ಅರ್ಜುನನ ಬದುಕಿನ ಸುತ್ತವೇ ಹೆಣೆದ ನಾಲ್ಕು ಕತೆಗಳು. ಯಾರೂ ವೃತ್ತಿಪರ ಯಕ್ಷಗಾನ ಕಲಾ ಕೋವಿದರಲ್ಲ. ಆದರೆ ಹೊರಗೆ ಸುರಿಯುತ್ತಿರುವ ಮಳೆಯಲ್ಲೂ ಪ್ರೇಕ್ಷಕ ವೃಂದ ಮಿಸುಕಾಡದಂತೆ ಹಿಡಿದಿರಿಸಿದ್ದು ಮಾತಿನಲ್ಲೇ ಕಟ್ಟಿದ ದ್ವಾಪರದ ಮಂಟಪ. ಪ್ರತಿ ಯೊಬ್ಬ ಕಲಾವಿದನೂ ಹುರುಪಿನಿಂದ ಪಾತ್ರವೇ ತಾನಾಗಿ ಕುಸುರಿ ಕೆಲಸವನ್ನೊಪ್ಪಿಸಿದ್ದು ಗುರುವಾಯನಕೆರೆಯಲ್ಲಿ. ದಕ್ಷಿಣಕನ್ನಡ ಜಿಲ್ಲೆಯ ಗಮಕ ಪರಿಷತ್ ಆಯೋಜಿಸಿದ್ದು ಅರ್ಜುನನ ಚಿತ್ರಣ. ಬೆಳಗ್ಗೆ ಹತ್ತರಿಂದ ಆರಂಭಗೊಂಡ ತಾಳಮದ್ದಳೆ ರಾತ್ರೆ ಎಂಟೂವರೆಯ ತನಕ ನಡೆದು ಶ್ರೋತೃಗಳಿಗೆ ರಂಜನೆ ನೀಡಿತು.
ಆರಂಭದಲ್ಲಿ ಕುಮಾರವ್ಯಾಸನ ಭಾರತ ಕಥಾಮಂಜರಿಯಿಂದ ಆಯ್ದ ಭಾಗವನ್ನು ಗಮಕ ವಾಚನ-ವ್ಯಾಖ್ಯಾನವಾಗಿ ರೂಪಿಸಿದವರು ರಾಮಕುಂಜೇಶ್ವರ ಕಾಲೇಜಿನ ಪದವಿ ವಿದ್ಯಾರ್ಥಿನಿ ಯರಾದ ಅನಘ ಸರಳಾಯ ಮತ್ತು ಪ್ರತೀಕ್ಷಾ. ಮನಮೋಹಕ ಕಂಠದೈಸಿರಿಯಿಂದ ವಾಚನದ ಮಾಧುರ್ಯವನ್ನು ವಾಚ್ಯವಾಗಿ ಬಡಿಸಿದರು. ಅನಂತರ ಆರಂಭಗೊಂಡದ್ದು ತಾಳಮದ್ದಳೆ ಶರಸೇತು ಬಂಧನ. ಪ್ರೊ| ಮಧೂರು ಮೋಹನ ಕಲ್ಲೂರಾಯರು ಹನುಮಂತನಾಗಿ ಕೇಳುಗರನ್ನು ಭಾವಸ್ಪರ್ಶದ ನದಿಯಲ್ಲಿ ತೇಲಾಡಿಸಿದರೆ ಅರ್ಜುನನಾಗಿ ಡಾ| ದೇಜಪ್ಪ ದಲ್ಲೋಡಿಯವರು ಅರ್ಜುನನ ಪಾತ್ರವನ್ನು ಪರಿಪೂರ್ಣವಾಗಿ ಚಿತ್ರಿಸುತ್ತ ಬಂದರು. ಅರ್ಜುನನ ಅಗ್ನಿಪ್ರವೇಶವನ್ನು ತಡೆಯಲು ಶ್ರೀಕೃಷ್ಣನಾಗಿ, ಭಕ್ತದ್ವಯರಿಗೆ ದರ್ಶನ ನೀಡುವ ಶ್ರೀರಾಮನಾಗಿ ಪಾತ್ರ ವಹಿಸಿ ಉಪನ್ಯಾಸಕಿ ಸುವರ್ಣ ಕುಮಾರಿಯವರ ಭಾವಪೂರ್ಣವಾದ ಮಾತುಗಾರಿಕೆ ರಂಜನೀಯವಾಗಿತ್ತು. ನರಸಿಂಹಮೂರ್ತಿಯವರ ಮೃದಂಗ, ಅಮೋಘ ಕುಂಟಿನಿಯವರ ಚೆಂಡೆ, ಎಂಟೆಕ್ ವಿದ್ಯಾರ್ಥಿ ರಾಮಪ್ರಕಾಶ ಕಲ್ಲೂರಾಯರ ಮೋಹಕ ಕಂಠದ ಭಾಗವತಿಕೆ ಪ್ರಸಂಗದ ಒಟ್ಟಂದವನ್ನು ಹೆಚ್ಚಿಸಿದವು.
