Advertisement

ಮುಂಗಾರು ಆಗಮನ: ರೈತರ ಮೊಗದಲ್ಲಿ ಮಂದಹಾಸ

11:46 PM Jun 09, 2023 | Team Udayavani |

ಗುರುವಾರದಂದು ನೈಋತ್ಯ ಮಾರುತಗಳು ಕೇರಳ ಪ್ರವೇಶಿಸುವು ದರೊಂದಿಗೆ ದೇಶದಲ್ಲಿ ಮುಂಗಾರು ಋತು ಆರಂಭಗೊಂಡಿದೆ. ನೈಋತ್ಯ ಮಾರುತಗಳು ಈ ಬಾರಿ ಒಂದು ವಾರ ತಡವಾಗಿ ಕೇರಳವನ್ನು ಪ್ರವೇಶಿ ಸಿದ್ದು ಅಲ್ಲಿನ ಕರಾವಳಿ ಮತ್ತು ಒಳನಾಡಿನ ಕೆಲವೆಡೆ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮಾತ್ರವಲ್ಲದೆ ಖಾಸಗಿ ಹವಾಮಾನ ಸಂಸ್ಥೆಗಳು ಕೂಡ ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೊಂಚ ವಿಳಂಬವಾಗಲಿದೆ ಎಂದು ಮುನ್ಸೂಚನೆ ನೀಡಿದ್ದವು. ಆದರೆ ಅರಬಿ ಸಮುದ್ರದಲ್ಲಿ ನೈಋತ್ಯ ಮಾರುತಗಳ ಚಲನೆಗೆ ಪೂರಕ ವಾತಾವರಣ ನಿರ್ಮಾಣಗೊಳ್ಳದೇ ಮತ್ತಷ್ಟು ವಿಳಂಬವಾಗಿತ್ತು. ಅರಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಬಿಪರ್‌ಜಾಯ್‌ ಚಂಡಮಾರುತದ ಪರಿಣಾಮ ನೈಋತ್ಯ ಮಾರುತಗಳು ತೀವ್ರತೆಯನ್ನು ಕಂಡುಕೊಂಡು ಗುರುವಾರ ಕೇರಳದ ಕರಾವಳಿಯನ್ನು ಪ್ರವೇಶಿಸಿದ್ದು ಕರಾವಳಿ ಜಿಲ್ಲೆಗಳು ಮತ್ತು ಒಳನಾಡಿನ ಕೆಲವೆಡೆ ಭಾರೀ ಮಳೆ ಸುರಿಯಲಾರಂಭಿಸಿದೆ.

Advertisement

ನೈಋತ್ಯ ಮಾರುತಗಳು ರಾಜ್ಯದ ಕರಾವಳಿಯನ್ನು ಪ್ರವೇಶಿಸುತ್ತಿದ್ದಂತೆ ಮುಂಗಾರು ಮಾರುತಗಳು ರಾಜ್ಯದೆಲ್ಲೆಡೆ ವ್ಯಾಪಿಸಿ ಮಳೆ ಸುರಿಸಲಿದೆ. ಅನಂತರದ ದಿನಗಳಲ್ಲಿ ಮುಂಗಾರು ಮಾರುತಗಳ ಚಲನೆಯ ತೀವ್ರತೆ ಯನ್ನು ಅವಲಂಬಿಸಿ ಹಂತಹಂತವಾಗಿ ರಾಜ್ಯ, ದೇಶದೆಲ್ಲೆಡೆ ವ್ಯಾಪಿಸಲಿದೆ.

ಅರಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಬಿಪರ್‌ಜಾಯ್‌ ಚಂಡ ಮಾರುತ ನೈಋತ್ಯ ಮಾರುತಗಳ ಚಲನೆಗೆ ತಡೆಯಾಗಲಿದೆ ಎಂಬ ಆತಂಕ ಆರಂಭದಲ್ಲಿ ವ್ಯಕ್ತವಾಗಿತ್ತಾದರೂ ಇದೀಗ ಮುಂಗಾರು ಮಾರುತಗಳು ಕೇರಳಕ್ಕೆ ಅಧಿಕೃತವಾಗಿ ಪ್ರವೇಶಿಸಿ ಮಳೆ ಸುರಿಸತೊಡಗಿರುವುದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. ಅಷ್ಟು ಮಾತ್ರವಲ್ಲದೆ ಇದರಿಂದಾಗಿ ಕರ್ನಾಟಕ ಸಹಿತ ದೇಶದೆಲ್ಲೆಡೆ ನೀರಿಗಾಗಿ ಎದ್ದಿದ್ದ ಹಾಹಾಕಾರ ಮುಂಬರುವ ದಿನಗಳಲ್ಲಿ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ. ಮಳೆಗಾಗಿ ಕಾತರದಿಂದ ಆಗಸದತ್ತ ದೃಷ್ಟಿ ನೆಟ್ಟಿದ್ದ ಜನರು ಅದರಲ್ಲೂ ಮುಖ್ಯವಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಮುಂಗಾರು ಆಗಮನದ ಬೆನ್ನಲ್ಲೇ ಕೃಷಿ ಚಟುವಟಿಕೆಗಳು ಬಿರುಸು ಪಡೆಯಲಿವೆ. ಕೃಷಿ, ತೋಟಗಾರಿಕೆ ಇಲಾಖೆಯೂ ರೈತರಿಗೆ ಅಗತ್ಯವಿರುವ ಗುಣಮಟ್ಟದ ಬಿತ್ತನೆ ಬೀಜ, ಕೃಷಿ ಸಾಧನ, ಸಲಕರಣೆಗಳು, ರಸಗೊಬ್ಬರ ಪೂರೈಕೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ದೇಶದಲ್ಲಿರುವ ಒಟ್ಟಾರೆ ಕೃಷಿ ಪ್ರದೇಶದಲ್ಲಿ ಶೇ. 52ರಷ್ಟು ಭಾಗವು ಮಳೆಯನ್ನೇ ಅವಲಂಬಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ ದೇಶದ ಒಟ್ಟಾರೆ ಕೃಷಿ ಉತ್ಪಾದನೆಯಲ್ಲಿ ಸುಮಾರು ಶೇ. 40ರಷ್ಟನ್ನು ಮಳೆಯಾಶ್ರಿತ ಕೃಷಿಯಿಂದಲೇ ಉತ್ಪಾದಿಸಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಜಲಮೂಲಗಳ ಮರುಪೂರಣ ಮತ್ತು ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಿಸಲು ಉತ್ತಮ ಮಳೆ ಸುರಿಯುವುದು ಅತ್ಯವಶ್ಯಕವಾಗಿದೆ.

ಕುಡಿಯುವ ನೀರು, ಜಲ ವಿದ್ಯುದಾಗಾರಗಳಿಗೆ ಅವಶ್ಯವಿರುವ ನೀರಿಗೂ ಮಳೆಯೇ ಆಧಾರವಾಗಿದೆ. ದೇಶದಲ್ಲಿ ಆಹಾರ ಭದ್ರತೆ ಮತ್ತು ಆರ್ಥಿಕತೆಗೆ ಮಳೆ ನಿರ್ಣಾಯಕ ಕೊಡುಗೆಯನ್ನು ನೀಡುತ್ತದೆ. ಈ ಬಾರಿ ದೇಶದಲ್ಲಿ ವಾಡಿಕೆಯಷ್ಟು ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದು ರೈತರು ಅತ್ಯುತ್ಸಾಹದಿಂದಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸನ್ನದ್ಧರಾಗಿದ್ದಾರೆ. ಪ್ರಸಕ್ತ ವರ್ಷದ ಮುಂಗಾರು ಋತು, ಭೂಮಿ ಹಚ್ಚಹಸುರಿನಿಂದ ನಳನಳಿಸುವಂತೆ ಮಾಡಿ, ರೈತರ ಬದುಕನ್ನು ಹಸನಾಗಿಸಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next