ತೀರಾ ಇತ್ತೀಚಿನವರೆಗೂ, ಕೆಲವು ಸಮುದಾಯಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯ ಮಾಡಿಕೊಂಡಿರುವ ಅಥವಾ ಕೃಷಿ ಕೆಲಸದ ಜೊತೆಗೆ ಸಣ್ಣ ಪುಟ್ಟ ಉದ್ಯೋಗದಲ್ಲಿದ್ದ ಹುಡುಗರನ್ನು ಮದುವೆಯಾಗಲು ಕನ್ಯೆಯರು ಸಿಗದ ಪರಿಸ್ಥಿತಿಯಿತ್ತು. ನಗರದಲ್ಲಿ ದುಡಿಯುವ, ಹೆಚ್ಚು ಸಂಬಳ ಪಡೆಯುತ್ತಿದ್ದ ವರನಿಗೆ ಡಿಮ್ಯಾಂಡ್ ಇತ್ತು, ಈಗಲೂ ಇದೆ. ಆದರೆ ಕೊರೊನಾದಿಂದಾಗಿ ಈ ಮನೋಭಾವ ಸ್ವಲ್ಪಮಟ್ಟಿಗೆ ಬದಲಾಗಿದೆ ಅನ್ನಬಹುದು.
ಈ ನಡುವೆ ಕೆಲವರು ನಗರದ ಒತ್ತಡದ ಜೀವನಶೈಲಿಗೆ ವಿದಾಯ ಹೇಳಿ, ಜಮೀನು ಖರೀದಿಸಿ ಕೃಷಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹುಟ್ಟೂರಿಗೆ ಬಂದು, ಮನೆಯಿಂದಲೇ ವರ್ಕ್ ಫ್ರಂ ಹೋಂ ಕೆಲಸ ಮಾಡುವುದು ಅಥವಾ ಉದ್ಯೋಗವನ್ನು ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡು ಹಸಿರು ಸಿರಿಯ ನಡುವೆ ನೆಮ್ಮದಿ ಕಂಡವರೂ ಇದ್ದಾರೆ. ಈ ಬದಲಾವಣೆಗಳು ವಿವಾಹಯೋಗ್ಯ ಯುವಕರ ನಡುವೆ ಇರುವ ಆರ್ಥಿಕ ಹಾಗೂ ಸಾಮಾಜಿಕ ಅಂತರವನ್ನು ಕಡಿಮೆಮಾಡಲೂ ಸಹಾಯಕವಾಗಬಹುದು. ಆದರೆ, ಎಲ್ಲಾ ಬದಲಾವಣೆಗಳ ನಡುವೆಯೂ ಸ್ವಾರ್ಥದ ಎಳೆ ಕಾಣಿಸುವುದು ಸುಳ್ಳಲ್ಲ.
ಇತ್ತೀಚೆಗೆ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದೆ. ಕೊರೊನಾ ನಿಯಮಗಳಿಂದಾಗಿ ಕಡಿಮೆ ಜನರಿದ್ದರು. ಹಾಗಾಗಿ, ನನ್ನ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಇಬ್ಬರ ದೊಡ್ಡದನಿಯ ಕುಶಲೋಪರಿ ಮಾತುಕತೆ ನನ್ನ ಕಿವಿಗೆ ಅಯಾಚಿತವಾಗಿ ಬೀಳುತಿತ್ತು. ಅವರಿಬ್ಬರ ಮಾತಿನಲ್ಲಿ ನನಗೆ ಅರ್ಥವಾದ ವಿಷಯವೇನೆಂದರೆ, ಅವರಿಬ್ಬರ ಹೆಣ್ಣು ಮಕ್ಕಳು ಗೆಳತಿಯರು. ಇಬ್ಬರೂ ಎಂಜಿನಿಯರ್ ಆಗಿದ್ದು, ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದಾರೆ. ಉತ್ತಮ ಸಂಬಂಧ ಕೂಡಿ ಬಂದರೆ ಅವರಿಗೆ ಮದುವೆ ಮಾಡುವ ಆಲೋಚನೆಯಲ್ಲಿ ಆ ಹೆಂಗಸರಿದ್ದರು.
