ಯಾದಗಿರಿ: ಜಿಲ್ಲೆಯ ಸುರಪುರ ತಹಸೀಲ್ದಾರರ ನೈಸರ್ಗಿಕ ವಿಕೋಪ ವಿರ್ವಹಣೆಯ ಖಾತೆಯಿಂದ 75,59,900 ರೂಪಾಯಿ ವರ್ಗಾವಣೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಚಾಲಾಕಿ ಗ್ಯಾಂಗ್ ಸರ್ಕಾರಿ ಖಜಾನೆಯ ಮೇಲೆಯೇ ಕಣ್ಣಿರಿಸಿ ನಕಲಿ ಸೀಲ್ ಬಳಸಿ ಹಣವನ್ನು ಎಗರಿಸಿದ್ದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಸುರಪುರ ನಗರದ ಆಕ್ಸಿಸ್ ಬ್ಯಾಂಕ್‌ನಲ್ಲಿ ತಹಸೀಲ್ದಾರ ಕಚೇರಿಯ ಖಾತೆ ಸಂಖ್ಯೆ 91901008033954
ಯಲ್ಲಿದ್ದ 3.55 ಕೋಟಿ ಹಣದಲ್ಲಿ ಜೂನ್ 1 ರಂದು ಬರೋಬ್ಬರಿ 75,59,900 ರೂಪಾಯಿ ಬೇರೆ ಖಾತೆ ವರ್ಗವಾಗಿತ್ತು. ತಹಸೀಲ್ದಾರರು ಕೋವಿಡ್‌ಗೆ ತುತ್ತಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರಿಂದ ಈ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ. ತಹಸೀಲ್ದಾರರ ಸಹಿಯಿಲ್ಲದೇ ಹಣ ತೆಗೆಯಲು ಸಾಧ್ಯವೇ ಇಲ್ಲ. ಆದರೆ ಇಲ್ಲಿ ತಾಳಿಕೋಟೆಯ ಮಹಾಲಕ್ಷ್ಮೀ ಎಂಟರ್ ಪ್ರೈಸೆಸ್‌ನ ಲಕ್ಷ್ಮೀ ಕಟ್ಟಿಮನಿ ಅವರ ಪತಿ ರಾಜು ಕಟ್ಟಿಮನಿ ಹಾಗೂ ಆಕ್ಸಿಸ್ ಬ್ಯಾಂಕ್‌ನ ಸೇಲ್ಸ್ ಅಧಿಕಾರಿ ವಿಜಯಕುಮಾರ ಚೌದ್ರಿ ಎನ್ನುವವರು ಖಾತೆಗೆ ಕನ್ನ ಹಾಕಿದ್ದರು.
ತಹಸೀಲ್ದಾರರು ಸೋಂಕಿನಿಂದ ಗುಣಮುಖಗೊಂಡು ಮರಳಿದ ವೇಳೆ ಹೆಚ್ಚುವರಿ ಹಣ ಬೇಕಿದ್ದಲ್ಲಿ ಕೋರಿಕೆ ಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೇಳಿದ್ದರಿಂದ ಸೆ.22ರಂದು ತಹಸೀಲ್ದಾರರು ತಮ್ಮ ಕಚೇರಿಯ ಶಿರಸ್ತೇದಾರ ಮತ್ತು ವಿಷಯ ನಿರ್ವಹಕರನ್ನು ವಿವರಣೆ ಕೇಳಿದ್ದರು. ಈ ವೇಳೆ ಸಿಬ್ಬಂದಿ ಬ್ಯಾಂಕ್‌ಗೆ ತೆರಳಿ ಖಾತೆಯ ಸ್ಟೇಟಮೆಂಟ್ ಪಡೆಯಲು ಹೋದ ಸಂದರ್ಭದಲ್ಲಿ 2020ರ ಜೂನ್ 1ರಂದು ಖಾತೆಯಿಂದ ಹಣ ಮಹಾಲಕ್ಷ್ಮೀ ಎಂಟರ್ ಪ್ರೈಸೆಸ್ ಹೆಸರಿಗೆ ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿತ್ತು. ತಕ್ಷಣವೇ ಎಚ್ಚೆತ್ತ ತಹಸೀಲ್ದಾರ ನಿಂಗಪ್ಪ ಬಿರಾದಾರ ಅಂದೇ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಲಕ್ಷ್ಮೀ ಮತ್ತು ರಾಜು ಕಟ್ಟಿಮನಿಯಿಂದ 25 ಲಕ್ಷ ರೂಪಾಯಿ ಸೇರಿದಂತೆ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್ ಅಧಿಕಾರಿ ವಿಜಯಕುಮಾರರಿಂದ 50 ಲಕ್ಷದ 15 ಸಾವಿರ ರೂಪಾಯಿ ಸೇರಿದಂತೆ ತಹಸೀಲ್ದಾರರ ನಕಲಿ ಸೀಲ್ ಮತ್ತು ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.