Advertisement

ರಾಜ್ಯದ 7,400 ಗ್ರಾ.ಪಂ ವಾರ್ಡ್ ಗಳಲ್ಲಿ ಕಾಂಗ್ರೆಸ್ ‘ಆರೋಗ್ಯ ಹಸ್ತ’ಅಭಿಯಾನ

05:20 PM Aug 15, 2020 | sudhir |

ಕಲಬುರಗಿ: ಕೋವಿಡ್ ಸೋಂಕು ನಿವಾರಣೆ ನಿಟ್ಟಿನಲ್ಲಿ ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ‘ಆರೋಗ್ಯ ಹಸ್ತ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದ 7,400 ಗ್ರಾಮ‌ ಪಂಚಾಯಿತಿ ಮತ್ತು ವಾರ್ಡ್ ಗಳಲ್ಲಿ ನಮ್ಮ ಕೋವಿಡ್ ವಾರಿಯರ್ಸ್‌ ಮನೆ-ಮನೆಗೆ ತೆರಳಿ ಸೋಂಕಿನ ಕುರಿತು ಜಾಗೃತಿ ಹಾಗೂ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ವಿಧಾನ ಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ‘ಆರೋಗ್ಯ ಹಸ್ತ’ ನಿರ್ವಹಣಾ ಸಮಿತಿಯ ಸಂಚಾಲಕ ಹಾಗೂ ಶಾಸಕ ಡಾ.ಅಜಯ್ ಸಿಂಗ್ ಹೇಳಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಇದುವರೆಗೆ 24 ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಜಗತ್ತಿನ ಕೋವಿಡ್ ಸೋಂಕಿತ ರಾಷ್ಟ್ರಗಳಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ. ದೇಶದಲ್ಲಿ ನಿತ್ಯ ಸುಮಾರು 60 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ರಾಜ್ಯದಲ್ಲಿ 6 ಸಾವಿರಕ್ಕೂ‌ ಮೇಲ್ಪಟ್ಟು ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, 10ರಷ್ಟು ಪಾಲು ಕರ್ನಾಟಕದ್ದು ಆಗಿದೆ. ಹೀಗಾಗಿ ಈ ಮಹಾಮಾರಿಯನ್ನು ಎದುರಿಸಲು ರಾಜ್ಯ ಸರ್ಕಾರಕ್ಕೆ ನಮ್ಮ ‘ಆರೋಗ್ಯ ಹಸ್ತ’ ಸಹಕಾರಿಯಾಗಿದೆ ಎಂದರು.

ಪ್ರತಿ ಜಿಲ್ಲೆ, ಪ್ರತಿ ತಾಲೂಕಿನ ಎಲ್ಲ ಗ್ರಾಪಂಗಳು ಹಾಗೂ ವಾರ್ಡ್ ಗಳಲ್ಲಿ ಕಾಂಗ್ರೆಸ್ ನಿಂದ ಇಬ್ಬರು ಕೋವಿಡ್ ವಾರಿಯರ್ಸ್ ನೇಮಿಸಲಾಗಿದೆ. ಅವರಿಗೆ ಥಮಲ್ ಸ್ಕ್ರೀನಿಂಗ್ ಗನ್, ಸ್ಯಾನಿಟೈಜರ್, ಮಾಸ್ಕ್ ಸೇರಿ ಸುರಕ್ಷಾ ಹಾಗೂ ಆರೋಗ್ಯ ಪರೀಕ್ಷಾ ಕಿಟ್ ಒದಗಿಸಲಾಗಿದೆ. ತಮ್ಮ ವ್ಯಾಪ್ತಿಯ ಗ್ರಾಮಗಳು ಮತ್ತು ವಾರ್ಡ್ ಗಳಲ್ಲಿ ಕೋವಿಡ್ ವಾರಿಯರ್ಸ್‌ ಮನೆ-ಮನೆಗೆ ಭೇಟಿ ಕೊಟ್ಟು ಆರೋಗ್ಯ ತಪಾಸಣೆ ಹಾಗೂ ರೋಗ ಲಕ್ಷಣಗಳು ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.

