ಬೆಳಗಾವಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ವೀರ ಯೋಧ ರಾಹುಲ್ ಸುಳಗೇಕರ ಪಾರ್ಥಿವ ಶರೀರ ತವರಿಗೆ ಬಂದಿಳಿದಿದ್ದು, ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು.
ವಿಶೇಷ ವಿಮಾನದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಂದ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಮರಾಠಾ ಲಘು ಪದಾತಿ ದಳದ ಸೈನಿಕರು ಗೌರವ ವಂದನೆ ಸಲ್ಲಿಸಿದರು. ಅರ್ಧ ಗಂಟೆಗಳ ಕಾಲ ವಿಮಾನ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿತ್ತು.
ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಎಂಎಲ್‌ಐಆರ್ ಸಿ ಬ್ರಿಗೇಡಿಯರ್ ಗೋವಿಂದ ಕಾಲವಾಡ, ಪೊಲೀಸ್ ಕಮೀಷನರ್ ಲೋಕೇಶ ಕುಮಾರ್, ವಿಮಾನ ನಿಲ್ದಾಣ ಅಧಿಕಾರಿ ರಾಜೇಶ ಕುಮಾರ್ ಮೌರ್ಯ ಸೇರಿದಂತೆ ಇತರರು ವೀರ ಯೋಧನಿಗೆ ನಮನ ಸಲ್ಲಿಸಿದರು.
ಮೆರವಣಿಗೆಯೊಂದಿಗೆ ಬೆಳಗಾವಿಗೆ ಆಗಮಿಸಿದ ಪಾರ್ಥಿವ ಶರೀರವನ್ನು ವಿವಿಧ ಸಂಘ- ಸಂಸ್ಥೆಗಳು, ಮಾಜಿ ಸೈನಿಕರು ಹೂ ಹಾರ ಹಾಕಿ ರಾಹುಲ್ ಸುಳಗೇಕರ ಅಮರ್ ರಹೇ ಎಂದು ಜೈ ಘೋಷ ಹಾಕಿದರು. ಸ್ವಗ್ರಾಮ ಉಚಗಾಂವದತ್ತ ಮೆರವಣಿಗೆ ಸಾಗಿದೆ.