Advertisement

ಮುಂದುವರಿದ ಪಿಎಫ್‌ಐ, ಎಸ್‌ಡಿಪಿಐ ನಾಯಕರ ಬಂಧನ ಸತ್ರ

12:53 AM Sep 28, 2022 | Team Udayavani |

ಮಂಗಳೂರು: ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್‌ಐ)ನಾಯಕರ ಮನೆ, ಕಚೇರಿಗಳ ಮೇಲೆ ಕೆಲವು ದಿನಗಳ ಹಿಂದೆ ನಡೆದ ಎನ್‌ಐಎ, ಪೊಲೀಸ್‌ ದಾಳಿಯ ಮುಂದು ವರಿದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ 14ರಷ್ಟು ಪಿಎಫ್‌ಐ, ಎಸ್‌ಡಿಪಿಐ ಮುಖಂಡರನ್ನು ಪೊಲೀಸರು ಸೋಮವಾರ ಬೆಳಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದಾರೆ.

Advertisement

ಎನ್‌ಐಎ ದಾಳಿ ಬಳಿಕ ಹಲವು ರಾಜ್ಯಗಳಲ್ಲಿ ಪಿಎಫ್‌ಐ ಕಾರ್ಯಕರ್ತರು ಹಿಂಸಾಚಾರಕ್ಕೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಬರದಂತೆ ಹಿರಿಯ ಪೊಲೀಸ್‌ಅಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲೆ
ಯಲ್ಲೂ ಬಂಧನ ಕೈಗೊಳ್ಳಲಾಗಿದೆ.

