Advertisement

ಯುದ್ದೋಪಕರಣ -ರಾಕೆಟ್‌ ಭಾರ ಹಗುರ: ಮಂಗಳೂರು ಯುವಕನ ಆವಿಷ್ಕಾರ!

10:57 AM Jul 09, 2019 | keerthan |

ಮಂಗಳೂರು: ಸೈನಿಕರಿಗೆ ಯುದ್ಧಭೂಮಿ ಯಲ್ಲಿ ಸವಾಲಾದ ಯುದ್ದೋಪಕರಣ ಗಳ ಭಾರ ವನ್ನು ಹಗುರಗೊಳಿಸುವ ಹಾಗೂ ಬಾಹ್ಯಾಕಾಶಕ್ಕೆ ಉಡಾಯಿಸುವ ರಾಕೆಟ್‌ಗಳ ಭಾರ ಕಡಿಮೆಗೊಳಿಸುವ ಮಹತ್ವದ ಸಂಶೋಧನೆಯನ್ನು ಇಲ್ಲಿಯ ಯುವ ಮೆಕಾನಿಕಲ್‌ ಎಂಜಿನಿಯರೊಬ್ಬರು ಮಾಡಿದ್ದು, ರಕ್ಷಣಾ ಇಲಾಖೆ ಮಾನ್ಯತೆಯೂ ಲಭಿಸಿದೆ.

Advertisement

ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಸುಧಾರಿತ ಸ್ವದೇಶಿ ನಿರ್ಮಿತ ಯುದ್ದೋಪಕರಣಗಳು ಹಾಗೂ ರಾಕೆಟ್‌ ಲಾಂಚರ್‌ಗಳನ್ನು ಸಿದ್ಧಪಡಿಸಲು ಹೊರಟಿರುವ ತುಳುನಾಡಿನ ಪ್ರತಿಭಾನ್ವಿತ ಹುಡುಗನ ಹೆಸರು ಅತುಲ್‌ ಪೈ. ಅತುಲ್‌ರ ಈ ಸಂಶೋಧನೆ ರಕ್ಷಣಾ ಸಚಿವರು ಸೇರಿದಂತೆ ಸೇನಾಧಿಕಾರಿಗಳು ಹಾಗೂ ಇಸ್ರೋದ ವಿಜ್ಞಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂಶೋಧನೆ ಕರಾವಳಿಗಷ್ಟೇ ಅಲ್ಲದೇ, ದೇಶಕ್ಕೇ ಕೀರ್ತಿ ತರುವಂತದ್ದಾಗಿದೆ. ವಿಶೇಷ ಅಂದರೆ, ಅತುಲ್‌ ಅವರು ವಿನ್ಯಾಸಗೊಳಿಸುವ ಈ ಯುದ್ಧ ಪರಿಕರಿಗಳ ಮಹತ್ವ ಅರಿತು ಗೋವಾ ಸರಕಾರವು ಸಂಶೋಧನೆಗೆ ಪೂರಕವಾಗಿ ಎರಡು ಎಕ್ರೆ ಜಾಗವನ್ನು ನೀಡಲು ಮುಂದಾಗಿದೆ.

ಭಾರತೀಯ ರಕ್ಷಣಾ ಇಲಾಖೆಯಲ್ಲಿ ಹೊಸ ಸಂಶೋಧನೆ ಹಾಗೂ ಅನ್ವೇಷಣೆ ಉತ್ತೇಜಿಸಲು ಐಡೆಕ್ಸ್‌’ (ಇನ್ನೋವೇಶನ್‌ ಫಾರ್‌ ಡಿಫೆನ್ಸ್‌ ಎಕ್ಸೆಲೆನ್ಸ್‌) ಕಾರ್ಯಕ್ರಮವನ್ನು ಕಳೆದ ವರ್ಷದಿಂದ ಜಾರಿಗೊಳಿಸಲಾಗಿದೆ. ಇದರಡಿ ರಕ್ಷಣೆ, ಬಾಹ್ಯಾಕಾಶ ಸಂಬಂಧಿತವಾಗಿ ದೇಶವ್ಯಾಪಿ ಸುಮಾರು 1000 ಸಂಶೋಧಕರು ತಮ್ಮ ಯೋಜನೆ ಸಲ್ಲಿಸಿದ್ದರು. ಆ ಪೈಕಿ ಅಂತಿಮವಾಗಿ 8 ಮಂದಿಯ ಸಂಶೋಧನೆಯನ್ನು ರಕ್ಷಣಾ ಇಲಾಖೆ “ಸ್ಪಾರ್ಕ್‌’ ಅನುದಾನದಡಿ ಅಂತಿಮ ಗೊಳಿಸಿದ್ದು, ಅದರಲ್ಲಿ ಅತುಲ್‌ ಪೈ ಸಂಶೋಧನೆಯೂ ಸೇರಿದೆ.