ಅನಾರೋಗ್ಯ ಪೀಡಿತರು, ಕೋವಿಡ್ ಲಕ್ಷಣಗಳುಳ್ಳ ವ್ಯಕ್ತಿಗಳು ಕಂಡು ಬಂದಲ್ಲಿ ಅಂತಹವರ ಮಾಹಿತಿಯನ್ನು ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಕೋವಿಡ್ ವಾರಿಯರ್ಸ್‌ ತಲುಪಿಸಲಿದ್ದಾರೆ. ಇದರಿಂದ ತಕ್ಷಣಕ್ಕೆ ಅಗತ್ಯ ಚಿಕಿತ್ಸೆ ದೊರಕಿ ಕೋವಿಡ್ ಸೋಂಕು ಹರಡವಿಕೆ ನಿಯಂತ್ರಿಸಲು ಸಾಧ್ಯವಾಗಲಿದೆ ಹಾಗೂ ಕೋವಿಡ್ ಮತ್ತು ಕೋವಿಡ್’ಯೇತರ ಎರಡೂ ರೀತಿಯ ಸಾವಿನ ಪ್ರಮಾಣ ತಗ್ಗಿಸಲು ‘ಆರೋಗ್ಯ ಹಸ್ತ’ ನೆರವಾಗಲಿದೆ ಎಂದು ವಿವರಿಸಿದರು.

ಇದೊಂದು ವಿನೂತನ ಹಾಗೂ ಪ್ರಾಮಾಣಿಕ ಯತ್ನವಾಗಿದ್ದು, ನಾಗರಿಕರು ಈ ಅಭಿಯಾನಕ್ಕೆ ಸ್ಪಂದಿಸುವ ವಿಶ್ವಾಸ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಕೋವಿಡ್ ಪಾಸಿಟಿವ್ ಬಂದು, ಅವರು ಗುಣಮುಖರಾಗಿದ್ದಾರೆ. ಹೀಗಾಗಿ ಸಾರ್ವಜನಿಕರು ಕೋವಿಡ್ ಬಗ್ಗೆ ಅನಗತ್ಯ ಆತಂಕ ಮತ್ತು ಭಯಪಡುವುದು ಬೇಡ. ಈ ಆರೋಗ್ಯ ಹಸ್ತ ಅಭಿಯಾನಕ್ಕೆ ರಾಜ್ಯಾದ್ಯಂತ 15 ಸಾವಿರ ಯುವಕರನ್ನು ವಾರಿಯರ್ಸ್‌ ಎಂದು ಗುರುತಿಸಲಾಗಿದೆ. ಅವರಿಗೆ ಕೆಪಿಸಿಸಿ ವತಿಯಿಂದ ಒಂದು ಲಕ್ಷ ರೂ. ಆರೋಗ್ಯ ವಿಮೆ ಮಾಡಿಸಲಾಗಿದೆ ಎಂದು ಅಜಯ್ ಸಿಂಗ್ ಮಾಹಿತಿ ನೀಡಿದರು.

Advertisement

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜವಾಬ್ದಾರಿಯುತ ವಿರೋಧಪಕ್ಷವಾಗಿ ಕೆಪಿಸಿಸಿ ವತಿಯಿಂದ ‘ಆರೋಗ್ಯ ಹಸ್ತ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಪ್ರಾಯೋಗಿಕವಾಗಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲೇ ಮಂಗಳವಾರದಿಂದ ಆರೋಗ್ಯ ತಪಾಸಣೆ ಪ್ರಾರಂಭಿಸಲಾಗುವುದು. ಸಾರ್ವಜನಿಕರು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಕಚೇರಿಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಡಾ.ಕಿರಣ್ ದೇಶಮುಖ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next