ರಾಯಚೂರು: ಕಳೆದ ಬಜೆಟ್‌ನಲ್ಲಿ ಸಿಎಂಬಿ.ಎಸ್. ಯಡಿಯೂರಪ್ಪ ಘೋಷಿಸಿದ ಯೋಜನೆಗಳಿಗೆ ಅನುದಾನ ಸಿಗದೆ ಇನ್ನೂ ಕಾಮಗಾರಿಗಳು ಆರಂಭವಾಗಿಲ್ಲ. ಆದರೆ, ಈ ಬಾರಿ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸರ್ಕಾರ ಜಿಲ್ಲೆಗೆ ಎಷ್ಟರ ಮಟ್ಟಿಗೆ ಕೊಡುಗೆ ನೀಡುವುದೋ ನೋಡಬೇಕಿದೆ. ಪ್ರತಿ ವರ್ಷ ರಾಜ್ಯ ಸರ್ಕಾರದ ಬಜೆಟ್ ಮೇಲೆ ಜಿಲ್ಲೆಗೆ ವಿಶೇಷ ನಿರೀಕ್ಷೆಗಳಿರುತ್ತವೆ. ಅದರಲ್ಲಿ ಒಂದಷ್ಟು ಬೇಡಿಕೆ ಬಿಟ್ಟರೆ ಬಹುತೇಕ ನಿರೀಕ್ಷೆಗಳು ಹುಸಿಯಾಗುತ್ತವೆ. ಅಂಥದ್ದರಲ್ಲಿ ಈ ಬಾರಿ ಸರ್ಕಾರವೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಯಾವ ಭಾಗಕ್ಕೆ ಏನು ಕೊಡುಗೆ ಸಿಗುವುದೋ ಎಂಬ ಕಾತರ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮಂತ್ರ ಜಪಿಸುವ ಮುಖ್ಯಮಂತ್ರಿ ಕಳೆದ ಬಾರಿ ಹೇಳಿಕೊಳ್ಳುವಂಥ ಕೊಡುಗೆ ನೀಡಿರಲಿಲ್ಲ. ಈ ಬಾರಿಯಾದರೂ ಕೊಡುಗೆ ನೀಡಿ ಜಿಲ್ಲೆಯ ಜನರನ್ನು ಸಮಾಧಾನಪಡಿಸಬೇಕಿದೆ.
ಕಳೆದ ಬಾರಿ ಏನು ಸಿಕ್ಕಿತ್ತು?: ಹಿಂದಿನ ಬಜೆಟ್‌ನಲ್ಲಿ ಜಿಲ್ಲೆಗೆ ಒಂದು ಯೋಜನೆ ಬಿಟ್ಟರೆ ಹೇಳಿಕೊಳ್ಳುವಂಥ ಯಾವ ಕೊಡುಗೆ ಸಿಕ್ಕಿರಲಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ ಹೆಚ್ಚಿಸುವ ಬೇಡಿಕೆಗೂ ಸ್ಪಂದನೆ ಸಿಕ್ಕಿರಲಿಲ್ಲ. ತಿಂಥಿಣಿ ಬಳಿ ಕೃಷ್ಣಾ ನದಿಗೆ ಕಿರು ಜಲಾಶಯ ನಿರ್ಮಿಸುವುದಾಗಿ ತಿಳಿಸಿದ್ದರು. ಆದರೆ, ಈವರೆಗೂ ಯೋಜನೆ ಆರಂಭವಾಗಿಲ್ಲ. ನವಲಿ ಜಲಾಶಯದ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಗೊಳಿಸಲು 20 ಕೋಟಿ ರೂ. ನೀಡಿದ್ದರು. ಮಂತ್ರಾಲಯ, ಶ್ರೀಶೈಲದಲ್ಲಿ ಪ್ರವಾಸಿ ಮಂದಿರ ಘೋಷಣೆ ಕೂಡ ನನೆಗುದಿಗೆ ಬಿದ್ದಿವೆ. ಶಾಖೋತ್ಪನ್ನ ಕೇಂದ್ರಗಳ ವಾಯು ಮಾಲಿನ್ಯ ತಡೆಯಲು 500 ಕೋಟಿ ರೂ. ವೆಚ್ಚದಲ್ಲಿ ಎಫ್‌ಜಿಡಿ ಅಳವಡಿಸಲು ನಿರ್ಧರಿಸಲಾಗಿತ್ತು. ಆದರೆ, ಲಾಕ್‌ಡೌನ್ ಕಾರಣಕ್ಕೆ ವಿದ್ಯುತ್ ಬೇಡಿಕೆ ಕುಗ್ಗಿ ಬಹುತೇಕ ಇಡೀ ವರ್ಷ ಈ ಘಟಕಗಳು ನಿಂತು ಹೋದ ಕಾರಣ ಅದು ಕೂಡ ಕಾರ್ಯಗತಗೊಂಡಿಲ್ಲ.
ವಿವಿಗಳಿಗೆ ವಿಶೇಷ ಅನುದಾನ
ರಾಯಚೂರಿನಲ್ಲಿ ಕೃಷಿ ವಿವಿ ಜತೆಗೆ ಈಗ ಪ್ರತ್ಯೇಕ ವಿವಿ ಕೂಡ ಕಾರ್ಯಾರಂಭಿಸಿದೆ. ಪ್ರತ್ಯೇಕ ವಿವಿ ಅನುಷ್ಠಾನಕ್ಕೆ ಅನುದಾನದ ಅಗತ್ಯವಿದ್ದು, ಕನಿಷ್ಠ 100 ಕೋಟಿ ರೂ. ನಿರೀಕ್ಷೆಯಿದೆ. ಅದರ ಜತೆಗೆ ಕೃಷಿ ವಿವಿ ಹೆಚ್ಚಿನ ಸಂಶೋಧನೆಗೂ ಅನುದಾನ ನಿರೀಕ್ಷೆ ಇದೆ. ಹೊಸ ತಾಲೂಕುಗಳಿಗೆ ಸೂಕ್ತ ಸೌಲಭ್ಯ, ನಗರಕ್ಕೆ ರಿಂಗ್ ರಸ್ತೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತು ನೀಡಬೇಕಿದೆ.
ಸಿದ್ಧಯ್ಯಸ್ವಾಮಿ ಕುಕುನೂರು