Advertisement

ಅರ್ಕಾವತಿ-ಕುಮುದ್ವತಿ ಪುನಶ್ಚೇತನಕ್ಕೆ ಮತ್ತೂಮ್ಮೆ ಅಭಿಯಾನ

12:50 PM Sep 16, 2017 | |

ಬೆಂಗಳೂರು: ರಾಜಧಾನಿ ಬೆಂಗಳೂರಿಗರ ಕುಡಿಯುವ ನೀರು ಅಗತ್ಯತೆ ನೀಗಿಸುವ ಉದ್ದೇಶದಿಂದ “ಆರ್ಕಾವತಿ -ಕುಮುದ್ವತಿ’ ಪುನಶ್ಚೇತನ ಅಭಿಯಾನ ಕೈಗೊಳ್ಳುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಪಶ್ಚಿಮ ಭಾಗಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯದ ವ್ಯಾಪ್ತಿ ಹಾಗೂ ಹೆಸರಘಟ್ಟ ಕೆರೆ ವ್ಯಾಪ್ತಿ ಪುನಶ್ಚೇತನ ಮೂಲಕ ನಾಲ್ಕು ಟಿಎಂಸಿ ನೀರು ಸಂಗ್ರಹಣೆಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಇಂತದ್ದೊಂದು ಕಾರ್ಯಕ್ಕೆ ರಾಜ್ಯ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದಾಳತ್ವ ವಹಿಸಲಿದೆ. 

ಅನಧಿಕೃತ ಬಡಾವಣೆ, ಆಕ್ರಮ ಕೈಗಾರಿಕೆಗಳಿಗೆ ಬ್ರೇಕ್‌, ಒತ್ತುವರಿ ತೆರವು, ಕೊಳಚೆ ನೀರು ಸಂಸ್ಕರಣೆ, ಮಳೆ ನೀರು ಹರಿಯುವ ಹಾಗೂ ಕೆರೆ ಸಂಪರ್ಕದ ಕಾಲವೆಗಳ ಪುನರ್‌ ನವೀಕರಣ ಮೂಲಕ ಪುನಶ್ಚೇತನಕ್ಕೆ ರೂಪು-ರೇಷೆ ನಿಗದಿಪಡಿಸಲಾಗಿದೆ.

ಈ ಮೂಲಕ ಮಳೆಗಾಲದಲ್ಲಿ ಅರ್ಕಾವತಿ ಮತ್ತು ಕುಮುದ್ವತಿ ನೀರು ಸೇರ್ಪಡೆ ಹಾಗೂ ಎತ್ತಿನಹೊಳೆ ಯೋಜನೆಯಡಿ ನಿಗದಿಯಾಗಿರುವ ಹೆಸರಘಟ್ಟ ಕೆರೆಗೆ .80 ಟಿಎಂಸಿ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 1.75 ಟಿಎಂಸಿ ನೀರು ತುಂಬಿಸಿಕೊಳ್ಳಲು ಅವಕಾಶ ಕಲ್ಪಿಸಲು ಸಮಿತಿ ಕಾರ್ಯೋನ್ಮುಖವಾಗಿದೆ.  

ಅಕ್ಟೋಬರ್‌ 6 ರಿಂದ “ಅರ್ಕಾವತಿ-ಕುಮುದ್ವತಿ’ ಪುನಶ್ಚೇತನ ಅಭಿಯಾನಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದ್ದು , ಸಮಿತಿಯಲ್ಲಿರುವ ಎಲ್ಲ ಪಕ್ಷದ ಶಾಸಕರು  ಇದೇ ಮೊದಲ ಬಾರಿಗೆ ಪಕ್ಷಾತೀತವಾಗಿ ಇಂತದ್ದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ.

