ಹೊಸದಿಲ್ಲಿ: ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಪೊಲೀಸ್ ಅಧಿಕಾರಿಯ ಜೊತೆ ಪ್ರಯಾಣಿಸುತ್ತಿದ್ದಾಗ ಸಿಕ್ಕಿ ಬಿದ್ದ ಹಿಜ್ಬುಲ್ ಉಗ್ರ ಜನವರಿ 26ರ ಗಣರಾಜ್ಯದ ದಿನ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಬಯಲಾಗಿದೆ.
ರಕ್ಷಣಾ ಗುಪ್ತಚರ ಸಂಸ್ಥೆಯು ಈ ಮಾಹಿತಿಯನ್ನು ಬಯಲು ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಜಮ್ಮು ಕಾಶ್ಮೀರದ ಡೆ್ಪ್ಯುಟಿ ಪೊಲೀಸ್ ಸುಪರಿಟೆಂಡೆಂಟ್ ದೇವಿಂದರ್ ಸಿಂಗ್ ಜೊತೆ ನವೀದ್ ಬಾಬು ಎಂಬ ಉಗ್ರನನ್ನು ಸೆರೆ ಹಿಡಿಯಲಾಗಿತ್ತು. ಈತ ಹಿಜ್ಬುಲ್ ಉಗ್ರ ಸಂಘಟನೆಯ ಕೇಂದ್ರ ಮತ್ತು ದಕ್ಷಿಣ ಕಾಶ್ಮೀರದ ಮುಖ್ಯುಸ್ಥನಾಗಿದ್ದ.
ಉಗ್ರ ನವೀದ್ ಬಾಬು ತನ್ನ ಸಹಚರರಿಗೆ ಬಾಂಬ್ ಮತ್ತಿತರ ಸ್ಪೋಟಕಗಳನ್ನು ತಲುಪಿಸಲಿದ್ದ ಎನ್ನಲಾಗಿದೆ. ಆ ಉಗ್ರರು ಜದೋರಾದಲ್ಲಿ ವಿಧ್ವಂಸಕ ಕೆಲಸ ಮಾಡಲಿದ್ದರು. ಪುಲ್ವಾಮಾ ಸಮೀಪದ ನಿವಾ- ಪಕೇರ್ಪುರ ರಸ್ತೆಯಲ್ಲಿ ಐಈಡಿ ಸ್ಪೋಟಕಗಳನ್ನು ಸ್ಪೋಟಿಸಲು ಇವರು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ವರದಿಯಾಗಿದೆ.
ಬಂಧಿತ ನವೀದ್ ಬಾಬು ಹಿಜ್ಬುಲ್ ಮುಜಾಹಿದ್ದೀನ್ ಸಂಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದ ಎನ್ನಲಾಗಿದೆ. ಕಳೆದ ವರ್ಷ ಪುಲ್ವಾಮದಲ್ಲಿ ನಡೆದಿದ್ದ ಭೀಕರ ಕಾರ್ ಬಾಂಬ್ ಸ್ಪೋಟಕ್ಕೆ ಈತನೇ ಕಾರಣನಾಗಿದ್ದ ಎಂದು ವರದಿಯಾಗಿದೆ. ಪುಲ್ವಾಮಾ ದಾಳಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಸೈನಿಕರು ಅಸುನೀಗಿದ್ದರು.