ಶ್ರೀನಗರ : ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಶನಿವಾರ ಸೇನಾ ಜವಾನನೋರ್ವನ ಶವ ಪತ್ತೆಯಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಪ್ರಾದೇಶಿಕ ಸೇನಾ ಜವಾನನಾಗಿ ಸೇವೆ ಸಲ್ಲಿಸುತ್ತಿದ್ದ ಈತನನ್ನು 23ರ ಹರೆಯದ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.
ಜವಾನ ಅಹ್ಮದ್ ದಾರ್ ರಜೆಯಲ್ಲಿ ತೆರಳಿದ್ದ; ಆದರೆ ಶುಕ್ರವಾರದಿಂದ ನಾಪತ್ತೆಯಾಗಿದ್ದ ಎಂದು ವರದಿಯಾಗಿದೆ. ಈತನ ದೇಹದಲ್ಲಿ ಗುಂಡೇಟಿನ ಗುರುತುಗಳಿದ್ದು ಭಯೋತ್ಪಾದಕರು ಆತನನ್ನು ಕೊಂದಿರಬಹುದೆಂದು ಶಂಕಿಸಲಾಗಿದೆ.
ಗಡಿ ನಿಯಂತ್ರಣ ರೇಖೆ ಸಮೀಪ ಗುರೇಜ್ ಎಂಬಲ್ಲಿ ಸೇನೆಯ ಇಂಜಿನಿಯರಿಂಗ್ ರೆಜಿಮೆಂಟ್‌ನಲ್ಲಿ ಜವಾನ ಅಹ್ಮದ್ ದಾರ್ ನನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹಾಗೂ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಅವರು ಜವಾನನ ಹತ್ಯೆಯನ್ನು ಖಂಡಿಸಿದ್ದಾರೆ.
ಈ ತಿಂಗಳ ಆದಿಯಲ್ಲಿ ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನು ಶೋಪಿಯಾನ್‌ನಲ್ಲಿ ಶಂಕಿತ ಉಗ್ರರು ಕೊಂದಿದ್ದರು. ಬಿಜೆಪಿಯ ಶೋಪಿಯಾನ್ ಯುವ ಘಟಕದ ಅಧ್ಯಕ್ಷ ಗೌಹಾರ್ ಅಹ್ಮದ್ ಭಟ್ ಅವರನ್ನು ಉಗ್ರರು ಕತ್ತು ಸೀಳಿ ಕೊಂದಿದ್ದರು.