Advertisement
ನೈಜೀರಿಯಾದ ಲಾಗೋಸ್ ನಗರ ಎದುರಿಸುತ್ತಿದ್ದ ಸಮಸ್ಯೆಗಳಲ್ಲಿ ಎಲ್ಲೆಂದರಲ್ಲಿ ಕಾಣಿಸುತ್ತಿದ್ದ ಟೈರ್‌ಗಳ ರಾಶಿಯೂ ಒಂದು. ಲಾಗೋಸಿನಲ್ಲಿ ಸುಂದರವಾದ ಬೀಚ್‌ಗಳಿವೆ, ರೆಸಾರ್ಟ್‌ಗಳಿವೆ, ಅತ್ಯಾಧುನಿಕ ಶಾಪಿಂಗ್ ಮಾಲ್‌ಗಳಿವೆ. ಇವೆಲ್ಲ ಇದ್ದರೂ ನಗರದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿದ್ದು ಹಳೆಯ ಟೈರ್‌ಗಳು. ಈ ನಿರುಪಯುಕ್ತ ಟೈರುಗಳ ವಿಲೇವಾರಿ ಅಧಿಕಾರಿಗಳನ್ನು ಕಾಡುತ್ತಿದ್ದ ದೊಡ್ಡ ಸಮಸ್ಯೆ. ಅದಕ್ಕೆ ಸ್ಪಂದಿಸಿದ್ದು ಸ್ಥಳಿಯ ಕಲಾವಿದ ಎನ್ಕೋವೋಚಾ ಅರ್ನೆಸ್ಟ್. 2006ರಿಂದ ಬಳಸಿದ, ತುಂಡಾದ ಟೈರುಗಳಿಗೆ ಕಲೆಯ ಸ್ಪರ್ಶ ನೀಡುವ ಮೂಲಕ ಅವುಗಳಿಗೆ ಹೊಸ ರೂಪ, ಹೊಸ ಜನ್ಮ ಸಿಗುವಂತೆ ಮಾಡುತ್ತಿದ್ದಾನೆ. ಅವನ ಸೃಜನಶೀಲ ಕಲಾಸೃಷ್ಟಿಯ ಮೂಲಕ ನಿಧಾನವಾಗಿ ನಗರದಲ್ಲಿ ಬದಲಾವಣೆ ಕಂಡುಬರುತ್ತಿದೆ.
ಅವನು ಟೈರುಗಳಿಗೆ ನೀಡುತ್ತಿರುವ ಕಲಾತ್ಮಕ ಸ್ಪರ್ಶದಿಂದಾಗಿ ಅದನ್ನು ಮೆಚ್ಚಿಕೊಂಡ ವಿದೇಶಿ ಪ್ರವಾಸಿಗರು ದೊಡ್ಡ ಬೆಲೆ ತೆತ್ತು ಕೊಂಡುಕೊಳ್ಳುತ್ತಿದ್ದಾರೆ. ಅವನ್ನು ತಮ್ಮ ಮನೆಯ ವರಾಂಡಾಗಳಲ್ಲಿ ಅಲಂಕಾರಿಕ ವಸ್ತುವಾಗಿ ಬಳಸುತ್ತಿದ್ದಾರೆ. ತನ್ನ ಕಲ್ಪನೆಯಿಂದಲೇ ಅರ್ನೆಸ್ಟ್ ಬಳಸಿದ ಟೈರುಗಳಿಗೆ ಮುಕ್ತಿ ನೀಡುವುದರಲ್ಲಿ ಸಫಲನಾಗಿದ್ದಾನೆ. ಅಂಗಡಿಗಳಿಂದ ಕಡಿಮೆ ಬೆಲೆಗೆ ಸಿಗುವ ಟೈರನ್ನು ತಂದು ತನ್ನ ಕಾರ್ಯಾಗಾರದಲ್ಲಿ ರಾಶಿ ಹಾಕುತ್ತಾನೆ. ಯಂತ್ರದ ಮೂಲಕ ನಾಜೂಕಾಗಿ ಟೈರನ್ನು ಹಗ್ಗದ ಹಾಗೆ ಸೀಳುತ್ತಾನೆ. ಯಾವ ಕಲಾಕೃತಿ ತಯಾರಾಗಬೇಕೋ ಅದರ ಮೂಲ ರೂಪದ ಹಂದರವನ್ನು ಉಕ್ಕಿನ ತಂತಿಗಳನ್ನು ಹೆಣೆದು ತಯಾರಿಸುತ್ತಾನೆ. ಸೀಳಿದ ಟೈರನ್ನು ಬೆಂಕಿಯಲ್ಲಿ ಕರಗಿಸಿ ಈ ಹಂದರದ ತಂತಿಗಳಿಗೆ ಜೋಡಿಸುತ್ತಾನೆ. ಬೇಕಿದ್ದರೆ ಅದು ಹೊಳೆಯುವ ಹಾಗೆ ಮೇಲಿಂದ ತೈಲವನ್ನು ಪೂಸುತ್ತಾನೆ. ಅಗತ್ಯವಿದ್ದರೆ ಬಣ್ಣವನ್ನು ಬಳಸುತ್ತಾನೆ. ಜೀವ ಇರುವಂತೆ ಕಾಣುತ್ತವೆ
ಹೀಗೆ ಅವನ ಕೌಶಲದ ಕೈಗಳಲ್ಲಿ ಸಾವಿರಾರು ಕಲಾಕೃತಿಗಳು ಸೃಷ್ಟಿಯಾಗಿವೆ. ಜಿಗಿಯಲು ಸಿದ್ಧವಾಗಿ ನಿಂತ ಎತ್ತು, ಉದ್ದ ಕಿವಿಯ ಮೊಲ, ಗೊರಿಲ್ಲ, ಡೈನೋಸಾರ್, ಕರಡಿ, ಉಷ್ಟ್ರಪಕ್ಷಿ, ಹೆಬ್ಟಾವು… ಹೀಗೆ ಅಸಂಖ್ಯ ಬಗೆಯ ಪ್ರಾಣಿಗಳು ಜೀವಂತವಾಗಿವೆಯೇನೋ ಎಂದು ಭಾವಿಸುವಷ್ಟು ನೈಜವಾಗಿ ಈ ಕಲಾವಿದನ ಕೈಗಳಲ್ಲಿ ಜೀವ ಪಡೆದಿವೆ. ಗಟ್ಟಿಯಾದ ಟೈರುಗಳಿಂದ ಹೀಗೊಂದು ಕಲೆಯನ್ನು ಮಾಡುವುದು ಎಣಿಸಿದಷ್ಟು ಸುಲಭವೇನಲ್ಲ. ಆದರೂ, ಅಪೇಕ್ಷಿತ ರೀತಿಯಲ್ಲಿ ಅದನ್ನು ಮಣಿಸಲು ಬೇಕಾದ ಹಲವಾರು ದಾರಿಗಳನ್ನು ಅರ್ನೆಸ್ಟ್ ಕರಗತ ಮಾಡಿಕೊಂಡಿದ್ದಾನೆ. ಒಂದು ಕೃತಿ ರಚನೆಗೆ ಹತ್ತಾರು ತಾಸುಗಳು ಬೇಕಾಗುತ್ತದಾದರೂ ಆತ ಉತ್ಸಾಹ ಕಳೆದುಕೊಂಡಿಲ್ಲ.
Related Articles
Advertisement
– ಪ. ರಾಮಕೃಷ್ಣ ಶಾಸ್ತ್ರಿ