Advertisement
ಹಳ್ಳಿ ಜೀವನದಿಂದ ನಗರಿಗೆ ಬಂದವರೆಲ್ಲರಿಗೂ ಹೊಸ ಪರಿಸರಕ್ಕೆ ಹೇಗೆ ಹೊಂದಿಕೊಳ್ಳಬೇಕೆಂಬ ಆತಂಕ ಸಹಜ. ಮುಂಬೈಯಲ್ಲಿ ಪುಟ್ಟ ಮನೆಯಾದರೂ ಖರೀದಿಸುವುದು ಬಿಡಿ, ಬಾಡಿಗೆ ಮನೆ ಮಾಡುವುದೂ ಸುಲಭದ ಮಾತಲ್ಲ. ಇಲ್ಲಿಗೆ ದುಡಿಮೆಗೆ ಬಂದವರೆಲ್ಲ ಹೊಟೇಲಿನಲ್ಲಿ ಅಥವಾ ಸಂಬಂಧಿಕರಲ್ಲಿ ಯಾರಿಗಾದರೂ ಮನೆಯಿದ್ದರೆ ಅಲ್ಲಿ ಇರಬೇಕಾಗುತ್ತದೆ. ಹಾಗೆ ನಾನು ಮುಂಬೈಗೆ ಬಂದಾಗ ಮುನ್ನೂರೈವತ್ತು ಚದರ ಅಡಿ ವಿಸ್ತೀರ್ಣದ ಮನೆಯಲ್ಲಿ ನಿತ್ಯ ಹತ್ತು ಮಂದಿ ಖಾಯಂ ಅತಿಥಿಗಳಿರುತ್ತಿದ್ದರು. ಹೊಸದಾಗಿ ಬಂದ ಹುಡುಗಿಯನ್ನು ನೋಡಲು ಆಗಾಗ ಬರುವ ಸಂಬಂಧಿಕರು ನಾಲ್ಕಾರು ದಿವಸ ಇದ್ದು ಹೋಗುತ್ತಿದ್ದರು. ಹಾಗೆ ನನ್ನ ಅರಂಭದ ದಿನಗಳೆಲ್ಲ ಮನೆತುಂಬ ಮಂದಿ, ದಿನವಿಡೀ ಚಾ, ಕಾಫಿ, ಊಟ-ತಿಂಡಿ ಮಾಡಿ ಬಡಿಸುವುದರಲ್ಲಿಯೇ ಕಳೆಯುತ್ತಿತ್ತು. ಕೆಲವೊಮ್ಮೆ ಯಾರಾದರೂ, “ನಿನಗೆ ಊರಿನ ನೆನಪಾಗುವುದಿಲ್ಲವೇ?’ ಎಂದು ಕೇಳುತ್ತಿದ್ದುದುಂಟು. “ನೆನಪು ಮಾಡಿಕೊಳ್ಳಲು ಪುರುಸೊತ್ತೇ ಇಲ್ವಲ್ಲ…!’ ಎನ್ನುತ್ತಿದ್ದೆ. ಅದಕ್ಕವರು, “ಓ ಕತೆನೇ ಪೊಣ್ಣಗ್ ಊರ್ದ ನೆಂಪೇ ಇಜ್ಜತಾ…!’ (ಛೆ! ಈ ಹುಡುಗಿಗೆ ಹುಟ್ಟಿದೂರಿನ ನೆನಪೇ ಇಲ್ಲವಲ್ಲ!) ಎಂದು ಉದ್ಗರಿಸಿದಾಗ, ಎಲ್ಲರೂ ಸೇರಿ ನಗುತ್ತಿದ್ದುದುಂಟು.
