Advertisement

ಬೆಂಗ್ಳೂರಲ್ಲಿದ್ದ ಬಾಂಗ್ಲಾ ದೇಶೀಯರ ಬಂಧನ

06:00 AM Oct 16, 2018 | |

ಬೆಂಗಳೂರು/ಗುವಾಹಟಿ: ಅಸ್ಸಾಂನ ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಂದ ಬಂಧನವಾದ 31 ಬಾಂಗ್ಲಾದೇಶಿಯರು ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು ಎಂಬ ಮಾಹಿತಿ ಬಯಲಾಗಿದೆ.

Advertisement

ಈ ಮೂಲಕ ರಾಜ್ಯದಲ್ಲಿ ಅನಧಿಕೃತವಾಗಿ ಬಾಂಗ್ಲಾದೇಶಿಯರು ವಾಸವಿದ್ದಾರೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ದೊರೆತಿದೆ.
ಅಗರ್ತಲಾ ಮೂಲಕ ಸ್ವದೇಶಕ್ಕೆ ಹಿಂತಿರುಗುತ್ತಿದ್ದ ವೇಳೆ ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದವರ ಪೈಕಿ ಒಬ್ಟಾತ, ಬೆಂಗಳೂರಿನಲ್ಲಿ ಕುಟುಂಬ ಸದಸ್ಯರ ಜತೆ ಹಲವು ವರ್ಷಗಳಿಂದ ವಾಸವಿದ್ದು, ಬಾಂಗ್ಲಾಕ್ಕೆ ವಾಪಾಸ್‌ ಆಗುತ್ತಿದ್ದೇವೆ ಎಂಬ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಸೇರಿಲ್ಲದ ಯಾವುದೇ ವ್ಯಕ್ತಿಯನ್ನೂ ಬಾಂಗ್ಲಾದೇಶಕ್ಕೆ ಕಳುಹಿಸುವುದಿಲ್ಲ ಎಂದು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಬೆಂಗಳೂರು ಹಾಗೂ ರಾಜ್ಯದ ಇತರ ಪ್ರದೇಶಗಳಲ್ಲಿ ಅನಧಿಕೃವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಾಂಗ್ಲಾದೇಶಿಯರು ವಾಸಿಸುತ್ತಿರುವ ವಿಚಾರ ಹಲವು ಬಾರಿ ಬೆಳಕಿಗೆ ಬಂದಿದೆ. ಕಳೆದ ಆಗಸ್ಟ್‌ನಲ್ಲಿ ಸರ್ಜಾಪುರ ಠಾಣೆ ಪೊಲೀಸರು, ಅಕ್ರಮವಾಗಿ ಬೆಂಗಳೂರಿಗೆ ಆಗಮಿಸಿದ್ದ ನಾಲ್ವರು ಮಹಿಳೆಯರು ಸೇರಿ 13 ಮಂದಿಯನ್ನು ಬಂಧಿಸಿದ್ದರು. ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)ದ ಮಾಹಿತಿ ಆಧರಿಸಿ 13 ಮಂದಿಯನ್ನು ಬಂಧಿಸಿದ್ದರು.ಇದಲ್ಲದೆ, ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಬಾಂಗ್ಲಾದೇಶಿಯರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 

ಸಣ್ಣಪುಟ್ಟ ವ್ಯಾಪಾರ, ಕಟ್ಟಡ ಕೂಲಿ ಕಾರ್ಮಿಕರು ಇನ್ನಿತರೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಾವಿರಾರು ಮಂದಿ ಬಾಂಗ್ಲಾ ಪ್ರಜೆಗಳು, ಮಾದಕ ವಸ್ತುಗಳ ಮಾರಾಟ, ಅಪರಾಧಿಕ ಕೃತ್ಯಗಳ ತನಿಖೆ ವೇಳೆ ಬಂಧಿಸಲಾಗಿದೆ. ಕಳೆದ ವರ್ಷ ಆರ್‌.ಟಿ. ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದಾಗ, ಅಕ್ರಮವಾಗಿ ವಾಸ್ತವ್ಯ ಹೂಡಿದ್ದರು ಎಂಬ ಸಂಗತಿ ಗೊತ್ತಾಗಿತ್ತು. ಇತ್ತೀಚೆಗೆ ರಾಮನಗರದಲ್ಲಿ ಬಂಧಿತನಾದ ಜೆಎಂಬಿ ಉಗ್ರ ಜಹೀಲುªಲ್‌ ಇಸ್ಲಾಮ್‌ ಅಲಿಯಾಸ್‌ ಕೌಸರ್‌ನನ್ನು ಬಂಧಿಸಲಾಗಿತ್ತು. 

Advertisement

ಆತನೂ ಬಾಂಗ್ಲಾ ಮೂಲದವನಾಗಿದ್ದು, ತನ್ನ ಸಂಗಡಿಗರ ಜತೆಗೂಡಿ ಬೆಂಗಳೂರು ಸೇರಿದಂತೆ ಹಲವೆಡೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ನಿರತನಾಗಿರುವುದು ಬೆಳಕಿಗೆ ಬಂದಿತ್ತು.ಇನ್ನು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬಾಂಗ್ಲಾದೇಶದ 4000 ಸಾವಿರ ಮಂದಿ ಅಧಿಕೃತವಾಗಿ ವಾಸವಾಗಿದ್ದಾರೆ. ಬಹುತೇಕರು ಹಲವು ವರ್ಷಗಳಿಂದ  ವಾಸ್ತವ್ಯ ಹೂಡಿದ್ದಾರೆ. ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುವ ಅವರು, ಕೆಲವು ತಿಂಗಳುಗಳ ಬಳಿಕ ಸಂಬಂಧಿಕರನ್ನು ಕರೆಸಿಕೊಳ್ಳುತ್ತಾರೆ. ಈ ಸಂದ‌ರ್ಭದಲ್ಲಿ ಹಲವರು ಅನಧಿಕೃತವಾಗಿ ಬಂದಿರುವ ಸಾಧ್ಯತೆಯಿದೆ ಎಂದು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರು ಪೊಲೀಸರಿಗೆ ಮಾಹಿತಿ
ಬಾಂಗ್ಲಾದೇಶಿಗರನ್ನು ಬಂಧಿಸಿರುವ ಗುವಾಹಟಿ ರೈಲ್ವೆ ಪೊಲೀಸರು ಈಗ ಈ ಬಗ್ಗೆ ಬೆಂಗಳೂರು ಪೊಲೀಸರಿಗೂ ಮಾಹಿತಿ ನೀಡಿದ್ದು, ವಾಸವಿದ್ದ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಿದ್ದಲ್ಲಿ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಬೆಂಗಳೂರು ಪೊಲೀಸರು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next