Advertisement

ಪುನಶ್ಚೇತನದ ಪೂರ್ವಬಾವಿಯಾಗಿ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಅನಧಿಕೃತ ಕಂದಾಯ ಬಡಾವಣೆಗಳಲ್ಲಿ ನಿವೇಶನಗಳ ನೋಂದಣಿ ತತಕ್ಷಣ ನಿಲ್ಲಿಸುವಂತೆ ಸೂಚನೆಯನ್ನೂ ನೀಡಲಾಗಿದ್ದು, ಗ್ರಾಮಸಭೆ ನಡೆಸಿ ಸಬ್‌ರಿಜಿಸ್ಟ್ರಾರ್‌ನನ್ನೂ ಕರೆಸಿಕೊಂಡು ಬಡಾವಣೆ ಅಧಿಕೃತ, ಒತ್ತುವರಿಯಾಗಿಲ್ಲ ಎಂಬುದು ದೃಢಪಟ್ಟರೆ ಮಾತ್ರ ನೋಂದಣಿ ಮಾಡಬೇಕು ಎಂದು ಸಾರ್ವಜನಿಕ ಲೆಕ್ಕಪ್ರ ಸಮಿತಿ ನಿರ್ದೇಶನ ನೀಡಿದೆ.

ಜತೆಗೆ 25 ದಶಲಕ್ಷ ಲೀಟರ್‌ ಕೊಳಚೆ ನೀರು ಸಂಸ್ಕರಣೆ ಮಾಡಲು ಸಂಸ್ಕರಣೆ ಘಟಕ ನಿರ್ಮಾಣ ಕಾಮಗಾರಿ ಚುರುಕುಗೊಳಿಸುವಂತೆ ಸೂಚಿಸಲಾಗಿದ್ದು, ಪೀಣ್ಯ ಕೈಗಾರಿಕೆ ಪ್ರದೇಶ ಸೇರಿದಂತೆ ಸುತ್ತಮುತ್ತಲ ಕೈಗಾರಿಕೆಗಳಿಂದ ಹೆಸರಘಟ್ಟ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 25 ದಶಲಕ್ಷ ಲೀಟರ್‌ನಷ್ಟು ಕೊಳಚೆ ನೀರು ಸೇರ್ಪಡೆಯಾಗುತ್ತಿದ್ದು ಒಂದೇ ಒಂದು ಹನಿಯೂ ಸಂಸ್ಕರಣೆಯಾಗದೆ ಹೋಗದಂತೆ ಕ್ರಮ ಕೈಗೊಳ್ಳಲು ಮಾಲಿನ್ಯ ನಿಯಂತ್ರಣ ಮಂಡಳಿಗೂ ಸಾರ್ವಜನಿಕ ಲೆಕ್ಕಪ್ರ ಸಮಿತಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಅರ್ಕಾವತಿ-ಕುಮದ್ವತಿ ಪುನಶ್ಚೇತನಕ್ಕಾಗಿ 90 ಕೋಟಿ ರೂ.ಗಳ ಯೋಜನೆ ರೂಪಿಸಿದ್ದು, ಆ ಪೈಕಿ 80 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಕೊಳಚೆ ನೀರು ಸಂಸ್ಕರಣೆ ಘಟಕಕ್ಕೆ 22 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು 25 ದಶಲಕ್ಷ ಲೀಟರ್‌ ಸಂಸ್ಕರಣೆ ಘಟಕ ಕಾಮಗಾರಿಗೂ ಚಾಲನೆ ನೀಡಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರೂ ಆಗಿರುವ ಆರ್‌.ಅಶೋಕ್‌ ತಿಳಿಸಿದ್ದಾರೆ.

ಹದಿನೈದು ವರ್ಷಗಳ ಹಿಂದೆ ನಡೆದಿತ್ತು ಪಾದಯಾತ್ರೆ
ಈ ಹಿಂದೆ 2012 ನೇ ಸಾಲಿನಲ್ಲಿ ಅರ್ಕಾವತಿ-ಕುಮುದ್ವತಿ ಪುನಶ್ಚೇತನ ಹೋರಾಟ ನಡೆಸಿ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ ಪಾದಯಾತ್ರೆ ಮಾಡಲಾಗಿತ್ತು. ಆ ನಂತರ ಆ ಭಾಗದಲ್ಲಿ ಅನಧಿಕೃತ ಬಡಾವಣೆಗಳಿಗೆ ಬ್ರೇಕ್‌ ಹಾಕಿ ಅಕ್ರಮ ಕೈಗಾರಿಕೆಗಳನ್ನು ಮುಚ್ಚಿಸಲಾಗಿತ್ತು. ಕೆಲವೆಡೆ ಕಾಲುವೆಗಳ ನವೀಕರಣವೂ ಮಾಡಲಾಗಿತ್ತು.

