ಚಿತ್ತಾಪುರ: ಹಿಂದುಳಿದ ಈಡಿಗ ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ರಚನೆ, ಈಡಿಗರ ಕುಲ ಕಸುಬಾದ ಸೇಂದಿ ಇಳಿಸಿ ಮಾರಾಟ ಮಾಡುವುದು, ಈಚಲು ಮರ, ತಾಳೆ ಮರಗಳ ಇರುವ ಪ್ರದೇಶಗಳಲ್ಲಿ ಕೂಡಲೇ ಸೇಂದಿ ಇಳಿಸಲು ಅನುಮತಿ ನೀಡಬೇಕು ಮತ್ತು ಸರ್ಕಾರಿ ಜಾಗದಲ್ಲಿ ಈಚಲು ಮತ್ತು ತಾಳೆ ಮರಗಳು ಬೆಳೆಸಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಈಡಿಗ ಶಾಸಕರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾ ಮಂಡಳಿ ಅಧ್ಯಕ್ಷ ಡಾ| ಪ್ರಣಾವನಂದ ಸ್ವಾಮಿಗಳು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಂದಾಗ ಈಡಿಗ ಸಮುದಾಯ ಕೋಟಾ ಬೇಕು ಮತ್ತು ವೋಟು ಬೇಕು. ಆದರೆ ಸಮುದಾಯ ಬೇಡವಾ ಎಂದು ಪ್ರಶ್ನಿಸಿದರು.
ಈಡಿಗರ ಕುಲ ಕಸುಬು ಸರಕಾರ ಕಸಿದುಕೊಂಡು ಬಡವರನ್ನಾಗಿಸಿದೆ ಪರ್ಯಾಯ ವ್ಯವಸ್ಥೆ ಮಾಡದೇ ದ್ರೋಹ ಮಾಡಿದೆ. ಸೇಂದಿ ಇಳಿಸಿ ಮಾರಾಟ ಮಾಡುವುದು ಈಡಿಗರ ಕುಲ ಕಸುಬು. ಆದರೆ, ರಾಜಕೀಯ ಷಡ್ಯಂತ್ರದಿಂದ ಇಂದು ನಿಷೇಧಕ್ಕೆ ಒಳಪಟ್ಟಿದೆ. ಸೇಂದಿ ಇಳಿಸಿ ಮಾರಾಟ ಮಾಡುವುದು ಈಡಿಗರಿಗೆ ದೇವರು ಕೊಟ್ಟಿರುವ ವರವಾಗಿದೆ. ಇದಕ್ಕೆ ತನ್ನದೇ ಇತಿಹಾಸವಿದೆ ಎಂದರು. ರಾಜ್ಯದಲ್ಲಿ 26 ಒಳ ಪಂಗಡಗಳನ್ನು ಒಳಗೊಂಡಿದ್ದ ಈಡಿಗ ಸಮಾಜವು 70 ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ, ಒಂದು ನಿಗಮ ಮಂಡಳಿ ರಚನೆ ಮಾಡದೇ ಇರುವುದು ನೋವಿನ ಸಂಗತಿ. ಪ್ರಸ್ತುತ ಸಣ್ಣ-ಸಣ್ಣ ಜನಾಂಗಗಳಿಗೆ ನಿಗಮ ಮಂಡಳಿ ರಚನೆ ಮಾಡಿದ ಸರಕಾರ ಈಡಿಗ ಸಮಾಜಕ್ಕೆ ಮಾತ್ರ ನಿರ್ಲಕ್ಷ್ಯ ವಹಿಸಿದೆ ಎಂದು ಹೇಳಿದರು.
ಮಹಾ ಮಂಡಳಿಯ ರಾಜ್ಯ ಕಾರ್ಯದರ್ಶಿ ವೆಂಕಟೇಶ ಗುಂಡಾನೋರ್, ಈಡಿಗ ಸಮಾಜದ ತಾಲೂಕು ಅಧ್ಯಕ್ಷ ವಿನೋದ ಗುತ್ತೇದಾರ, ಉಪಾಧ್ಯಕ್ಷ ಶಂಕರಗೌಡ ರಾವೂರಕರ್, ಪ್ರಧಾನ ಕಾರ್ಯದರ್ಶಿ ಕಾಶಿನಾಥ ಗುತ್ತೇದಾರ, ಯುವ ಅಧ್ಯಕ್ಷ ಸುರೇಶ ಗುತ್ತೇದಾರ, ಶಿವಯ್ಯ ಗುತ್ತೇದಾರ, ಶ್ರೀಶೈಲ್ ಗುತ್ತೇದಾರ, ಶಿವರಾಜ ಗುತ್ತೇದಾರ, ಅಮೃತ್ ಗುತ್ತೇದಾರ, ಲಕ್ಷ್ಮೀಕಾಂತ ಗುತ್ತೇದಾರ, ಹುಸನಯ್ಯ ಗುತ್ತೇದಾರ, ಮಲ್ಲಯ್ಯ ಹದನೂರ ಇದ್ದರು.