Advertisement
ಅರ್ಪಾಜೆಯಲ್ಲಿ ಸರ್ವೆ ನಂ. 33/3ರಲ್ಲಿ 0.62 ಎಕ್ರೆ ವಿಸ್ತೀರ್ಣದಲ್ಲಿರುವ ಸರಕಾರಿ ಕೆರೆಯನ್ನು ಒತ್ತುವರಿ ಮಾಡಿ ನೀರು ಸಂಗ್ರಹವಾಗದಂತೆ ತೋಡು ನಿರ್ಮಿಸಲಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಗಡಿ ಗುರುತು ಮಾಡಿ ಕೆರೆಯನ್ನು ಸಂರಕ್ಷಿಸಲು ಮುಂದಾಗಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಭೂಮಾಪನ ಇಲಾಖೆಯ ಮೂಲಕ ಕೆರೆಯನ್ನು ಅಳತೆ ಮಾಡಿಸಿದರು. ಅಳತೆ ಮಾಡಿದ ವೇಳೆ ಅಕ್ರಮವಾಗಿ ನಿರ್ಮಿಸಲಾಗಿದ್ದ ರಸ್ತೆ ಕೆರೆಯ ಮೂಲಕ ಹಾದು ಹೋಗಿರುವುದು ಕಂಡು ಬಂದಿದೆ. ಆ ರಸ್ತೆಯನ್ನು ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಬಂದ್ ಮಾಡಿಸಿದರು.
ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಅರ್ಪಾಜೆ ಕೆರೆ ಒತ್ತುವರಿ ಆಗಿರುವ ಬಗ್ಗೆ ದೂರು ಬಂದಿತ್ತು. ಆ ಹಿನ್ನಲೆಯಲ್ಲಿ ಸರ್ವೆ ನಡೆಸಿದಾಗ ಕೆರೆಯ ಜಾಗದಲ್ಲಿ ರಸ್ತೆ ನಿರ್ಮಿಸಿರುವುದು ಸ್ಪಷ್ಟಗೊಂಡಿದೆ. ಆದರೆ ಬೇರೆಡೆ ಅತಿಕ್ರಮಣವಾಗಿಲ್ಲ. ಅಕ್ರಮವಾಗಿ ನಿರ್ಮಿಸಲಾಗಿರುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಮತ್ತೆ ರಸ್ತೆ ನಿರ್ಮಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇಲ್ಲಿ ಸರಕಾರಿ ಕೆರೆ ಎಂದು ಕೆರೆಯ ವಿಸ್ತೀರ್ಣ ಸಹಿತ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
– ಕೊರಗಪ್ಪ ಹೆಗ್ಡೆ, ಕಂದಾಯ ನಿರೀಕ್ಷಕರು, ಕಡಬ