ಮುಂಜಾನೆ 5 ಗಂಟೆ ವೇಳೆಗೆ ಜಿಲ್ಲಾ ಪೊಲೀಸ್‌ ವ್ಯಾಪ್ತಿ ಹಾಗೂ ಮಂಗಳೂರು ನಗರ ಪೊಲೀಸ್‌ ವ್ಯಾಪ್ತಿಯಲ್ಲಿನ ಪಿಎಫ್‌ಐ ನಾಯಕರ ಮನೆಗೆ ಪೊಲೀಸರು ದಾಳಿ ನಡೆಸಿದರು. ಕಮಿಷನರ್‌ ವ್ಯಾಪ್ತಿಯಲ್ಲಿ 10 ಮಂದಿ ಹಾಗೂ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 4 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ಸುರತ್ಕಲ್‌, ಉಳ್ಳಾಲ, ಬಜಪೆ, ಕುದ್ರೋಳಿ, ಮೂಡುಬಿದಿರೆ ಠಾಣೆ ವ್ಯಾಪ್ತಿಯ 10 ಮಂದಿ ಮುಖಂಡರು, ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಪುತ್ತೂರಿನ ಪಿಎಫ್ಐ ಅಧ್ಯಕ್ಷ, ಬಂಟ್ವಾಳದಲ್ಲಿ ಪಿಎಫ್ಐ ನಗರ ಜಿಲ್ಲಾಧ್ಯಕ್ಷ ಸೇರಿದಂತೆ ಮೂವರ ಬಂಧನವಾಗಿದೆ. ಸಿಆರ್‌ಪಿಸಿ 107 ಮತ್ತು 151 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಉಳ್ಳಾಲ ಮಾಸ್ತಿಕಟ್ಟೆಯ ನವಾಜ್‌ ಉಳ್ಳಾಲ (46), ಉಳ್ಳಾಲ ಕೆ.ಸಿ. ನಗರದ ಶಬೀರ್‌ ಅಹ್ಮದ್‌ (30), ಸುರತ್ಕಲ್‌ ಚೊಕ್ಕಬೆಟ್ಟು 8ನೇ ಬ್ಲಾಕ್‌ನ ನೌಶಾದ್‌ ದಾವೂದ್‌, ಬಜಪೆ ಕಿನ್ನಿ ಪದವು ಕೆ.ಕೆ. ನಗರದ ಇಸ್ಮಾಯಿಲ್‌ ಎಂಜಿನಿಯರ್‌(47), ಬಜಪೆ ಕೋಂಚಾರಿನ ಮಾಜಿ ಪಂಚಾಯತ್‌ ಸದಸ್ಯ ನಜೀರ್‌ ಬಜಪೆ (40), ಮೂಡು
ಬಿದಿರೆ ಮುಂಡೇಲು ಮನೆಯ ಇಬ್ರಾಹಿಂ(38), ಮಂಗಳೂರು ಜಪ್ಪುಕಾಶಿಯಾದ ಶರೀಫ್‌ ಪಾಂಡೇಶ್ವರ, ಕುದ್ರೋಳಿ ಬಂದರು ಎಸ್‌ಡಿಪಿಐ ಮುಖಂಡ ಮುಜೈರ್‌ (32), ಕುದ್ರೋಳಿಯ ಮೊಹಮ್ಮದ್‌ ನೌಫಲ್‌(35), ಮೂಡುಶೆಡ್ಡೆ- ಉಳಾçಬೆಟ್ಟುವಿನ ಎಸ್‌ಡಿಪಿಐ ವಲಯ ಅಧ್ಯಕ್ಷ ಇಕ್ಬಾಲ್‌ ಕೆತ್ತಿಕಲ್‌ (30), ಬಂಟ್ವಾಳ ತಾಲೂಕು ನರಿಕೊಂಬುವಿನ ಇಜಾಜ್‌ ಅಹ್ಮದ್‌, ಬಂಟ್ವಾಳ ಕಸಬಾದ ಗೂಡಿನಬಳಿ ನಿವಾಸಿ ಫಿರೋಜ್‌ ಖಾನ್‌ (40), ಗೂಡಿನ ಬಳಿಯ ಮಹಮ್ಮದ್‌ ರಾಝಿಕ್‌ (34) ಹಾಗೂ ಪುತ್ತೂರು ಅರಿಯಡ್ಕದ ಜಾಬೀರ್‌ ಅರಿಯಡ್ಕ (40) ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎಲ್ಲರನ್ನೂ 7 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಮಿಷನರೆಟ್‌ ವ್ಯಾಪ್ತಿಯ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಬಳಿಕ ಆರೋಗ್ಯ ಸಮಸ್ಯೆ ಕಾರಣದಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬೆಳಕು ಹರಿಯುವ ಮುನ್ನ ಕಾರ್ಯಾಚರಣೆ ಪೂರ್ಣ
ಪೊಲೀಸ್‌ ಇಲಾಖೆಯ ಮೇಲಧಿಕಾರಿಗಳ ಸೂಚನೆ ಮೇರೆಗೆ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ಬಂಧನ ಕಾರ್ಯಾಚರಣೆ ನಡೆದಿದೆ. ದ.ಕ.ದಲ್ಲಿ ಬೆಳಗ್ಗಿನ ಜಾವ ಸುಮಾರು 3ರಿಂದ 4 ಗಂಟೆಯೊಳಗೆ ಏಕಾಕಾಲ
ದಲ್ಲಿ ಕಾರ್ಯಾಚರಣೆ ನಡೆಸಿ ಅವರವರ ಮನೆಯಿಂದಲೇ ಬಂಧಿಸಲಾಗಿದೆ. ರಾತ್ರಿಯ ಸಮಯವಾಗಿದ್ದರಿಂದ ಮನೆಯವರ ಪ್ರತಿರೋಧ ಬಿಟ್ಟರೆ ಬೇರೆ ಸಂಘಟಿತವಾದ ಯಾವ ವಿರೋಧವೂ ಇಲ್ಲದೆ ನಿರಾಯಾಸವಾಗಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಬೆಳಗಾಗುವುದರೊಳಗೆ ಇಡೀ ಕಾರ್ಯಾಚರಣೆ ಪೂರ್ಣಗೊಂಡಿತು.

ಉಡುಪಿ: ಜಿಲ್ಲೆಯ ನಾಲ್ಕು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ದಾಳಿ ನಡೆಸಿದ ಪೊಲೀಸರು ಪಿಎಫ್ಐ ಸಂಘಟನೆಯ ನಾಲ್ವರನ್ನು ಬಂಧಿಸಿದ್ದಾರೆ. ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಇಲಿಯಾಸ್‌ ಹೂಡೆ, ಉಡುಪಿ ನಗರ ಠಾಣೆ ವ್ಯಾಪ್ತಿ ಮೊಹಮ್ಮದ್‌ ಅಶ್ರಫ್ ಬಾವ, ಕುಂದಾಪುರ ಠಾಣೆ ವ್ಯಾಪ್ತಿ ಆಸಿಫ್ ಕೋಟೇಶ್ವರ, ಗಂಗೊಳ್ಳಿ ಠಾಣೆ ವ್ಯಾಪ್ತಿಯ ರಜಾಬ್‌ ಬಂಧಿತರು.

