Advertisement

ಉಗ್ರನ ಹತ್ಯೆಗೆ ನೆರವಾಗಿ,ಮಸೀದಿ ಉಳಿಸಿದ ಸೇನೆಯ ಶ್ವಾನಕ್ಕೆ ಅಂತಿಮ ನಮನ

09:15 PM Jul 31, 2022 | Team Udayavani |

ಶ್ರೀನಗರ: ಉಗ್ರ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಅತ್ಯುನ್ನತ ತ್ಯಾಗ ಮಾಡಿದ ಶ್ವಾನ ‘ಆಕ್ಸೆಲ್’ಗೆ ಭಾರತೀಯ  ಸೇನೆಯು ಭಾನುವಾರ ಗೌರವ ನಮನ ಸಲ್ಲಿಸಿ ಅಂತ್ಯಕ್ರಿಯೆಯನ್ನು ಮಾಡಿತು. ಅಡಗಿದ್ದ ಉಗ್ರನನ್ನು ಗುರುತಿಸುವ ಮೊದಲು ಹತ್ತಿರದಲ್ಲಿದ್ದ ಮಸೀದಿಯನ್ನು ರಕ್ಷಿಸಲು ನೆರವಾಗಿತ್ತು.

Advertisement

ಕುಪ್ವಾರ ನಿವಾಸಿ ಅಖ್ತರ್ ಹುಸೇನ್ ಭಟ್ ಎಂದು ಗುರುತಿಸಲಾದ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಭಯೋತ್ಪಾದಕನನ್ನು ಶನಿವಾರ ಬಾರಾಮುಲ್ಲಾ ಜಿಲ್ಲೆಯ ಕ್ರೀರಿಯ ವನಿಗಮ್ ಬಾಲಾ ಪ್ರದೇಶದಲ್ಲಿ ಎಂಟು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯ ನಂತರ ಭದ್ರತಾ ಪಡೆಗಳು ಹತ್ಯೆಗೈದಿದ್ದರು.

ಸೇನೆಯ 26 ಶ್ವಾನ ಘಟಕದಲ್ಲಿದ್ದ ಎರಡು ವರ್ಷದ ಜರ್ಮನ್ ಶಫರ್ಡ್ ತಳಿಯ ಶ್ವಾನ ‘ಆಕ್ಸೆಲ್’ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಒಬ್ಬ ಸೇನಾ ಯೋಧ ಮತ್ತು ಪೋಲೀಸ್‌ ಗಾಯಗೊಂಡ ನಂತರ, ಬಾಡಿ ಕ್ಯಾಮೆರಾದೊಂದಿಗೆ ಜೋಡಿಸಲಾದ ‘ಆಕ್ಸೆಲ್’ ಅನ್ನು ಕಾರ್ಯಾಚರಣೆಗಿಳಿಸಲಾಗಿತ್ತು.

10 ಮೀಟರ್ ಒಳಗೆ ಮಸೀದಿ ಇದ್ದುದರಿಂದ ಉಗ್ರನನ್ನು ಹತ್ಯೆಗೈಯಲು ಯಾವುದೇ ಹೆಚ್ಚಿನ ಕ್ಯಾಲಿಬರ್ ಶಸ್ತ್ರಾಸ್ತ್ರಗಳನ್ನು ಬಳಸಲಾಗಿಲ್ಲಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಆಕ್ಸೆಲ್’ ಉಗ್ರನ ಇರುವಿಕೆಯನ್ನು ಗುರುತಿಸುವಲ್ಲಿ ಯಶಸ್ವಿಯಾಯಿತು ಆದರೆ ಈ ವೇಳೆ ಗುಂಡಿಗೆ ಬಲಿಯಾಯಿತು.

ಭದ್ರತಾ ಪಡೆಗಳು ಮಸೀದಿಯ ಪಾವಿತ್ರ್ಯತೆಯನ್ನು ಉಲ್ಲಂಘಿಸದೆ ಮತ್ತು ಅದಕ್ಕೆ ಯಾವುದೇ ಹಾನಿಯಾಗದಂತೆ ಭಯೋತ್ಪಾದಕನನ್ನು ಹೊಡೆದುರುಳಿಸಲು ‘ಆಕ್ಸೆಲ್’ ಕಾರಣವಾಗಿ ಕೊನೆಯುಸಿರೆಳೆಯಿತು.

Advertisement

“ನಿನ್ನ ಸೇವೆಗೆ ಧನ್ಯವಾದಗಳು, ಆಕ್ಸೆಲ್” ಎಂದು ಶ್ರೀನಗರ ಮೂಲದ ಸೇನೆಯ ಚಿನಾರ್ ಕಾರ್ಪ್ಸ್ ಜರ್ಮನ್ ಶೆಫರ್ಡ್‌ನ ಫೈಲ್ ಫೋಟೋ ಜೊತೆಗೆ ಟ್ವೀಟ್ ಮಾಡಿದೆ.ಭಾನುವಾರ ಪಟ್ಟನ್‌ನಲ್ಲಿ ನಡೆದ ಮಿಲಿಟರಿ ಸಮಾರಂಭದಲ್ಲಿ ಸೇನೆಯು ‘ಆಕ್ಸೆಲ್’ಗೆ ಗೌರವ ಸಲ್ಲಿಸಿತು.

ಕಿಲೋ ಫೋರ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಎಸ್. ಎಸ್. ಸ್ಲಾರಿಯಾ ಅವರು ಯೋಧನಿಗೆ ನಮನ ಸಲ್ಲಿಸಿದರು. ಕಳೆದ ಎರಡು ವರ್ಷಗಳಿಂದ ಅದರ ರಕ್ಷಕ, ಪಾಲಕ, ತರಬೇತುದಾರ ಮತ್ತು ಹತ್ತಿರದ ಗೆಳೆಯರಾಗಿರುವ ಆಕ್ಸೆಲ್‌ನ ಹ್ಯಾಂಡ್ಲರ್‌ಗೆ ಇದು ಭಾವನಾತ್ಮಕ ಕ್ಷಣವಾಗಿತ್ತು. 26 ಸೇನಾ ಶ್ವಾನ ಘಟಕದ ಆವರಣದಲ್ಲಿ ಘಟಕದ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಆಕ್ಸೆಲ್‌ ನನ್ನ ಸಮಾಧಿ ಮಾಡಲಾಯಿತು.

‘ಆಕ್ಸೆಲ್’ ವೃತ್ತಿಪರ ಸಾಮರ್ಥ್ಯ, ಶೌರ್ಯ ಮತ್ತು ಅತ್ಯುನ್ನತ ತ್ಯಾಗಕ್ಕಾಗಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next