Advertisement
1971ರಲ್ಲಿ ಪಾಕಿಸ್ಥಾನವು ಬಡ ಬಾಂಗ್ಲಾದ ಮೇಲೆರಗಿ ಬಂದಾಗ, ನಾನು ಮೇಜರ್ ಹುದ್ದೆಯಲ್ಲಿದ್ದೆ. ಅವತ್ತು ಡಿಸೆಂಬರ್ 1. ಯುದ್ಧದ ಮುನ್ಸೂಚನೆ ಸಿಕ್ಕ ಕೂಡಲೇ ನಾನಿದ್ದ ಕುಮಾನ್ 12 ಯುನಿಟ್‌ನಿಂದ ಸುಮಾರು 500 ಕಿ.ಮೀ. ದೂರದ ಭಾರತ- ಬಾಂಗ್ಲಾ ಗಡಿಗೆ ಸ್ಥಳಾಂತರ ಆಗಬೇಕಾಯಿತು. ಎಲ್ಲದಕ್ಕೂ ಮೊದಲು ಅಖೌರಾ ಸನಿಹದ ಬ್ರೋಕನ್ ಬ್ರಿಡ್ಜ್ ಪ್ರದೇಶದ ಮೇಲೆ ಆಕ್ರಮಣಕ್ಕೆ ಸಜ್ಜಾಗಬೇಕಾಗಿತ್ತು.
Related Articles
Advertisement
ಬಳಿಕ ಡಿ.6-7ರಂದು 40 ಕಿಲೋ ಭಾರದ ಶಸ್ತ್ರಾಸ್ತ್ರಗಳನ್ನು ಬೆನ್ನ ಮೇಲೆ ಹೇರಿಕೊಂಡು ಕೋಮಿಲ್ಲಾ , ಆಕ್ಸಿಸ್, ದೌಡ್ಕಂಡಿ ಪ್ರದೇಶ, ಮೇಘನಾ ನದಿಗಳನ್ನು ದಾಟಿ ಸುದೀರ್ಘ 40 ಕಿ.ಮೀ. ಪಯಣಿಸಿ, ಢಾಕಾ ಮುಟ್ಟಿದೆವು. ಪ್ರಮುಖ ಬಂದರು ಪ್ರದೇಶವಾಗಿದ್ದ ದೌಡ್ಕಂಡಿಯನ್ನು ವಶಕ್ಕೆ ತೆಗೆದುಕೊಂಡೆವು. ಡಿ.16ರ ವೇಳೆಗೆ ಪಾಕ್‌ನ 93,000 ಸೈನಿಕರನ್ನು ಯುದ್ಧ ಕೈದಿಗಳನ್ನಾಗಿಸುವಲ್ಲಿ ಕೊನೆಗೂ ಸಫಲರಾದೆವು.
–ಮೇಜರ್ ಜನರಲ್ ಕೆ.ಪಿ. ನಂಜಪ್ಪ, ಮಡಿಕೇರಿ
.
ಜೀವ ಉಳಿಸುವ ಪುಣ್ಯದ ಕೆಲಸ :
ನಾನು ಭಾರತಪಾಕಿಸ್ಥಾನ ಯುದ್ಧದ ವೇಳೆ ವೈದ್ಯಕೀಯ ಸಹಾಯಕನಾಗಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ಸೇನೆಯ ಒಂದಿಷ್ಟು ಸಿಬಂದಿ ಗಾಯಾಳುಗಳನ್ನು ನಾವಿದ್ದ ಬೊಗ್ರಾ ಕ್ಯಾಂಪ್‌ಗೆ ಕರೆದುಕೊಂಡು ಬರುತ್ತಿದ್ದರು. ಆಗ ನಾವು ತತ್‌ಕ್ಷಣ ಪ್ರಥಮ ಚಿಕಿತ್ಸೆ ನೀಡಿ ತಂಡದ ವೈದ್ಯರ ಸಲಹೆ ಮೇರೆಗೆ ಇಂಜಕ್ಷನ್, ಸಲಾಯಿನ್, ಬ್ಯಾಂಡೇಜ್ ಹಚ್ಚುತ್ತಿದ್ದೆವು. ಯುದ್ಧ ದಲ್ಲಿ ಗಾಯಗೊಂಡ ಸೈನಿಕರಷ್ಟೇ ಅಲ್ಲ, ವೈರಿಗಳ ದಾಳಿಯಿಂದ ಕಟ್ಟಡಗಳು ಕುಸಿದು ಗಾಯಗೊಂಡ ವೈರಿಗಳಿಂದ ದೌರ್ಜನ್ಯ, ಹಲ್ಲೆಗೊಳಗಾದ ಸಾವಿ ರಾರು ಜನರಿಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವ ಕಾರ್ಯ ಮಾಡಿದೆವು. ಜೀವಗಳನ್ನು ಉಳಿಸುವ ಪುಣ್ಯದ ಕೆಲಸ ಮಾಡುವ ಅವಕಾಶ ದೊರಕಿತು. -ಎಂ.ಎಂ. ಕಮ್ಮಾರ್, ಮಾಜಿ ಯೋಧ, ದಾವಣಗೆರೆ
.