Related Articles
ಒಮ್ಮೆ ಎರಡನೆಯ ಮಹಡಿಯಲ್ಲಿರುವ ಶ್ಯಾಮಲಕ್ಕ ಮನೆಗೆ ಬಂದವರು, ಹಾಲಿನ ಖಾಲಿ ಥೈಲಿ ಬಿಸಾಡುವುದನ್ನು ನೋಡಿದರು. “ಅಯ್ಯೋ ಯಾಕೆ ಹೀಗ್ಮಾಡ್ತೀರಿ? ಎಲ್ಲ ಜಮಾ ಮಾಡಿ ಇಟ್ಟರೆ ಅಷ್ಟೇ ತೂಕದಷ್ಟು ಬೆಳ್ಳುಳ್ಳಿ ಸಿಗುತ್ತೆ!’ ಅಂದರು. ಅವರ ಹೇಳಿಕೆಯಂತೆ ನಾನೂ ಹಾಲಿನ ಥೈಲಿ ಒಟ್ಟುಗೂಡಿಸತೊಡಗಿದೆ. ಒಂದು ದೊಡ್ಡ ಚೀಲ ತುಂಬಲು ಮೂರು ತಿಂಗಳೇ ಹಿಡಿಯಿತು. ಸುಮಾರು ಒಂದು ಕೆಜಿಯಷ್ಟಾದರೂ ಬೆಳ್ಳುಳ್ಳಿ ಸಿಗಬಹುದೆಂದು ನನ್ನ ಲೆಕ್ಕಾಚಾರವಾಗಿತ್ತು. ಆದಿನ ಬೆಳಗಾತ “ಲಸುನ್‌ವಾಲೀಯೆ…’ ಎಂದು ಹೆಂಗಸೊಬ್ಬಳು ನಾನಿರುವ ಕಟ್ಟಡದ ಬದಿಯಿಂದ ಕೂಗಿಕೊಂಡು ಹಾದುಹೋಗುವುದನ್ನು ಗಮನಿಸಿದೆ. ಮೂರನೆಯ ಮಹಡಿಯ ಕಿಟಕಿಯಿಂದ “ಲಸುನುವಾಲೀ…’ ಎಂದು ಕರೆದೆ. ಆಕೆ ಕೂಡಲೇ ತಲೆಯೆತ್ತಿ “ಎಷ್ಟನೇ ಮಹಡಿ…?’ ಎಂದು ಕೇಳಿದಳು. ಮೂರು ಎಂದು ಕೈ ಬೆರಳಿನಲ್ಲಿಯೇ ತೋರಿಸಿದೆ. “ಸಿ ವಿಂಗ್ ಪೆ ಆಜಾವೋ’ ಅಂದೆ. “ಹೂnಂ’ ಎಂದು ಮೆಟ್ಟಿಲೇರಿ ದಡದಡನೆ ಬಂದುಬಿಟ್ಟಳು. ಅವಳ ಬೆನ್ನಲ್ಲಿ ನೇತಾಡುತ್ತಿದ್ದ ದೊಡ್ಡ ಚೀಲ ಖಾಲಿಯಾಗಿತ್ತು. “ಒಳಗಿನಿಂದ ಬಟ್ಟಲು ತಗೆದುಕೊಂಡು ಬಾ’ ಎಂದಳು. ಸ್ವಲ್ಪ ದೊಡ್ಡ ಬಟ್ಟಲನ್ನೇ ತಂದೆ. ಆಕೆ ತನ್ನ ತಕ್ಕಡಿಯಲ್ಲಿ ಎರಡು ಮುಷ್ಟಿ ಬೆಳ್ಳುಳ್ಳಿ ಹಾಕುವಷ್ಟರಲ್ಲಿ ನಾನು ಕೊಟ್ಟ ಹಾಲಿನ ಖಾಲಿ ಪೊಟ್ಟಣದ ಗಂಟು ನೇರ ಮೇಲಕ್ಕೇರಿತು. ನನ್ನ ಮುಖ ಸಪ್ಪಗಾದುದನ್ನು ಆಕೆ ಗಮನಿಸಿದಳು. “ತೋಡಾ ಜಾದಾ ಹೀ ದಿಯಾ!’ ಎಂದು ಹೇಳಿ ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಹೆಚ್ಚಿಗೆ ಹಾಕಿ, ಬಟ್ಟಲಿಗೆ ಸುರುವಿದಳು. ಮೂರು ತಿಂಗಳು ಹಾಲಿನ ಥೈಲಿ ತೊಳೆದು ವಾಸನೆ ಬಾರದಂತೆ ಒಣಗಿಸಿ ಚೀಲದಲ್ಲಿ ನಿತ್ಯ ತುರುಕಿಸಿಟ್ಟ ನನ್ನ ಶ್ರಮಕ್ಕೆ ದಕ್ಕಿದ್ದು ಬರೀ ನೂರು ಗ್ರಾಂನಷ್ಟು ಬೆಳ್ಳುಳ್ಳಿ! ಆವತ್ತಿನಿಂದ ಆ ಕೆಲಸಕ್ಕೆ ತಿಲಾಂಜಲಿಯಿಟ್ಟೆ.
