Advertisement
ಆಟದ ಮೈದಾನವೇ ಪ್ರಪಂಚವಾಗಿದ್ದ ಬಾಲ್ಯದ ದಿನವದು. ದಿನಪೂರ್ತಿ ನಿನ್ನೊಂದಿಗೆ ಆಟ ಆಡುತ್ತಾ, ಹಾಡುತ್ತಾ, ಎದ್ದು ಬಿದ್ದು ಓಡುತ್ತಾ ಜಿಗಿಯುತ್ತಾ ಇರಬೇಕೆಂದು ಬಯಸಿದ್ದರೂ, ನನ್ನ ಆಸೆ ಮುಂಜಾವಿನ ಮಂಜಿನಂತೆ ಮಾಸಿದ್ದು ನಿಜ. ಹೆತ್ತವರ ಮಾತಿಗೆ ಕಟ್ಟುಬಿದ್ದು ನಿನ್ನ ಬಿಟ್ಟು ಹೊರಡಲೇ ಬೇಕಾದ ಅನಿವಾರ್ಯತೆಯ ನಡುವೆಯು ನಿನ್ನ ಹೆಸರ ಆ ಮೈಲುಗಲ್ಲಿನ ಮೇಲೆ ಶಾಸನದಂತೆ ಕೆತ್ತಿರುವುದು ನಿನಗೆ ತಿಳಿದಿಲ್ಲವೇ? ನನ್ನ ಪ್ರೀತಿಪಾತ್ರರಿಗೆ ನಿನ್ನೋಂದಿಗೆ ಇರುವುದು ಹಿಡಿಸಲಿಲ್ಲ . ಸಿರಿವಂತಿಗೆಗಾಗಿ ಊರು ತೊರೆದರು, ಅವರೊಂದಿಗೆ ನಾನು ಕೂಡ ! ಆದರೆ ಅವರಿಗೇನು ಗೊತ್ತು ನಮ್ಮಿಬ್ಬರ ಪ್ರೀತಿಯಲಿ ಬಡತನವಿಲ್ಲವೆಂದು ನಿನ್ನಲ್ಲಿದ್ದ ಸಿರಿತನವನ್ನು ಗುರುತಿಸಲು, ಜಗತ್ತಿನ ಐಚ್ಛಿಕ ವಸ್ತುಗಳಲ್ಲಿದ್ದ ವ್ಯಾಮೋಹ ಅವರನ್ನು ಕುರುಡಾಗಿ ಮಾಡಿತ್ತು. ಆದರೆ ನಾನು ನಿನ್ನ ತೊರೆದ ಆ ಕ್ಷಣಗಳಿಂದ ಈವರೆಗೂ ಜೀವನದ ಅಮೂಲ್ಯವಾದುದನ್ನು ಕಳೆದುಕೊಂಡಂತೆ ಬದುಕಿದೆ. ಆದರೆ ಅಲ್ಲಿ ನೆಮ್ಮದಿಯ ಹೊರತಾಗಿ ನನಗೆ ಎಲ್ಲವೂ ದೊರಕಿತ್ತು,. ಜೀವನದ ಕೆಲವೊಂದು ಅಪೂರ್ವ ಕ್ಷಣಗಳನ್ನು ಆನಂದಿಸಿದೆ ಆಸ್ವಾದಿಸಿದೆ, ಜೀವನದ ಸಾರ್ಥಕತೆಯಲ್ಲೊಂದಿಗೆ ಅಲ್ಪ ನಿರಾರ್ಥಕತೆಯ ಭಾವ ನನ್ನನ್ನುಬಿಟ್ಟು ಹೋಗಲಿಲ್ಲ.
