Advertisement

ಬಾಡಿಗೆ ಮನೆ ಕೇಳುವ ನೆಪದಲ್ಲಿ ಮಾಲೀಕರ ಕೈ-ಕಾಲು ಕಟ್ಟಿ ಚಿನ್ನಾಭರಣ ಲೂಟಿ: ಮೂವರ ಬಂಧನ

02:44 PM May 23, 2022 | Team Udayavani |

ಬೆಂಗಳೂರು: ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಮನೆಗೆ ಹೋಗಿ ಮಾಲೀಕರ ಕೈ-ಕಾಲು ಕಟ್ಟಿ, ಬಾಯಿಗೆ ಗಮ್‌ಟೇಪ್‌ ಸುತ್ತಿ ಚಿನ್ನಾಭರಣ ಸುಲಿಗೆ ಮಾಡಿದ್ದ ಮೂವರು ನಂದಿನಿ ಲೇಔಟ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಪಟ್ಟೇಗಾರ್‌ ಪಾಳ್ಯದ ಜಿಯಾವುಲ್ಲಾ (36), ನಂದನ್‌ (27) ಮತ್ತು ಶರತ್‌ (27) ಬಂಧಿತರು. ಆರೋಪಿಗಳಿಂದ 1.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎರಡು ದ್ವಿಚಕ್ರ ವಾಹನಗಳು ಹಾಗೂ ಇತರೆ ವಸ್ತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ನಂದಿನಿ ಲೇಔಟ್‌ನ 2ನೇ ಕ್ರಾಸ್‌ನ 2ನೇ ಬ್ಲಾಕ್‌ ಮನೆಗೆ ಮೂವರು ಆರೋಪಿಗಳು ಬಾಡಿಗೆಗೆ ಕೇಳುವ ನೆಪದಲ್ಲಿ ಮೇ 9ರಂದು ಬೆಳಗ್ಗೆ ಬಂದಿದ್ದಾರೆ. ನಂತರ 2ನೇ ಮಹಡಿಯಲ್ಲಿರುವ ಬಾಡಿಗೆ ಮನೆ ನೋಡಲು ಹೋಗಿದ್ದಾರೆ. ಈ ವೇಳೆ ಮನೆ ಇಷ್ಟೊಂದು ಗಲೀಜಾಗಿದೆ ಎಂದಿದ್ದಾರೆ. ಆಗ ಮನೆಯ ಮಹಿಳಾ ಮಾಲೀಕರು ಒಳಗಡೆ ಹೋಗುತ್ತಿದ್ದಂತೆ ಹಿಂದಿನಿಂದ ಹೋದ ಆರೋಪಿಗಳು, ಮಹಿಳೆಯ ಕೈ-ಕಾಲು ಕಟ್ಟಿ ಹಾಕಿ, ಬಾಯಿಗೆ ಗಮ್‌ ಟೇಪ್‌ ಸುತ್ತಿದ್ದಾರೆ. ಮೈಮೇಲಿದ್ದ 48 ಗ್ರಾಂ ತೂಕದ ಚಿನ್ನದ ಸರ, ಮುತ್ತಿನ ಓಲೆ ಎತ್ತಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಜಿಯಾವುಲ್ಲಾ ವಿರುದ್ಧ ವಿಜಯನಗರ, ಮಲ್ಲೇಶ್ವರಂ, ನಂದಿನಿಲೇಔಟ್‌, ಕಾಮಾಕ್ಷಿಪಾಳ್ಯ ಸೇರಿ ವಿವಿಧ ಠಾಣೆಗಳಲ್ಲಿ ಸುಲಿಗೆ, ದ್ವಿಚಕ್ರ ವಾಹನ ಕಳವು, ಗಾಂಜಾ ಮಾರಾಟ ಪ್ರಕರಣಗಳು ದಾಖಲಾಗಿದೆ. ಎರಡನೇ ಅರೋಪಿ ನಂದನ್‌ ವಿರುದ್ಧ ವಿಜಯನಗರ ಠಾಣೆ ಸೇರಿ ವಿವಿಧೆಡೆ ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿದೆ.

Advertisement

ಮೂರನೇ ಆರೋಪಿ ಶರತ್‌ 2016ರಲ್ಲಿ ಎರಡು ಸುಲಿಗೆ ಪ್ರಕರಣಗಳಲ್ಲಿ ಜೈಲು ಸೇರಿದ್ದ. ಮೂವರು ಜೈಲಿ ನಲ್ಲಿ ಪರಿಚಯವಾಗಿದ್ದು, ಬಿಡುಗಡೆ ಬಳಿಕ ಮತ್ತೆ ಅದೇ ಕೃತ್ಯ ಮುಂದುವರಿಸಿದ್ದಾರೆ ಎಂದು ಪೊಲೀಸರು ಹೇಳಿದರು. ನಂದಿನಿಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next