ನಟಿ ಆರೋಹಿ ನಾರಾಯಣ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಈ ವರ್ಷ ಅವರು ಎರಡು ಬಹುನಿರೀಕ್ಷಿತ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷಾಂತ್ಯದೊಳಗೆ ಆರೋಹಿ ಅಭಿನಯಿಸಿರುವ ಎರಡೂ ಚಿತ್ರಗಳು ತೆರೆಗೆ ಬರೋದು ಪಕ್ಕಾ.
“ಭೀಮಸೇನಾ ನಳಮಹಾರಾಜ’ ಹಾಗೂ “ಶಿವಾಜಿ ಸುರತ್ಕಲ್’ ಚಿತ್ರಗಳಲ್ಲಿ ನಟಿಸಿರುವ ಆರೋಹಿಗೆ ಎರಡೂ ಚಿತ್ರಗಳಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆಯಂತೆ. “ಭೀಮಸೇನಾ ನಳಮಹಾರಾಜ’ ಚಿತ್ರದ ಪಾತ್ರದ ಬಗ್ಗೆ ಮಾತನಾಡುವ ಆರೋಹಿ, “ಈ ಚಿತ್ರದಲ್ಲಿ ನನ್ನದು ತಮಿಳು ಬ್ರಾಹ್ಮಿನ್ ಹುಡುಗಿಯ ಪಾತ್ರ.
ಹೆಣ್ಣು ಮಕ್ಕಳು ಒಂದು ವಯಸ್ಸಿನಲ್ಲಿ ತಂದೆ-ತಾಯಿಗೆ ವಿರುದ್ಧವಾಗಿ ಒಂಥರಾ ರೆಬೆಲ್ ಆಗಿ ನಡೆದುಕೊಳ್ಳುತ್ತಾರೆ. ಅದೇ ಹೆಣ್ಣು ಮಕ್ಕಳಿಗೆ ತಾವು ತಾಯಿಯಾದಾಗ ಹಿಂದೆ ಮಾಡಿದ ತಪ್ಪು ಅರಿವಾಗುತ್ತದೆ. ಅಂಥದ್ದೇ ಒಂದು ಪಾತ್ರವನ್ನು ಇಲ್ಲಿ ನಾನು ಮಾಡಿದ್ದೇನೆ’ ಎನ್ನುತ್ತಾರೆ.
ಇನ್ನು, “ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಆರೋಹಿ ಸೈಕ್ಯಾಟ್ರಿಸ್ಟ್ ಪಾತ್ರ ಮಾಡಿದ್ದಾರಂತೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ಸಾಕಷ್ಟು ಮಹತ್ವವಿದೆ. “ಸದ್ಯ ನಾನು ಅಭಿನಯಿಸಿರುವ ಎರಡು ಚಿತ್ರಗಳು ಬಿಡುಗಡೆಗೆ ರೆಡಿಯಾಗುತ್ತಿವೆ. ಈ ಎರಡೂ ಚಿತ್ರಗಳಲ್ಲೂ ವಿಭಿನ್ನ ಪಾತ್ರಗಳಿದ್ದು, ಎರಡರ ಮೇಲೂ ನನಗೆ ಸಾಕಷ್ಟು ಭರವಸೆ ಇದೆ.
ಹಾಗಾಗಿ ಈ ಚಿತ್ರಗಳು ಬಿಡುಗಡೆಯಾಗಲಿ ಎಂದು ನೋಡುತ್ತಿದ್ದೇನೆ. ಇದರ ನಡುವೆಯೇ ಕೆಲವು ಚಿತ್ರಗಳ ಆಫರ್ ಬರುತ್ತಿದೆ. ಆದ್ರೆ ನನಗೆ ಸಿಕ್ಕ ಎಲ್ಲಾ ಆಫರ್ ಒಪ್ಪಿಕೊಳ್ಳೊದಕ್ಕೆ ಮನಸ್ಸಿಲ್ಲ. ಮಾಮೂಲಿ ರೋಲ್ ಮಾಡೋದಕ್ಕೆ ಇಷ್ಟವಿಲ್ಲ. ಇಷ್ಟವಾಗುವಂಥದ್ದು ಬರುತ್ತಿಲ್ಲ.
ಸುಮ್ನೆ ಚಿತ್ರದಲ್ಲಿ ಒಂದು ಪಾತ್ರವಾಗಿರಬೇಕು ಅನ್ನೋದಿದ್ದರೆ ಇಷ್ಟೊತ್ತಿಗೆ ತುಂಬಾ ಚಿತ್ರಗಳನ್ನು ಮಾಡಬಹುದಿತ್ತು. ಆದ್ರೆ ನನ್ನ ರೋಲ್‌ಗೆ ಸ್ಕೋಪ್ ಇರಬೇಕು, ಅದು ನನಗೆ ಇಷ್ಟವಾಗಬೇಕು, ವಿಭಿನ್ನವಾಗಿರಬೇಕು ಎಂದು ಬಯಸುತ್ತೇನೆ’ ಎನ್ನುತ್ತಾರೆ.