ರಬಕವಿ-ಬನಹಟ್ಟಿ(ಬಾಗಲಕೋಟೆ): ಅರ್ಕಾವತಿ ಹಗರಣ ಪ್ರಕರಣ ನ್ಯಾಯಾಂಗದಲ್ಲಿ ತೀರ್ಮಾನವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ.
ಬಂಡಿಗಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ”ಅರ್ಕಾವತಿ ಹಗರಣ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ” ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ”ಅದು ನ್ಯಾಯಾಂಗದಲ್ಲಿ ತೀರ್ಮಾನವಾಗುತ್ತದೆ.ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ.ನೀವು ಬಯಸಿದ್ದನ್ನು ಹೇಳುವುದಕ್ಕೆ ನಾನು ತಯಾರಿಲ್ಲ” ಎಂದು ಕಿಡಿಯಾದರು.
”ನ್ಯಾಯಾಂಗದಲ್ಲಿ ತೀರ್ಮಾನವಾಗುತ್ತದೆ. ಖಂಡಿತವಾಗಿಯೂ ತಾರ್ಕಿಕ ಅಂತ್ಯಕ್ಕೆ ಹೋಗಿಯೇ ಹೋಗುತ್ತದೆ.ನ್ಯಾಯ ತನ್ನ ಕಾರ್ಯವನ್ನು ನಿಶ್ಚಿತವಾಗಿ ಮಾಡಿಯೇ ಮಾಡುತ್ತದೆ” ಎಂದರು.
ಶಿಗ್ಗಾವಿಯಲ್ಲಿ ನಿಮ್ಮನ್ನು ಸೋಲಿಸಲು ಕೈ ನಾಯಕರು ಲಿಂಗಾಯತ ಟ್ರಂಪ್ ಬಳಸುತ್ತಾರೆ, ವಿನಯ ಕುಲಕರ್ಣಿಯವರನ್ನು ನಿಲ್ಲಿಸುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ”ನನಗೆ ನನ್ನ ಕ್ಷೇತ್ರದ ಜನರ ಮೇಲೆ ವಿಶ್ವಾಸ ಇದೆ. ಯಾರಾದರೂ ನಿಲ್ಲಲಿ. ನಾನು ಗೆಲ್ಲುತ್ತೇನೆ ಅನ್ನುವ ಆತ್ಮವಿಶ್ವಾಸ ಇದೆ” ಎಂದರು.
ಬಿಜೆಪಿಗರಿಗೆ ಮುಖ ಇಲ್ಲ ಕೇಂದ್ರ ನಾಯಕರ ಕರೆಸುತ್ತಿದ್ದಾರೆ ಎಂಬ ವಿಪಕ್ಷ ನಾಯಕರ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ”ರಾಜ್ಯದ ನಾಯಕರು ಅಭಿವೃದ್ಧಿ ಮಾಡಿದುದರಿಂದಲೇ ನಾವು ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಸಾಮಾಜಿಕವಾಗಿ ಎಲ್ಲರಿಗೂ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿಯೇ ಇವತ್ತು ನಮ್ಮ ರಾಜ್ಯದಲ್ಲಿ ನಮ್ಮ ರಿಪೋರ್ಟ್ ಇಟ್ಟುಕೊಂಡೇ ಚುನಾವಣೆಗೆ ಹೋಗುತ್ತೇವೆ. ರಾಜ್ಯಕ್ಕೆ ಕೇಂದ್ರ ಕೊಟ್ಟ ಕೊಡುಗೆ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರ್ತಿದಾರೆ. ಅವರು ವಿಶ್ವದ ನಾಯಕರಿದ್ದಾರೆ, ಜನಪ್ರಿಯರಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲಿ ಜನಪ್ರಿಯ ನಾಯಕರಿಲ್ಲ ಅಂದರೆ ನಾನೇನು ಮಾಡಲಿ” ಎಂದು ತಿರುಗೇಟು ನೀಡಿದರು.