Related Articles
Advertisement
ಅಂದು ನಿನ್ನ ಹೆಸರ ಕೆತ್ತಿರುವ ನವೀರಾದ ಈ ಕಲ್ಲು ಬಿರುಕು ಮೂಡಿದೆ. ನಿನ್ನ ಹೆಸರು ಮಾಸುತ್ತಿದೆ. ಹಳ್ಳಿಗಳು ಬಿಕೋ ಅನ್ನುತ್ತಿದೆ. ಕಣ್ತುಂಬಿಸಿಕೊಳ್ಳೊ ನಿನ್ನ ಸೌಂದರ್ಯ ಮರೆಯಾಗಿದೆ. ದಣಿದಿರುವ ಈ ಜೀವಕ್ಕೆ ಆ ತೊರೆಯ ಒಂದು ಹನಿಯು ಆಯಾಸ ನೀಗಿಸುವಂತೆ ಕಾಣುತ್ತಿಲ್ಲ. ಅಂದು ನಿನ್ನ ಬಿಟ್ಟೋಗುವಾಗ ಅದು ವಸಂತ ಋತುವಿನಲ್ಲಿ ನಿನ್ನ ಚೆಲುವಿಗೆ ಚಂದಿರನೇ ನಾಚಿಕೊಳ್ಳುವಂತೆ ಭಾಸವಾಗುತ್ತಿತ್ತು ಎಂದು ಹೇಳಿದ ಮಾತು ಹುಸಿಯಾಗುತ್ತಿದೆಯೇ..? ಇಲ್ಲ…! ಎಂದಿಗೂ ಹಾಗಾಗದು ಇದಕ್ಕೆ ಕಾರಣ ನಾವೇ, ನಿನ್ನ ತಪ್ಪೆನಿಲ್ಲ. ನಮಗೆ ಬೇಕಿರುವುದು ಅಭಿವೃದ್ಧಿ, ಆ ಹೆಸರಲ್ಲಿ ಬೆಳೆದು ನಿಂತ ಕೈಗಾರಿಕೆಗಳು, ಅದರಿಂದ ಹೊರಬರುವ ವಿಷಾನಿಲ, ನಿನ್ನ ಈ ಸ್ಥಿತಿಗೆ ನಾವೇ ಕಾರಣವೆಂದು ತಲೆಬಾಗುವೆ. ಫಲವತ್ತತೆಯ ಭೂಮಿ ಬರಡಗುತ್ತಾ ನಿನ್ನ ಸೌಂದರ್ಯ ಕಳೆಗುಂದಿದೆ. ಮುಂಜಾವಿನ ಮಂಜಿನಲಿ ದುಂಬಿಯು ಹೂವಿನ ಮಕರಂದ ಹೀರಲು ಹವಣಿಸಿ ವಿಫಲವಾದಂತೆ, ನಿನ್ನ ಸೌಂದರ್ಯವ ಸವಿಯುವಲ್ಲಿ ನಾ ಅನರ್ಹನಾದೆ. ಗತಕಾಲದ ವೈಭವವು ಉಳಿದಿರುವುದು ಬರೀ ನನ್ನ ಕ್ಯಾಮರಾ ಕಣ್ಣುಗಳಲ್ಲಿ…!
ಓದಿ : ದೆಹಲಿ v/s ಕೇಂದ್ರ : ದೆಹಲಿಯ ಚುನಾಯಿತ ಸರ್ಕಾರದ ಬಗ್ಗೆ ಕೇಂದ್ರದ ನಿಲುವೇನು..?
ಆ ಮೈಲಿಗಲ್ಲಿನ ಮೇಲಿರುವ “ನಿಸರ್ಗ” ಎಂಬ ಹೆಸರಲಿ ನಿಶ್ಕಲ್ಮಶವಿದ್ದರೂ ಅನ್ವರ್ಥ ಬದಲಾಗಿದೆ. ನಿನ್ನ ಹಸಿರು ಉಡುಗೆಯ ಬಣ್ಣ ಮಾಸುತ್ತಿದೆ. ಬಿಸಿನೀರಿನ ವಿಷಜಲವು ನಿನ್ನ ಪಾದ ತೊಳೆಯುತ್ತಿವೆ. ನಿನ್ನ ಕರುಣೆಯ ಕುಡಿಗಳು ಅಭಿವೃದ್ಧಿಯ ಮುಖವಾಡ ಹೊತ್ತು ಸೃಷ್ಟಿಯನ್ನೇ ತಲೆಕೆಳಗೆ ಮಾಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಮಾನವೀಯತೆಯೆಂದು ತಳಮಳದಿಂದ ನಿನ್ನ ಹೃದಯ ಪ್ರಶ್ನಿಸುತ್ತಿದ್ದರೂ, ಕಾಲಚಕ್ರದೊಳಗೆ ನಾವು ಬದಲಾದೆವು ಮುಂದೊಂದಿನ ಎದುರಿಸುವ ಭಯನಕ ಸವಾಲುಗಳೇ ನಮ್ಮ ಮೂರ್ಖತನಕ್ಕೆ ಉತ್ತರವೆಂಬಂತೆ ನಾಶದ ಮೃದಂಗ ಮಾರ್ದನಿಸುತ್ತಿದೆ.