Advertisement

ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ಅರ್ಜುನ ಮತ್ತು ತಂಡ

11:34 AM Oct 21, 2018 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ದಸರಾ ಮಹೋತ್ಸವವನ್ನು ಸಂಪನ್ನಗೊಳಿಸಿದ ಕ್ಯಾಪ್ಟನ್‌ ಅರ್ಜುನ ನೇತೃತ್ವದ ಗಜಪಡೆ ಶನಿವಾರ ಫ‌ುಲ್‌ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿದ್ದವು. 

Advertisement

ದಸರಾ ಹಿನ್ನೆಲೆಯಲ್ಲಿ ಕಾಡಿನಿಂದ ನಾಡಿಗೆ ಬಂದು ಕಳೆದ ಒಂದೂವರೆ ತಿಂಗಳಿನಿಂದ ಸತತ ತಾಲೀಮಿನಲ್ಲಿ ತೊಡಗಿಕೊಂಡಿದ್ದ ಆನೆಗಳು ಎಲ್ಲರ ಪ್ರಮುಖ ಆಕರ್ಷಣೆಯಾಗಿದ್ದವು. ಇನ್ನೂ ಜಂಬೂಸವಾರಿ ಮೆರವಣಿಗೆಯಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುವ ಮೂಲಕ ಲಕ್ಷಾಂತರ ನೋಡುಗರ ಮೆಚ್ಚುಗೆಗೆ ಪಾತ್ರವಾರುವ ಗಜಪಡೆ ದಿನವಿಡಿ ವಿಶ್ರಾಂತಿ ಪಡೆದವು.

ಜಂಬೂಸವಾರಿಯ ಯಶಸ್ಸಿಗೆ ಕಾರಣವಾದ ಆನೆಗಳು ತನ್ನ ಮಾವುತರಿಂದ ಸ್ನಾನ ಮಾಡಿಸಿಕೊಂಡು, ನೀರಿನಲ್ಲಿ ಮಿಂದೆದ್ದು ವಿಶ್ರಾಂತಿ ಪಡೆದವು. ಕೋಡಿಸೋಮೇಶ್ವರ ದೇವಸ್ಥಾನದ ಬಳಿಯಿರುವ ನೀರಿನ ತೊಟ್ಟಿಯಲ್ಲಿ ಎಲ್ಲಾ ಆನೆಗಳು ಅವುಗಳ ಮಾವುತರು ಬೆಳಗ್ಗೆಯೇ ಸ್ನಾನ ಮಾಡಿಸಿದರು. ಮಾವುತರೊಂದಿಗೆ ಅವರ ಮಕ್ಕಳು ಆನೆಗಳ ಮೈಮೇಲಿದ್ದ ಬಣ್ಣಗಳನ್ನು ತೊಳೆಯಲು ಸಹಾಯ ಮಾಡಿದರು. 

ಆನೆಗಳು ಕಾಡಿಗೆ ವಾಪಸಾಗುವಷ್ಟೂ ದಿನ ಅವುಗಳಿಗೆ ಕೆಲ ದಿನಗಳಿಂದ ನೀಡುತ್ತಿರುವ ವಿಶೇಷ ಆಹಾರವನ್ನು ನೀಡಲಾಗುವುದು. ಅದೇ ರೀತಿ ಅವುಗಳ ಜತೆಯಲ್ಲಿ ಬಂದಿರುವವರಿಗೂ ಆಹಾರ ನೀಡುವುದನ್ನು ಮುಂದುವರಿಸಲಾಗುವುದು. ಆದರೆ ಕಾಡಿಗೆ ಹೋದ ಮೇಲೆ ನಮ್ಮನ್ನು ಕೇಳುವವರಿಲ್ಲ. ಇಲ್ಲಿರುವಾಗ ಎಲ್ಲರೂ ಬಂದು ಮಾತನಾಡಿಸಿ ಹೋಗುತ್ತಾರೆ. ಶಿಬಿರಕ್ಕೆ ಹೋದ ಮೇಲೆ ಯಾರೂ ಬಂದು ಕೇಳುವವರಿಲ್ಲ ಎಂದು ಮಾವುತರೊಬ್ಬರು ಬೇಸರದಿಂದ ನುಡಿದರು. 

ಆನೆಗಳಿಗೆ ಸ್ನಾನ ಮಾಡಿಸುವ ಕೆಲಸದ ವೇಳೆ ವೈದ್ಯ ಡಾ.ನಾಗರಾಜ್‌ ಖುದ್ದು ಹಾಜರಿದ್ದು ನೋಡಿಕೊಂಡರು. ಇದೇ ವೇಳೆ ಜಂಬೂಸವಾರಿ ವೇಳೆ ಗಜಪಡೆಗಳಿಗೆ ಹಾಕಿದ್ದ ವಸ್ತ್ರಗಳು, ಆಭರಣಗಳು, ಗೆಜ್ಜೆಗಳು ಮುಂತಾದವುಗಳನ್ನು ತೆಗೆದಿದ್ದ ಮಾವುತರು ಹಾಗೂ ಕಾವಾಡಿಗಳು ಸಂಗ್ರಹಿಸಿ ಅರಮನೆ ಮಂಡಳಿಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. 

Advertisement

ಇಂದು ನಾಡಿನಿಂದ ಕಾಡಿಗೆ: ಜಂಬೂಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದು ಕಳೆದ ಒಂದೂವರೆ ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ಆನೆಗಳು ಇಂದು ಕಾಡಿನತ್ತ ಪ್ರಯಾಣ ಬೆಳೆಸಲಿವೆ. ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳು ವಿವಿಧ ಆನೆ ಶಿಬಿರಗಳಿಂದ 12 ಆನೆಗಳು ಆಗಮಿಸಿದ್ದವು.

ಈ ಎಲ್ಲಾ ಆನೆಗಳು ಭಾನುವಾರ ಬೆಳಗ್ಗೆ 9.30ಕ್ಕೆ ಅರಮನೆಯಿಂದ ತಮ್ಮ ತಮ್ಮ ಶಿಬಿರಗಳಿಗೆ ಲಾರಿಗಳಲ್ಲಿ ಪ್ರಯಾಣ ಬೆಳೆಸಲಿವೆ. ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಆನೆಗಳಿಗೆ ಹಾಗೂ ಅವುಗಳ ಮಾವುತರು, ಕಾವಾಡಿಗಳಿಗೆ ಜಿಲ್ಲಾಡಳಿತದಿಂದ  ಬೀಳ್ಕೊಡುಗೆ ನೀಡಲಾಗುವುದು. 

ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಎರಡನೇ ಬಾರಿ ನಾನು ಅರ್ಜುನನಿಗೆ ಸಾರಥಿಯಾಗಿ ಅಂಬಾರಿ ಮುನ್ನಡೆಸಿದ್ದು ತುಂಬಾ ಖುಷಿಯಾಗಿದೆ. ಅಂಬಾರಿ ನಡೆಸುವ ವೇಳೆ ಯಾವುದೇ ತೊಂದರೆಯಾಗಿಲ್ಲ. ನಿಗದಿತ ಸಮಯಕ್ಕೆ ನಾವು ಗುರಿ ತಲುಪಿದ್ದೇವೆ. ಅಂಬಾರಿ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ.
-ವಿನು, ಅರ್ಜುನನ ಮಾವುತ

Advertisement

Udayavani is now on Telegram. Click here to join our channel and stay updated with the latest news.

Next