗಾಗಿ ನಮಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಕೇಳುವ, ‘ಒಬ್ಬ ವ್ಯಕ್ತಿಗೆ ಎರಡು ಇಡ್ಲಿ ಸಾಕಾದರೆ, ನೀವೇಕೆ ನಾಲ್ಕು ಇಡ್ಲಿ ಕೊಡುತ್ತೀರಿ?‘ ಎಂಬ ಪ್ರಶ್ನೆ ಅರ್ಥವಾಗುವುದಿಲ್ಲ. ನಮಗೆ ಒಂದು ಪನ್ನೀರ್‌ ಬಟರ್‌ ಮಸಾಲ ಮಾಡಲು 70 ರೂ. ಖರ್ಚಾಗುತ್ತದೆ ಅಂದುಕೊಳ್ಳಿ. ಆದರೆ ವ್ಯಕ್ತಿಯೊಬ್ಬನಿಗೆ ಎರಡು ರೊಟ್ಟಿ (ರೋಟಿ) ತಿನ್ನಲಿಕ್ಕೆ ಅರ್ಧ ಪನ್ನೀರ್‌ ಬಟರ್‌ ಮಸಾಲಾ ಸಾಕಾಗಬಹುದು. ಆದರೆ ಹೊಟೇಲ್‌ನಲ್ಲಿ ಒಂದು ಪನ್ನೀರ್‌ ಬಟರ್‌ ಮಸಾಲವನ್ನು ನೂರು ರೂ. ಕೊಟ್ಟು ಪಡೆಯಬೇಕು. ಅರ್ಧ ಪ್ರಮಾಣದ ವ್ಯಂಜನವನ್ನು ಎಸೆಯುತ್ತಾನೋ, ಕಟ್ಟಿಕೊಂಡು ಹೋಗುತ್ತಾನೋ ನನಗೆ ಸಂಬಂಧವಿಲ್ಲ ಎಂದು ಕುಳಿತುಕೊಂಡು ಬಿಡುತ್ತೇವೆ. ಇದು ಮ್ಯಾಕ್ಸಿಮಮ್‌ ಪ್ರಪಂಚದ ಲೆಕ್ಕಾಚಾರ. ಇದರ ಬಗ್ಗೆಯೇ ಈಗ ಚರ್ಚೆ ಆರಂಭವಾಗಿರುವುದು, ಎಲ್ಲರೂ ಪಾಲ್ಗೊಳ್ಳುವಂಥ ಚರ್ಚೆಯೇ ಇದು.

– ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next