ಹುಬ್ಬಳ್ಳಿ: ಜೂಜಾಟದಲ್ಲಿ ತೊಡಗಿದವರನ್ನು ಹಿಡಿಯಬೇಕಾಗಿದ್ದ ಪೊಲೀಸರೇ ಜೂಜಾಟ ಕೇಸ್ ನಲ್ಲಿ ಬಂಧನವಾಗಿದ್ದಾರೆ. ಇಸ್ಪೀಟ್ ಆಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ ನಗರ ಸಶಸ್ತ್ರ ಪಡೆಯ ನಾಲ್ವರು ಸಿಬ್ಬಂದಿಯನ್ನು ಇಲ್ಲಿನ ಗೋಕುಲರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಅಕ್ಷಯ ಕಾಲೋನಿಯ ಮನೆಯೊಂದರಲ್ಲಿ ಇಸ್ಪೀಟು ಜೂಜಿನಲ್ಲಿ ತೊಡಗಿದ್ದ ವೇಳೆ ಗೋಕುಲರಸ್ತೆ ಪೊಲೀಸರು ದಾಳಿ ಮಾಡಿದ್ದಾರೆ. ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಓರ್ವ ಇನ್‌ಸ್ಪೆಕ್ಟರ್, ಇಬ್ಬರು ಹೆಡ್ ಕಾನ್ಸ್‌ಟೆಬಲ್‌ಗಳು, ಓರ್ವ ಕಾನ್ ಸ್ಟೆಬಲ್, ಒಬ್ಬ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದೆ.
ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ ಅವರ ಸೂಚನೆಯಂತೆ, ಗೋಕುಲ ರೋಡ್ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ದಾಳಿ ಮಾಡಿದೆ.
ಇದನ್ನೂ ಓದಿ:ಚುನಾವಣಾ ವರ್ಷದಲ್ಲಿ ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ: BJP ವಿರುದ್ಧ ಎಚ್ ಡಿಕೆ ಕಿಡಿ
ಜೂಜಾಟದಲ್ಲಿ ತೊಡಗಿದ್ದ ಸಿಎಆರ್‌ನ ಇಬ್ಬರು ಹೆಡ್ ಕಾನ್‌ಸ್ಟೆಬಲ್, ಒಬ್ಬ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ಹಾಗೂ ಸಂಚಾರ ವಿಭಾಗದ ಒಬ್ಬ ಕಾನ್‌ಸ್ಟೆಬಲ್ ನನ್ನು ಪೊಲೀಸರು ಬಂಧಿಸಿದ್ದು, ಸಿಎಆರ್ ಇನ್ಸ್ ಪೆಕ್ಟರ್ ಪರಾರಿಯಾಗಿದ್ದಾರೆ.
ಜೂಜಿಗೆ ಇರಿಸಿದ್ದ 9 ಸಾವಿರ ರೂ. ನಗದು ಹಾಗೂ 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.