ನಾಲ್ವರನ್ನು ವಿಚಾರಣೆ ನಡೆಸಿದ ಪೊಲೀಸರು ಮುಚ್ಚಳಿಕೆ ಬರೆಸಿ ಕೊಂಡು ಆಯಾ ವ್ಯಾಪ್ತಿಯ ತಹಶೀಲ್ದಾರರ‌ (ತಾಲೂಕು ದಂಡಾಧಿಕಾರಿ) ಮುಂದೆ ಹಾಜರುಪಡಿಸಿದ್ದಾರೆ. ಮೊಹಮ್ಮದ್‌ ಅಶ್ರಫ್, ಇಲಿಯಾಸ್‌ ಹೂಡೆಗೆ ಸೆ. 29ರ ವರೆಗೆ ಮತ್ತು ಆಸಿಫ್ ಕೊಟೇಶ್ವರ, ರಜಾಬ್‌ ಗಂಗೊಳ್ಳಿಗೆ ಅ. 2ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಾಪು ಪೊಲೀಸ್‌ ಠಾಣೆ ವ್ಯಾಪ್ತಿಯ ಓರ್ವ ಮತ್ತು ಉಡುಪಿ ನಗರ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಶೋಧ ಮುಂದುವರಿದಿದೆ. ಕಾಪು ಠಾಣೆ ವ್ಯಾಪ್ತಿಯಲ್ಲಿರುವ ವ್ಯಕ್ತಿ ಈಗಾಗಲೇ ವಿದೇಶಕ್ಕೆ ತೆರಳಿದ್ದು, ನಗರ ಠಾಣೆಯ ಇನ್ನೋರ್ವ ತಲೆಮರೆಸಿ ಕೊಂಡಿರುವುದಾಗಿ ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.

ಇವರೆಲ್ಲರೂ ಪಿಎಫ್ಐ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರಾಗಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ದೇಶಾದ್ಯಂತ ದಾಳಿ ನಡೆಸಿ, ಪಿಎಫ್ಐ ಸಂಘಟನೆಯ ಹಲವು ನಾಯಕರನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿಯೂ ಹಲವೆಡೆ ಪ್ರತಿ ಭಟನೆಗಳು ನಡೆದಿದ್ದವು. ಎನ್‌ಐಎ ದಾಳಿಗೆ ಪರ್ಯಾಯವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಚು ರೂಪಿಸಲು ಯತ್ನಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಪೊಲೀಸರಿಗೆ ಬಂದಿರುವ ನಿರ್ದಿಷ್ಟ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಮುಂಜಾಗ್ರತಾ ಕ್ರಮ ವಾಗಿ ಕಾರ್ಯಾಚರಣೆ ನಡೆಸಿ ಕೆಲವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಕೋಟೇಶ್ವರ, ಗಂಗೊಳ್ಳಿಯಲ್ಲಿ ದಾಳಿ
ಕುಂದಾಪುರ: ಮುಂಜಾಗ್ರತಾ ಕ್ರಮವಾಗಿ ಕೋಟೇಶ್ವರ ಹಾಗೂ ಗಂಗೊಳ್ಳಿಯ ಇಬ್ಬರು ಪಿಎಫ್‌ಐ ಮುಖಂಡರನ್ನು ಮಂಗಳವಾರ ಬಂಧಿಸಲಾಗಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಕೋಟೇಶ್ವರದ ಆಸಿಫ್‌ ಹಾಗೂ ಗಂಗೊಳ್ಳಿಯ ರಜಾಬ್‌ನನ್ನು
ಬಂಧಿಸಿ ತಾಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಲಾಗಿದೆ. ಇಬ್ಬರಿಗೂ ಅ. 2ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಜಾಬ್‌ ಮೇಲೆ ಈ ಹಿಂದೆ ಹಿಜಾಬ್‌ ಗಲಾಟೆ ಸಂದರ್ಭ ಮಾರಕಾಯುಧ ಹಿಡಿದು ತಿರುಗಿ ಭಯಗ್ರಸ್ತ ವಾತಾವರಣ ನಿರ್ಮಿಸಿದ ಪ್ರಕರಣ ದಾಖಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next