Advertisement
ಹಳೆಯ ಬಟ್ಟೆಯ ಬದಲಿಗೆ ಪಾತ್ರೆನಮ್ಮ ಅಕ್ಕಪಕ್ಕದವರು ಹಳೆಯ ಬಟ್ಟೆಗಳನ್ನೆಲ್ಲ ಬಾಂಡ್ಲಿವಾಲಿಗೆ ಕೊಡುವುದನ್ನು ಒಮ್ಮೆ ಗಮನಿಸಿದೆ. ನನಗೂ ಮನಸ್ಸಾಯಿತು. ಕೂಡಲೇ ಶಾಮಲಕ್ಕನ ಮನೆಗೆ ಹೋದೆ. ಅವರು ಬಟ್ಟೆ ಕೊಟ್ಟು ತೆಗೆದುಕೊಂಡ ಪಾತ್ರೆಯನ್ನು ತಪಾಸಣೆಗೆ ಒಡ್ಡಿದೆ. “ಬಾಲ್ದಿ ಖರೀದಿಸಿ ನಾಲ್ಕು ವರ್ಷವಾಯಿತು ಇನ್ನೂ ಒಡೆದಿಲ್ಲ!’ ಎಂದು ಶ್ಯಾಮಲಕ್ಕ ತಟ್ಟಿ, ತಟ್ಟಿ ತೋರಿಸಿದರು. ಸ್ಫೂರ್ತಿ ಬಂತು. “ಬಾಂಡ್ಲಿವಾಲಿ ಬಂದರೆ ನಮ್ಮ ಮನೆಗೂ ಕಳಿಸಿ’ ಅಂದೆ. ಮಾರನೆಯ ದಿನ ಮಧ್ಯಾಹ್ನದ ಹೊತ್ತಿಗೆ ಬಾಂಡ್ಲಿವಾಲಿ ಹಾಜರಿದ್ದಳು. ಆದರೆ ಎಷ್ಟು ಬಟ್ಟೆ ಕೊಟ್ಟರೂ, ಒಂದು ಚಿಕ್ಕ ಪಾತ್ರೆ ಕೊಡೋಕೂ ಆಕೆ ತಯಾರಿರಲಿಲ್ಲ. “ನೀವು ಕೊಟ್ಟ ಬಟ್ಟೆಗೆ ಪ್ಲಾಸ್ಟಿಕ್ ಬಾಲ್ದಿ ಕೊಡಬಹುದು ಅಷ್ಟೆ’ ಎಂದಳು. ನನಗೆ ಪ್ಲಾಸ್ಟಿಕ್ ಪಾತ್ರೆ ಬೇಡವಾಗಿತ್ತು. “ಇನ್ನೆಷ್ಟು ಬಟ್ಟೆ ಕೊಡಬೇಕಿತ್ತು?’ ಎಂದು ಕೇಳಿದೆ. “ಕಡಿಮೆ ಎಂದರೂ ಇನ್ನೆರಡು ಸೀರೆನಾದ್ರೂ ಬೇಕು’ ಎಂದಳು. ಹೇಗೂ ರಾಶಿ ಬಿದ್ದಿದ್ದ ಹಳೆಯ ಬಟ್ಟೆಗಳನ್ನು ಸಾಗಹಾಕುವುದಿತ್ತು. ಮದುವೆ ಸಮಯದಲ್ಲಿ ಉಡುಗೊರೆ ಬಂದಿದ್ದ ಅಗ್ಗದ ಬೆಲೆಯ ಒಂದು ಸೀರೆಯೊಂದನ್ನು ಅವಳ ಕೈಗಿಟ್ಟೆ. ಆಕೆ ಸಣ್ಣ ಅಲ್ಯುಮಿನಿಯಂ ಪಾತ್ರೆಯೊಂದನ್ನು ನನಗಿತ್ತಳು. ಚಾರಾಣಕ ಮುರ್ಗಿ, ಬಾರಾಣಕ ಮಸಾಲ ಅನ್ನುವಂತಿತ್ತು ನನ್ನ ಅಂದಿನ ಸ್ಥಿತಿ! ಇಲ್ಲಿ ಬದುಕನ್ನು ಕಟ್ಟಿಕೊಂಡಿರುವ ಬಹುತೇಕರಲ್ಲಿ ನಾನು ಗಮನಿಸಿದ್ದು, ಪೈಸೆ ಪೈಸೆಗೂ ಅವರು ನೀಡುವ ಮಹತ್ವ! ಮನೆಗೆ ಬೇಡವಾಗುವ ವಸ್ತುವಿನ ಬೆಲೆ ಮಾರುವಾಗ ಅತಿಕಡಿಮೆಯಾದರೂ ತೊಂದರೆಯಿಲ್ಲ, ಅದರ ಬಗ್ಗೆ ನಿರ್ಲಕ್ಷ್ಯ, ಚೌಕಾಶಿ ಮಾಡದ ವ್ಯವಹಾರವೇ ಕಡಿಮೆಯೆನ್ನಬಹುದು. ಈ ಚಾಣಾಕ್ಷತೆಯನ್ನು ಮುಂಬೈ ನಗರಿಯೇ ಕಲಿಸಿಕೊಡುತ್ತದೆ. ಆದರೆ ಇಂಥ ವ್ಯವಹಾರ ಊರಿನಲ್ಲಿ ನಡೆಯುವುದಿಲ್ಲ. ಅಲ್ಲಿನ ವ್ಯಾಪಾರಸ್ಥರು “ಉಂದು ಬೊಂಬೈ ಅತ್ತ್ ಮಗಾ… ಮುಲ್ಪ$ಪನ್ಯ ರೇಟ್ ಕೊರೊಡು’ (ಇದು ಮುಂಬೈಯಲ್ಲ. ಇಲ್ಲಿ ಹೇಳಿದ್ದೇ ರೇಟು) ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದಾಗಲೇ ನಾವಿರೋದು ಊರಲ್ಲಿ ಎನ್ನುವ ವಾಸ್ತವದ ಅರಿವಾಗುವುದು ! ಅನಿತಾ ಪಿ. ತಾಕೊಡೆ