Advertisement

ಮಂಗಳೂರಿನಲ್ಲಿ ಶೀಘ್ರ ಸ್ಥಾಪನೆಯಾಗಲಿದೆ: ರಾಣಿ ಅಬ್ಬಕ್ಕ ಸೇನಾಪೂರ್ವ ಆಯ್ಕೆ ತರಬೇತಿ ಕೇಂದ್ರ

12:53 AM Sep 29, 2022 | Team Udayavani |

ಮಂಗಳೂರು: ಭಾರತೀಯ ಸೇನೆ ಸೇರಿ ದಂತೆ ವಿವಿಧ ರಕ್ಷಣಾ, ಗೃಹ ಇಲಾಖೆ ಸೇವೆಗಳಿಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸೇನಾ ಆಯ್ಕೆ ಪೂರ್ವ ತರಬೇತಿ ಕೇಂದ್ರ ಮಂಗಳೂರಿ ನಲ್ಲಿ ಸ್ಥಾಪನೆಯಾಗಲಿದೆ.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತರಬೇತಿ ಕೇಂದ್ರ ತೆರೆಯಲು ನಿರ್ಧರಿಸಿದ್ದು, ಅದರಂತೆ ದ.ಕ. ಜಿಲ್ಲಾ ಕೇಂದ್ರವು ಕೆಪಿಟಿ ಬಳಿಯ ಶರಬತ್ತು ಕಟ್ಟೆ ಸಮೀಪದ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಕಟ್ಟಡದಲ್ಲಿ ಆರಂಭಗೊಳ್ಳಲಿದೆ. ಈ ಕೇಂದ್ರಕ್ಕೆ “ವೀರ ರಾಣಿ ಅಬ್ಬಕ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಕೇಂದ್ರ’ ಎಂದು ಹೆಸರಿಡಲಾಗಿದೆ. ಸದ್ಯ ಕಟ್ಟಡ ನವೀಕರಣ ಕಾರ್ಯ ಕೊನೆಯ ಹಂತದಲ್ಲಿದ್ದು, ಶೀಘ್ರ ತರಬೇತಿಯೂ ಆರಂಭಗೊಳ್ಳಲಿದೆ.

ಪರಿಶಿಷ್ಟ ಜಾತಿ/ಹಿಂದುಳಿದ ವರ್ಗಗಳ ಅಭ್ಯರ್ಥಿ ಗಳಿಗೆ ಸೇನಾ ಆಯ್ಕೆ ತರಬೇತಿಯನ್ನು 4 ತಿಂಗಳು ನೀಡ ಲಾಗುತ್ತದೆ. ಒಂದು ಹಂತದಲ್ಲಿ 100 ಮಂದಿಯಂತೆ ವರ್ಷದಲ್ಲಿ 3 ತಂಡಗಳಿಗೆ ತರಬೇತಿ ನೀಡಲಾಗುತ್ತದೆ. ನಿವೃತ್ತ ಯೋಧ ರಾಜ ಜ್ಯೋತಿ ಮತ್ತು ಅಶ್ವಿ‌ನ್‌ ಕುಮಾರ್‌ ತರಬೇತುದಾರರಾಗಿ ತರಬೇತಿ ನೀಡಲಿದ್ದಾರೆ. ಮಂಗಳಾ ಕ್ರೀಡಾಂಗಣದಲ್ಲಿ ಈಗಾಗಲೇ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಕೆಲವೇ ದಿನಗಳಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿಯೂ ಆರಂಭಗೊಳ್ಳಲಿದೆ. ಈ ತರಬೇತಿಯ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ.

ತರಬೇತಿಗೆ ಅರ್ಹತೆಗಳೇನು?
ಈ ತರಬೇತಿಗೆ ಸೇರ ಬಯಸುವ ಅಭ್ಯರ್ಥಿಗಳು 17 ವರ್ಷ, ಆರು ತಿಂಗಳು ಮತ್ತು 21 ವರ್ಷದ ಒಳಗಿನ ವಯೋಮಿತಿಯವರಾಗಿರಬೇಕು. ಅಭ್ಯರ್ಥಿಯ ಎತ್ತರ 166 ಸೆಂ.ಮೀ., ತೂಕ ಕನಿಷ್ಠ 50 ಕೆ.ಜಿ., ಎದೆಯ ಸುತ್ತಳತೆ 77 ಸೆ.ಮೀ. ಹೊಂದಿರಬೇಕು. 1,600 ಮೀಟರ್‌ ದೂರವನ್ನು 6 ನಿಮಿಷದಲ್ಲಿ ಕ್ರಮಿಸಬೇಕು ಸೇರಿದಂತೆ ಇನ್ನಿತರ ನಿಯಮ ಮಾಡಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು 2 ಸುತ್ತಿನಲ್ಲಿ ದೈಹಿಕ ಪರೀಕ್ಷೆಯನ್ನು ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಭಾರತೀಯ ಸೇನೆ ಸೇರಿದಂತೆ ವಿವಿಧ ಸೇವೆಗಳಿಗೆ ಸೇರಬಯಸುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಮಂಗಳೂರಿನಲ್ಲಿ ವೀರ ರಾಣಿ ಅಬ್ಬಕ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಕರಾವಳಿ ಭಾಗದ ಯುವಕರಿಗೆ ಸೇನೆಗೆ ಸೇರ್ಪಡೆಗೊಳ್ಳಲು ಇದೊಂದು ಉತ್ತಮ ಅವಕಾಶ. ಇಲಾಖಾ ವತಿಯಿಂದ ಸಂಪೂರ್ಣ ತರಬೇತಿ ವೆಚ್ಚ ಭರಿಸಲಾಗುವುದು. ಕೆಲವೇ ದಿನಗಳಲ್ಲಿ ತರಬೇತಿ ಆರಂಭಗೊಳ್ಳಲಿದೆ.
ರಶ್ಮಿ ಎಸ್‌.ಆರ್‌., ಜಿಲ್ಲಾ ಅಧಿಕಾರಿ
ಹಿಂದುಳಿದ ವರ್ಗಗಳ ಕಲ್ಯಾಣ
ಇಲಾಖೆ ದ.ಕ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next