ಎಚ್.ಡಿ.ಕೋಟೆ: ತಾಲೂಕು ಕೇಂದ್ರ ಸ್ಥಾನದ ಸಾರ್ವಜನಿಕ ಆಸ್ಪತ್ರೆ ದುರಸ್ತಿ ಕಾರ್ಯ ಆಮೆಗತಿ ಯಲ್ಲಿ ಸಾಗುತ್ತಿದ್ದು, 2 ಕೋಟಿ ರೂ. ಅಂದಾಜು ವೆಚ್ಚದ ದುರಸ್ತಿ ಕಾಮಗಾರಿ ಪ್ರಾರಂಭವಾಗಿ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಎಚ್.ಡಿ.ಕೋಟೆ ತೀರ ಹಿಂದುಳಿದ ತಾಲೂಕು. ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಈ ತಾಲುಕು ವಿಸ್ತೀರ್ಣದಲ್ಲಿ 3 ಪಟ್ಟು ದೊಡ್ಡದಾಗಿದೆ. ಅಂದರೆ 1700 ಚ.ಕಿ ವ್ಯಾಪ್ತಿ ಒಳಗೊಂಡಿದೆ. ಇಂತಹ ತಾಲೂಕಿಗೆ ಸಮರ್ಪಕ ಆರೋಗ್ಯ ಸೇವೆ ನೀಡಬೇಕಿದ್ದ ಸಾರ್ವಜನಿಕ ಆಸ್ಪತ್ರೆಯನ್ನು ಶೀಘ್ರದುರಸ್ತಿಪಡಿಸುವ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ತಾಲೂಕಿನ ಜನತೆಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ.
ಮೈಸೂರು ಮತ್ತಿತರ ನಗರಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿನ ಆರೋಗ್ಯ ಸೇವೆ ಗಳನ್ನು ತಾಯಿ ಮಗುವಿನ ಆಸ್ಪತ್ರೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. 100 ಹಾಸಿಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಬಹುತೇಕ ಭಾಗ ಶಿಥಿಲಾವಸ್ಥೆ ತಲುಪಿದ್ದರಿಂದ ದುರಸ್ತಿಪಡಿಸಲು 2 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಆರೋಗ್ಯ ಇಲಾಖೆಯ ಎಂಜಿಯರ್‌ಗಳಿಂದಲೇ ಟೆಂಡರ್ ಆಹ್ವಾನಿಸಿತ್ತೆಂದು ತಿಳಿದು ಬಂದಿದೆ.
ಟೆಂಡರ್ ತಮ್ಮದಾಗಿಸಿಕೊಂಡ ಗುತ್ತಿಗೆದಾರ ಇಂಜಿನಿಯರ್, ಕಳೆದ 1 ವರ್ಷದ ಹಿಂದೆ ಆಸ್ಪತ್ರೆ ದುರಸ್ತಿ ಕಾರ್ಯ ಆರಂಭಿಸಿ, ಮೂರು ತಿಂಗಳಲ್ಲಿ ಪೂರ್ಣ ಗೊಳಿಸುವ ಭರವಸೆ ನೀಡಿದ್ದರು. ವರ್ಷವೇ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣಗಳು ಕೂಡ ಕಂಡು ಬರುತ್ತಿಲ್ಲ. ಬೆರಳೆಣಿಕೆಯಷ್ಟು ಮಂದಿ ಕಾರ್ಮಿಕರು ಮಾತ್ರ ಸಾರ್ವಜನಿಕ ಆಸ್ಪತ್ರೆ ದುರಸ್ತಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದು ಕಾಮಗಾರಿ ವಳಂಬಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಇದನ್ನೂ ಓದಿ:ಹೊಸ ಪಕ್ಷಿಗಳಿರುವ ಜಾಗದಲ್ಲಿ ಮತ್ತಷ್ಟು ಸಮೀಕ್ಷೆ
ಟೆಂಡರ್ ನಿಯಮದಂತೆ ಕಾಮಗಾರಿ ಪೂರ್ಣ ಗೊಳ್ಳಬೇಕಾದ ಅವಧಿ ಮುಗಿದು 8-9ತಿಂಗಳು ಗಳೇ ಕಳೆದಿವೆ. ಮತ್ತೆ ಟೆಂಡರ್ ಅವಧಿ ವಿಸ್ತರಿಸಿ ಕೊಂಡು ಆಮೆವೇಗದ ಕಾಮಗಾರಿ ನಡೆಸಲಾಗು ತ್ತಿದೆ. ಸಂಬಂಧ ಪಟ್ಟ ಮೇಲಧಿಕಾರಿಗಳು ಸ್ಥಳೀಯ ಶಾಸಕರು ಕೂಡಲೇ ಇತ್ತ ಗಮನ ಹರಿಸಿ ಸಾರ್ವ ಜನಿಕ ಆಸ್ಪತ್ರೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಬೇಕಿದೆ. ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಬಹುತೇಕ ಮಂದಿ ಬಡಜನರೇ ಆಗಿದ್ದಾರೆ. ಆಸ್ಪತ್ರೆ ದುರಸ್ತಿ ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಪಳನಿಸ್ವಾಮಿ ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.
ಎಚ್.ಬಿ.ಬಸವರಾಜು