ಎರಡನೆಯ ಅರ್ಜುನನನ್ನು ಚಿತ್ರಿಸಿದವರು ರಾಮಕುಂಜೇಶ್ವರ ಪದವಿ ವಿದ್ಯಾಲಯದ ವಿದ್ಯಾರ್ಥಿಗಳು. ಸಹೋದರಿಯರಾದ ಜ್ಯೋತ್ಸಾ$° ರಾವ್ ಮತ್ತು ಜ್ಯೋತಿ ರಾವ್ ಅವರ ಸರಸ ಸಂಭಾಷಣೆಯೊಂದಿಗೆ ಆರಂಭವಾದ “ಸುಭದ್ರಾರ್ಜುನ’ ಪ್ರಸಂಗದ ಬಲರಾಮನಾಗಿ ಕೃಷ್ಣಮೂರ್ತಿ ಯವರ ಪ್ರವೇಶದೊಂದಿಗೆ ಸಂಚಲನವನ್ನುಂಟು ಮಾಡಿತು. ಯಾವುದೇ ಬಯಲಾಟದ ಪಾತ್ರಕ್ಕೂ ಕಮ್ಮಿಯಿಲ್ಲದಂತೆ ಬಲರಾಮನ ಮುಂದೆ ಸನ್ಯಾಸಿ ಅರ್ಜುನನಾಗಿ ಸನ್ಯಾಸನ ಧರ್ಮದ ಎಲ್ಲ ವಿಧಿಗಳ ನಿರೂಪಣೆ ಮಾಡಿದ ನಾರಾಯಣ ಭಟ್ಟರು ಒಂದು ಸುಂದರ ಕಥಾನಕವನ್ನು ಅಷ್ಟೇ ಚಂದವಾಗಿ ತಂದು ನಿಲ್ಲಿಸುವಲ್ಲಿ ಸಮರ್ಥರಾದರು. ಸುರೇಶ ಪೈಯವರ ಭಾಗವತಿಕೆಯೂ ಕಿವಿಗಳಿಗೆ ತಂಪೆರೆಯಿತು.
ಮೂರನೆಯ ಅರ್ಜುನನನ್ನು ರಂಗದ ಮೇಲೆ ಕಳೆ ಕಟ್ಟಿದವರು ಅರಕಲಗೂಡಿನ ಕೋದಂಡ ರಾಮ ಯಕ್ಷಗಾನ ಕಲಾಸಂಘದ ಕಲಾವಿದರು. ಪೆರುವಡಿ ಸುಬ್ರಾಯ ಭಟ್ಟರ ಸುಮಧುರ ಕಂಠದ ಭಾಗವತಿಕೆ ಮಧ್ಯಾಹ್ನದ ಹಸಿವನ್ನೂ ಮರೆಸಿ ಕೇಳುಗರನ್ನು ಭಾವಲೋಕದ ಉತ್ತುಂಗಕ್ಕೇರಿಸಿತು. ಸಂಸ್ಕೃತ ಶಿಕ್ಷಕರಾದ ಲಕ್ಷ್ಮೀನಾರಾಯಣ ಭಟ್ಟರ ಅರ್ಜುನನ ಕಠೊರ ತಪಸ್ಸಿನ ಕೊನೆಗೆ ಕಿರಾತನಾಗಿ ಬಂದು ಕಾಡುವ ಶಿವನು ಸಾಕ್ಷಾತ್ಕಾರ ಹೊಂದುವ ಸನ್ನಿವೇಶ ಮನ ಮುಟ್ಟುವಂತಿತ್ತು.
ಕಡೆಯದಾಗಿ ಮೂಡಬಿದರೆಯ ಡಾ| ದೇಜಪ್ಪ ದಲ್ಲೋಡಿ ಮತ್ತು ಬಳಗದವವರು ಪ್ರಸ್ತುತಪಡಿ ಸಿದ “ಕರ್ಣಾವಸಾನ’ ಪ್ರಸಂಗದಲ್ಲಿ ಮನ ಸೆಳೆದದ್ದು ಉಜಿರೆ ವೆಂಕಟರಾಯರ ಸಾಂಪ್ರದಾಯಿಕ ಶೈಲಿಯ ಹಾಡುಗಾರಿಕೆ. ದಲ್ಲೋಡಿ ಅವರ ಕರ್ಣನಿಗೆ ಸಾಟಿಯಾದವರು ಉದಯಶಂಕರ ಭಟ್ಟರು. “ಎಲವೋ ಸೂತನ ಮಗನೇ’ ಪದ್ಯದಿಂದಲೇ ವಿಜೃಂಭಿಸಿದ ಅರ್ಜುನನ ಶರಗಳ ಹಾಗೆಯೇ ವಾಗ್ಬಾಣಗಳೂ ಹರಿತವಾಗಿದ್ದು, ಒಟ್ಟಂದದಲ್ಲಿ ಪ್ರಸಂಗವನ್ನು ಬಹು ಸೊಬಗಿನಿಂದ ಮುನ್ನಡೆಸಿತು. ದಲ್ಲೋಡಿ ಅವರು ದಾನಶೂರನ ಬದುಕಿನ ದುರಂತವನ್ನು ಬಿಂಬಿಸುವಲ್ಲಿ ಸಫಲರಾದರು.
ಅರ್ಜುನನ ಪಾತ್ರ ಚಿತ್ರಣ ವನ್ನು ಮನದ ಮುಂದೆ ತರುವಲ್ಲಿ ಗಮಕ ಕಲಾ ಪರಿಷತ್ ಸ್ತುತ್ಯರ್ಹ ಪ್ರಯತ್ನ ಮಾಡಿದೆ.
ಪ. ರಾಮಕೃಷ್ಣ ಶಾಸ್ತ್ರಿ