“ಹುಡ್ಗ ಬೆಂಗಳೂರಿನಲ್ಲೇ ಕೆಲ್ಸದಲ್ಲಿ ಇರ್ಬೇಕು. ಆದರೆ ಜಾಬ್ ಮಾತ್ರ ಇದ್ರೆ ಸಾಲ್ದು, ಅವರ ಮನೇವ್ರಿಗೆ ಜಮೀನು ಇರಬೇಕು. ಈಗಿನ ಪರಿಸ್ಥಿತಿಯಲ್ಲಿ ಸ್ವಲ್ಪವಾದರೂ ಕೃಷಿಭೂಮಿ ಇದ್ರೆ ಒಳ್ಳೇದು ..”ಅಂದರು ಒಬ್ಬರು.
“ಹೌದೌದು..ಕೋವಿಡ್ ಬಂದ ಮೇಲೆ ವರ್ಕ್ ಫ್ರಂ ಹೋಂ ಆಗಿದೆ. ಅದನ್ನೇ ಪರ್ಮನೆಂಟ್ ಮಾಡೋ ಛಾನ್ಸ್ ಇದೆಯಂತೆ. ಮೊದ್ಲಿನಷ್ಟು ಸಂಬ್ಳಾನು ಇಲ್ವಂತೆ ..’ ” ಒಬ್ನೇ ಹುಡ್ಗ ಇರೋ ಮನೆಗೆ ನಮ್ಮ ಮಗಳನ್ನ ಕೊಡೋಲ್ಲ.. ಹುಡ್ಗಂಗೆ ಅಣ್ಣನೋ ತಮ್ಮನೋ ಇದ್ದು, ಆತ ಊರಲ್ಲಿ ಜಮೀನು ನೋಡ್ಕೊಂಡು ಇರೋವಂತ ಸಂಬಂಧ ಆದ್ರೆ ಒಳ್ಳೆಯದು. ನಮ್ ಹುಡ್ಗಿಗೆ ಹಳ್ಳಿಮನೆ ಆಗಲ್ಲ…ಇವ್ರು ಸಿಟಿನಲ್ಲಿ ಇರ್ಬೇಕು, ಆದ್ರೆ ಜಮೀನು ನೋಡ್ಕೊಳ್ಳೋಕೆ ಇನ್ನೊಬ್ಬರು ಇರ್ಬೇಕು….ಇವ್ರಿಗೂ ಬೇಕಾದಾಗ ಪಾಲು ಕೇಳ್ಬಬಹುದಲ್ಲಾ…’
ಅಬ್ಬಬ್ಟಾ…ತಮ್ಮ ಮಗಳ ಹಿತದೃಷ್ಟಿಯಿಂದ ಇಷ್ಟೊಂದು ಮುಂದಾಲೋಚನೆ ಮಾಡುವ ಇವರು, ಹುಡುಗನ ಮನೆಯವರಿಗೂ ತಮ್ಮದೇ ಆದ ನಿರೀಕ್ಷೆಗಳಿರುತ್ತದೆ, ಜವಾಬ್ದಾರಿಗಳಿರುತ್ತವೆ, ತಮ್ಮ ಕೃಷಿಭೂಮಿಯ ಮೇಲೆ ಭಾವನಾತ್ಮಕ ಒಲವಿರುತ್ತದೆ ಎಂಬುದನ್ನು ಯೋಚಿಸಲಿಲ್ಲವಲ್ಲಾ ಅನಿಸಿತು. ಅವರ ಕಷ್ಟಕ್ಕೆ ಹೆಗಲು ಕೊಡದೆ, ತಮ್ಮ ಮಗಳು-ಅಳಿಯ ಲಾಭದಲ್ಲಿ ಮಾತ್ರ ಹಕ್ಕುದಾರರಾಗಿರಬೇಕು ಎಂಬ ಸ್ವಾರ್ಥ ಚಿಂತನೆಯ ಮುಖವನ್ನು ಮುಚ್ಚಲು ಮಾಸ್ಕ್ ಗೆ ಸಾಧ್ಯವಾಗಲಿಲ್ಲ!
ಓ ಹೇಮಮಾಲಾ.ಬಿ. ಮೈಸೂರು