ಅತುಲ್‌ ಪೈ ಕದ್ರಿಯವರು. ಉದ್ಯಮಿ ರತ್ನಾಕರ ಪೈ, ಸುಜಾತಾ ಪೈ ದಂಪತಿ ಪುತ್ರ. ಪ್ರಾಥಮಿಕ, ಪ್ರೌಢ, ಪದವಿ ವ್ಯಾಸಂಗವನ್ನು ಕೆನರಾ ಕಾಲೇಜಿನಲ್ಲಿ ಪೂರ್ಣಗೊಳಿ ಸಿದ್ದಾರೆ. ಬಳಿಕ ಮೆಕಾನಿಕಲ್‌ ಎಂಜಿನಿಯರ್‌ ಪದವಿಯನ್ನು ಮಣಿಪಾಲದಲ್ಲಿ ಪಡೆದು, 4 ವರ್ಷಗಳಿಂದ ಹೊಸದಿಲ್ಲಿಯಲ್ಲಿ ಟಾಟಾ ಪವರ್‌ ಸೋಲಾರ್‌ ಸಂಸ್ಥೆಯಲ್ಲಿ ಬ್ಯುಸಿನೆಸ್‌ ಡೆವೆಲಪ್‌ಮೆಂಟ್‌ ಹುದ್ದೆ ನಿರ್ವಹಿಸಿದ್ದರು. ಕಳೆದ ವರ್ಷ ಚೆನ್ನೈಯಲ್ಲಿ ನಡೆದ “ಡಿಫೆನ್ಸ್‌ ಎಕ್ಸ್‌ಪೋ’ವನ್ನು ವೀಕ್ಷಿಸಿದ್ದ ಅತುಲ್‌, ಯುದೊಪಕರಣಗಳು ಸಹಿತ ಎಲ್ಲ ಬಗೆಯ ವಸ್ತುಗಳ ಬಗ್ಗೆ ಮಾಹಿತಿ ಪಡೆದಿದ್ದರು. ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿ ಹೊಸ ಸಂಶೋಧನೆಗೆ ಸಿಗುವ ಸೌಲಭ್ಯ, ಮೇಕ್‌ ಇನ್‌ ಇಂಡಿಯಾ ಸಾಧ್ಯತೆಗಳ ಬಗ್ಗೆಯೂ ಮಾಹಿತಿ ಪಡೆದು ಕಾರ್ಯ ತತ್ಪರರಾಗಿದ್ದರು.

Advertisement

ಸಂಶೋಧನೆ ಹೇಗೆ?
ಯುದ್ಧ ಭೂಮಿಯಲ್ಲಿ ಸೈನಿಕರು ಬಳಸುವ ಕೆಲವು ಉಪಕರಣಗಳ ಭಾರವನ್ನು ಮೊದಲಿಗೆ ಅರ್ಧದಷ್ಟು ಕಡಿಮೆ ಮಾಡುವುದು. “ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಯಡಿ ಇದನ್ನು ಕಾರ್ಯಗತ ಗೊಳಿಸುವುದು. ರಾಕೆಟ್‌ ಲಾಂಚರ್‌ನಲ್ಲಿ ಬಳಸುವ ಬ್ಯಾರೆಲ್‌, ಕ್ಷಿಪಣಿಗಳ ಭಾರ ಕಡಿಮೆ ಮಾಡಿ ವೇಗ ಹೆಚ್ಚಿಸುವುದು, ಫೈಟರ್‌ ಜೆಟ್‌, ಯುದ್ಧನೌಕೆಯಲ್ಲಿ ಆಧುನಿಕ ವ್ಯವಸ್ಥೆ ಅಳವಡಿಕೆ ಅವರ ಸಂಶೋಧನೆಯ ಅಂಶಗಳು.