ಯುದ್ಧ ವಿಮಾನಗಳ ಮಾಹಿತಿ ನೀಡುತ್ತಿದ್ದೆ :
ನಾನು ವಾಯುಪಡೆಯಲ್ಲಿದ್ದು ಭಾರತ-ಪಾಕಿಸ್ಥಾನ ಯುದ್ಧ ಸಂದರ್ಭದಲ್ಲಿ ವೈರಿ ರಾಷ್ಟ್ರಗಳ ಕಡೆಯಿಂದ ಬರುವ ಯುದ್ಧ ವಿಮಾನಗಳ ಮಾಹಿತಿಯನ್ನು ಭಾರತೀಯ ಸೇನೆಗೆ ರವಾನಿಸುವ ಕಾರ್ಯ ದಲ್ಲಿ ತೊಡಗಿಕೊಂಡಿದ್ದೆ. ಆಗ ಪಾಕಿಸ್ಥಾನದಲ್ಲಿ ಸೈಬರ್ ಜೆಟ್, ಮಿರೆಜ್ ಹಾಗೂ ಸ್ಟಾರ್ ಫೈಟರ್‌ಗಳೆಂಬ ಯುದ್ಧ ವಿಮಾನಗಳಿದ್ದವು. ಬಾಲಾಕೋಟ್ ಹತ್ತಿರದ ಬೇರೆ ಬೇರೆ ಬೆಟ್ಟ ಗುಡ್ಡಗಳಲ್ಲಿನ ಗುಪ್ತ ಸ್ಥಳದಲ್ಲಿ ಅಡಗಿ ಕುಳಿತು ಯಾವ ನಮೂನೆಯ ವಿಮಾನ, ಎಷ್ಟು ವೇಗದಲ್ಲಿ, ಯಾವ ದಿಕ್ಕಿನೆಡೆಗೆ ಬರುತ್ತಿದೆ ಎಂಬ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಕಳುಹಿಸುತ್ತಿದ್ದೆವು. ಯುದ್ಧ ಸಂದರ್ಭದಲ್ಲಿ ಪಾಕಿಸ್ಥಾನದಿಂದ ಬರು ತ್ತಿರುವ ಯುದ್ಧವಿಮಾನಗಳ ಮಾಹಿತಿ ನೀಡಿದ್ದೆ. ಅದು ನಿಗದಿತ ಸ್ಥಳ ತಲುಪಲು ಮೂರುವರೆ ನಿಮಿಷ ಬೇಕಿತ್ತು. ಮಾಹಿತಿ ಆಧರಿಸಿ ನಮ್ಮ ಯೋಧರು ವೈರಿಗಳ ಎರಡು ವಿಮಾನಗಳನ್ನು ಹೊಡೆದುರುಳಿಸಿದರು. – ಮನೋಹರ ಎಸ್. ಮಹೇಂದ್ರಕರ್, ಮಾಜಿ ಯೋಧ, ದಾವಣಗೆರೆ
(ನಿರೂಪಣೆ: ವಾಣಿ ಭಟ್ಟ)