ಅದರ ಪರಿಣಾಮವೇ ಇತ್ತೀಚೆಗೆ ಸುರಿದ ಮಳೆಗೆ ಹೆಸರಘಟ್ಟ ಕೆರೆ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬಂದಿದೆ.  ಆದರೆ, ಒತ್ತುವರಿ ತೆರವು ಹಾಗೂ ಕಾಲುವೆಗಳ ನವೀಕರಣ ಆಗಿರಲಿಲ್ಲ. ತಾಜ್ಯ ನೀರು ಸಂಸ್ಕರಣ ಘಟಕಗಳ ನಿರ್ಮಾಣ ಕಾರ್ಯ ವಿಳಂಬವಾಗಿ ಕೆರೆ ಮತ್ತು ಜಲಾಶಯಕ್ಕೆ ಕೊಳಚೆ ನೀರು ಸೇರ್ಪಡೆಯಾಗುತ್ತಲೇ ಇತ್ತು.

ಐದು ವರ್ಷದಿಂದ ನೀರು ಪೈರೈಕೆಯಿಲ್ಲ
ತಿಪ್ಪಗೊಂಡನಹಳ್ಳಿ ಜಲಾಶಯ 1,453 ಚದರ ಕಿ.ಮೀ ಜಲಾನಯನ ಪ್ರದೇಶ ಹೊಂದಿದ್ದು, ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಮಾಗಡಿ ಭಾಗದ ವ್ಯಾಪ್ತಿ ಒಳಗೊಂಡಿದೆ. 125 ದಶಲಕ್ಷ ಲೀಟರ್‌ ನೀರು ಪ್ರತಿನಿತ್ಯ ಪೂರೈಕೆ ಮಾಡುವ ಸಾಮರ್ಥ್ಯ ಸಹ ಹೊಂದಿದೆ. ಈ ಮೊದಲು ನಗರದ ಪಶ್ಚಿಮ ಭಾಗಕ್ಕೆ ಕುಡಿಯುವ ನೀರು ಪೂರೈಕೆ ಅಲ್ಲಿಂದಲೇ ಮಾಡಲಾಗುತ್ತಿತ್ತು. ಆದರೆ, ಹೂಳು ತುಂಬಿದ ಕಾರಣ ಹಾಗೂ ಜಲಾಶಯಕ್ಕೆ ನೀರು ಸಂಗ್ರಹವಾಗದ ಕಾರಣ ಐದು ವರ್ಷಗಳ ಹಿಂದೆ ಅಲ್ಲಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು.

ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ಅರ್ಕಾವತಿ-ಕುಮುದ್ವತಿ ಪುನಶ್ಚೇತನ ಮೂಲಕ ನಾಲ್ಕು ಟಿಎಂಸಿ ನೀರು ಪಡೆಯಬಹುದು. ಹೀಗಾಗಿ, ಭವಿಷ್ಯದ ಬೆಂಗಳೂರಿನ ಹಿತದೃಷ್ಟಿಯಿಂದ  ಇಂತದ್ದೊಂದು ಅಭಿಯಾನಕ್ಕೆ ತೀರ್ಮಾನಿಸಿದ್ದೇವೆ. ಇದೊಂದು ಪಕ್ಷಾತೀತ ಅಭಿಯಾನ. ಎಲ್ಲ ಪಕ್ಷದ ಜನಪ್ರತಿನಿಧಿಗಳು ಕೈ ಜೋಡಿಸಲಿದ್ದಾರೆ.
-ಆರ್‌.ಅಶೋಕ್‌, ಮಾಜಿ ಉಪ ಮುಖ್ಯಮಂತ್ರಿ

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next