ಕುಂದಾಪುರ: ಕೋಟೇಶ್ವರದ ಪ್ರಸನ್ನ ನಾರಾಯಣ ಆಚಾರ್ಯ ಅವರ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸರು ಇಬ್ಬರು ವೃತ್ತಿಪರ ಕಳ್ಳರನ್ನು ಬಂಧಿಸಿದ್ದಾರೆ.
ಕಾಸರಗೋಡಿನ ಹಾಶೀಮ್ ಎ.ಎಚ್. (42) ನನ್ನು ಕಾಸರಗೋಡಿನಲ್ಲಿ ಹಾಗೂ ಅಬೂಬಕ್ಕರ್ ಸಿದ್ದಿಕ್ (48) ನನ್ನು ಮಡಿಕೇರಿಯಲ್ಲಿ ಕುಂದಾಪುರ ಎಸ್‌ಐಗಳಾದ ಸದಾಶಿವ ಗವರೋಜಿ ಹಾಗೂ ಪ್ರಸಾದ್ ಅವರ ನೇತೃತ್ವದ ಪೊಲೀಸರ ವಿಶೇಷ ತಂಡ ಬಂಧಿಸಿದೆ. ಆರೋಪಿಗಳನ್ನು ಶುಕ್ರವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇವರನ್ನು ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಹೆಚ್ಚಿನ ವಿಚಾರಣೆ ನಡೆಸಿದ್ದು, ಈ ವೇಳೆ ಕುಂದಾ
ಪುರ ಮಾತ್ರವಲ್ಲದೆ, ಉಡುಪಿ ನಗರ, ಮಲ್ಪೆ ಠಾಣೆ ವ್ಯಾಪ್ತಿಯಲ್ಲೂ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
ಕಳ್ಳತನಗೈದ ಚಿನ್ನಾಭರಣ ಗಳನ್ನು ಮಂಜೇಶ್ವರದ ಜುವೆಲರಿ ಮಳಿಗೆಯೊಂದರಲ್ಲಿ ಮಾರಾಟ ಮಾಡಿದ್ದು, 15 ಲಕ್ಷ ರೂ. ಮೌಲ್ಯದ 300 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ. ಮೌಲ್ಯದ 1,481 ಗ್ರಾಂ. ಬೆಳ್ಳಿ ಸೇರಿ ಒಟ್ಟು 16 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Related Articles
ಆರೋಪಿಗಳು ಅಂತಾರಾಜ್ಯ ವೃತ್ತಿಪರ ಕಳ್ಳರಾಗಿದ್ದು, ಈಗಾಗಲೇ ಕೇರಳ ಸಹಿತ ದ.ಕ. ಜಿಲ್ಲೆಯ ವಿವಿಧೆಡೆ ಕಳ್ಳತನ ಹಾಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಎಸ್ಪಿ ಅಕ್ಷಯ್ ಎಂ. ಎಚ್., ಎಎಸ್ಪಿಎಸ್. ಟಿ. ಸಿದ್ದಲಿಂಗಪ್ಪ ಅವರ ನಿರ್ದೇಶನದಂತೆ ಕುಂದಾಪುರ ಡಿವೈಎಸ್ಪಿ
ಬೆಳ್ಳಿಯಪ್ಪ ಕೆ.ಯು. ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ. ಆರ್. ನೇತೃತ್ವದಲ್ಲಿ, ಕುಂದಾಪುರ ಎಸ್‌ಐಗಳಾದ ಸದಾಶಿವ ಗವರೋಜಿ, ಪ್ರಸಾದ್ ಕುಮಾರ್ ಕೆ. , ಎಎಸ್‌ಐ ಸುಧಾಕರ, ಸಿಬಂದಿಯಾದ ಸಂತೋಷ ಕುಮಾರ್ ಕೆ.ಯು., ಸಂತೋಷ ಕುಮಾರ್, ರಾಮ ಪೂಜಾರಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ದಿನೇಶ್ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಹ ಕರಿಸಿದೆ.