Advertisement

ಮಹಿಳೆ ಜತೆ ಅಸಭ್ಯ ನಡೆ: ರೈಲ್ವೆ ಟಿಟಿಇ ಬಂಧನ

12:09 PM Mar 21, 2023 | Team Udayavani |

ಬೆಂಗಳೂರು: ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದ ರೈಲ್ವೆ ಅಧಿಕಾರಿಯನ್ನು ದಂಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಟಿ.ಸಿ.ಪಾಳ್ಯ ನಿವಾಸಿ ವಿ. ಸಂತೋಷ್‌ ಕುಮಾರ್‌(42) ಬಂಧಿತ.

Advertisement

ಪಶ್ಚಿಮ ಬಂಗಾಳ ಮೂಲದ ಪಿಯಾಲಿ ಬರ್ಮನ್‌ ರಾಯ್‌ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಪಿಯಾಲಿ ಬರ್ಮನ್‌ ರಾಯ್‌ ಮಾ.13ರಂದು ಹೌರಾದಿಂದ ಬೆಂಗಳೂರಿಗೆ ಬರುತ್ತಿದ್ದರು. ಮಾ.14ರಂದು ಸಂಜೆ 5.30ರ ಸುಮಾರಿಗೆ ಕೆ.ಆರ್‌.ಪುರ ರೈಲ್ವೆ ನಿಲ್ದಾಣದಲ್ಲಿ ಇಳಿದುಕೊಂಡು ಲಗೇಜ್‌ ಜತೆ ಬರುತ್ತಿದ್ದರು. ಆಗ ಪ್ಲಾಟ್‌ ಫಾರಂನಲ್ಲಿದ್ದ ಟಿಟಿಇ ಸಂತೋಷ್‌, ಯುವತಿಗೆ ಪ್ರಯಾಣದ ಟಿಕೆಟ್‌ ತೋರಿಸುವಂತೆ ತಿಳಿಸಿದ್ದಾರೆ.

ಆಗ ಯುವತಿ ಬ್ಯಾಗ್‌ನಲ್ಲಿದ್ದು, ಸ್ವಲ್ಪ ಸಮಯ ಕೊಡಿ ಎಂದಿದ್ದಾರೆ. ಅದಕ್ಕೆ ಆಕ್ರೋಶಗೊಂಡ ಸಂತೋಷ್‌, ಯುವತಿಯ ಬ್ಯಾಗ್‌ ಎಳೆದಾಡಿದ್ದು, ಆಕೆಯ ಮುಖದ ಮೇಲೆ ಪೆನ್‌ನಿಂದ ಮಾರ್ಕ್‌ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಟಿಟಿಇ ಸಂತೋಷ್‌ ಮದ್ಯ ಸೇವಿಸಿ ಈ ರೀತಿ ವರ್ತಿಸಿದ್ದಾನೆ. ಜತೆಗೆ ಕೆಟ್ಟ ಪದಗಳಿಂದ ಯುವತಿಗೆ ನಿಂದಿಸಿದ್ದಾನೆ. ಪೊಲೀಸರು ಮಾತ್ರವಲ್ಲ ಬೇರೆ ಯಾರಿಗಾದರೂ ದೂರು ನೀಡುವಂತೆ ಎಚ್ಚರಿಕೆ ನೀಡಿದ್ದಾನೆ ಎಂದು ಯುವತಿ ದೂರು ನೀಡಿದ್ದರು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.

ಎಸ್ಪಿ ಡಾ ಎಸ್‌.ಕೆ.ಸೌಮ್ಯಲತಾ ನೇತೃತ್ವದಲ್ಲಿ ಡಿವೈಎಸ್ಪಿ ರವಿಕುಮಾರ್‌, ವೃತ್ತ ನಿರೀಕ್ಷಕ ಜಿ. ಪ್ರಭಾಕರ್‌, ದಂಡು ರೈಲ್ವೆ ಪಿಎಸ್‌ಐ ಎಂ.ಜಿ. ನಟರಾಜ್‌, ಎಎಸ್‌ಐ ಪ್ರಕಾಶ್‌, ಸಿಬ್ಬಂದಿ ಮಂಜುನಾಥ್‌ ತಂಡ ಕಾರ್ಯಾಚರಣೆ ನಡೆಸಿದೆ.

ಕಿರುಕುಳ ದೃಶ್ಯ ವಿಡಿಯೋ ವೈರಲ್‌, ಸಾರ್ವಜನಿಕರಿಂದ ಭಾರಿ ಆಕ್ರೋಶ : ಘಟನೆಯ ಕೆಲ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವೈರಲ್‌ ಆಗಿತ್ತು. ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಟಿಟಿಇ ಸಂತೋಷ್‌ಗೆ ತರಾಟೆ ತೆಗೆದುಕೊಳ್ಳುತ್ತಿರುವುದು, ಯುವತಿಗೆ ಅವಾಚ್ಯ ಶಬ್ದಗಳಿಂದ ಸಂತೋಷ್‌ ನಿಂದಿಸುತ್ತಿರುವ ವಿಡಿಯೋಗಳು ವೈರಲ್‌ ಆಗಿತ್ತು. ಅದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Advertisement

ಹೀಗಾಗಿ ಈ ವಿಡಿಯೋ ತುಣುಕುಗಳನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಎಸ್ಪಿ ಡಾ ಎಸ್‌.ಕೆ. ಸೌಮ್ಯಲತಾ ಘಟನೆ ಬಗ್ಗೆ ಪರಿಶೀಲಿಸಿ, ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಪತ್ತೆ ಹಚ್ಚಿದ ರೈಲ್ವೆ ಪೊಲೀಸರು ಆಕೆಯಿಂದ ದೂರು ಸ್ವೀಕರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next