ಗೋವಾದಲ್ಲಿ ಅನುಷ್ಠಾನ
ಅತುಲ್‌ ಪೈ ಮಾಡಿದ ಸಂಶೋಧನೆಯ ಅನು ಷ್ಠಾನಕ್ಕೆ ಕೇಂದ್ರ ರಕ್ಷಣಾ ಇಲಾಖೆ ಸೂಚನೆ ನೀಡಿದೆ. ಇದಕ್ಕೆ ಸುಮಾರು 2 ಎಕ್ರೆ ಭೂಮಿ ಅಗತ್ಯವಿತ್ತು. ಈ ವಿಷಯವರಿತ, ಶಾಸಕ ವೇದವ್ಯಾಸ ಕಾಮತ್‌ ಮಂಗಳೂರಿನಲ್ಲಿ ಭೂಮಿ ನೀಡುವ ಭರವಸೆ ನೀಡಿದ್ದರು. ಆದರೆ, ರಕ್ಷಣಾ ಸಂಬಂಧಿತ ಕಚ್ಚಾ ಸಾಮಗ್ರಿ, ರಕ್ಷಣಾ ಇಲಾಖೆ ಪೂರಕ ಅನುಮತಿ ದೊರಕಲು ಮಂಗಳೂರಿನಲ್ಲಿ ಕಷ್ಟ-ಸಾಧ್ಯ ಎಂಬ ಕಾರಣಕ್ಕೆ ಅತುಲ್‌ ನೆರೆಯ ರಾಜ್ಯ ಗೋವಾವನ್ನು ಆಯ್ಕೆ ಮಾಡಿದ್ದಾರೆ. ಅಲ್ಲಿ ರಕ್ಷಣಾ ಇಲಾಖೆಯ ವಿವಿಧ ಸ್ತರದ ಸೌಲಭ್ಯಗಳು ದೊರೆಯುತ್ತವೆ ಎಂಬುದು ಅತುಲ್‌ ವಿಶ್ವಾಸ. ಹೀಗಾಗಿ ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಅವರನ್ನು ಶಾಸಕ ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಇತ್ತೀಚೆಗೆ ಗೋವಾದಲ್ಲಿ ಭೇಟಿ ಮಾಡಲಾಗಿತ್ತು. ಭೂಮಿ ಸಿಗುವ ಭರವಸೆ ದೊರೆತಿದ್ದು, ಅಲ್ಲಿ ಹೊಸ ಸಂಶೋಧನೆಯ ಪ್ರಾರಂಭಿಕ ಅನುಷ್ಠಾನ ನಡೆಯಲಿದೆ.

ರಕ್ಷಣೆ-ಬಾಹ್ಯಾಕಾಶ ಸಂಶೋಧನೆ
ಪ್ರಧಾನಿ ನರೇಂದ್ರ ಮೋದಿ ಅವರು, ಭವಿಷ್ಯದ ಭಾರತೀಯ ರಕ್ಷಣಾ ಹಾಗೂ ಬಾಹ್ಯಾಕಾಶದ ಆಗತ್ಯಗಳಿಗೆ ಪೂರಕವಾಗಿ ಸಂಶೋಧನೆ ನಡೆಸಲು ಕರೆ ನೀಡಿದ್ದಾರೆ. ಹೊಸ ತಂತ್ರಜ್ಞಾನದ ಯುದೊಪಕರಣಗಳನ್ನು ಆಮದು ಮಾಡುವ ಬದಲು ಭಾರತದಲ್ಲೇ ಉತ್ಪಾದಿಸುವುದು ಇದರ ಉದ್ದೇಶ. ಇದಕ್ಕಾಗಿ ಎರಡೂ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಎಂಎಸ್‌ಎಂಇ, ಸ್ಟಾರ್ಟಪ್‌, ಸಂಶೋಧಕರು, ಆರ್‌ ಆ್ಯಂಡ್‌ ಡಿ ಸಂಸ್ಥೆಗಳು ಹಾಗೂ ಅಕಾಡೆಮಿ ಗಳಿಗೆ ಕೇಂದ್ರ ಸರಕಾರ ಉತ್ತೇಜನ ನೀಡುತ್ತಿದೆ. ಈ ಪೈಕಿ ರಕ್ಷಣಾ ಇಲಾಖೆಯಡಿ “ಐಡೆಕ್ಸ್‌’ ಯೋಜನೆಯೂ ಒಂದು. ಹೊಸ ಸಂಶೋಧನೆಗಳನ್ನು ಐಡೆಕ್ಸ್‌ಗೆ ಕಳುಹಿಸಿದರೆ ಪರಿಶೀಲಿಸಿ ಸೂಕ್ತವೆನಿಸಿದಲ್ಲಿ ಪ್ರೋತ್ಸಾಹ ಸಿಗಲಿದೆ.

“ಅವಕಾಶ ದೊರೆತದ್ದೇ ಸಂತಸ’
ರಕ್ಷಣಾ ಇಲಾಖೆ ಹೊಸ ಸಂಶೋಧನೆಯ ಅನುಷ್ಠಾನಕ್ಕೆ ಅವಕಾಶ ನೀಡಿರುವುದು ಸಂತಸ ತಂದಿದೆ. ಸೈನಿಕರಿಗೆ ನೆರವಾಗುವ ನೆಲೆಯಲ್ಲಿ ಈ ಸಂಶೋಧನೆಯನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಿಸಲಾಗುವುದು.
ಅತುಲ್‌ ಪೈ, ಮಂಗಳೂರು-ಸಂಶೋಧಕ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next