Advertisement

ಅಧಿವೇಶನದಲ್ಲಿ ನಿಯಮ ಕಿತ್ತಾಟ ; ಏನಿದು 176 ಮತ್ತು 267?

12:56 AM Jul 24, 2023 | Team Udayavani |

ಕಳೆದ ಎರಡು ತಿಂಗಳುಗಳಿಂದ ಮಣಿಪುರ ಹೊತ್ತಿ ಉರಿಯುತಿದ್ದು, ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ವೀಡಿಯೋ ಬಹಿರಂಗವಾದ ಮೇಲೆ ವಿವಾದ ಮತ್ತಷ್ಟು ಕಾವು ಪಡೆದುಕೊಂಡಿದೆ. ಮಣಿಪುರದ ಗದ್ದಲ ಸಂಸತ್‌ನ ಉಭಯ ಸದನಗಳಲ್ಲೂ ಸದ್ದು ಮಾಡಿದ್ದು, ನಿಯಮ 267ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿದರೆ, ಸರಕಾರ ನಿಯಮ 176ರ ಅಡಿಯಲ್ಲಿ ಚರ್ಚೆಗೆ ಸಿದ್ಧ ಎಂದು ಹೇಳಿದೆ. ಹಾಗಾದರೆ ಏನಿದು ನಿಯಮಗಳು? ಇಲ್ಲಿದೆ ಮಾಹಿತಿ…

Advertisement

ನಿಯಮ 267 ಅಂದರೇನು?
ಸಂಸತ್‌ನ ನಿಯಮ 267ರ ಅನ್ವಯ ಯಾವುದೇ ವಿಷಯದ ಬಗ್ಗೆ ಸುದೀರ್ಘ‌ವಾದ ಚರ್ಚೆಗೆ ಅವಕಾಶ ಕೊಡುವುದು. ಸದಸ್ಯರೊಬ್ಬರು ಸಭಾಧ್ಯಕ್ಷ ಅಥವಾ ಸಭಾಪತಿಗಳ ಅನುಮತಿ ಮೇರೆಗೆ ಈ ನಿಯಮದ‌ಡಿ ಚರ್ಚೆಗೆ ಆಗ್ರಹಿಸಬಹುದು. ಒಂದು ವೇಳೆ ಸಭಾಧ್ಯಕ್ಷ ಅಥವಾ ಸಭಾಪತಿ ಒಪ್ಪಿಗೆ ನೀಡಿದರೆ, ವಿಚಾರವೊಂದರ ಬಗ್ಗೆ ಎಷ್ಟು ಗಂಟೆ ಅಥವಾ ಎಷ್ಟು ದಿನಗಳ ವರೆಗೆ ಬೇಕಾದರೂ ಚರ್ಚಿಸಬಹುದು. ಬೇರೆ ನಿಯಮಗಳನ್ನು ತೆಗೆದು ಪಕ್ಕಕ್ಕಿಡಬಹುದು.

ವಿಪಕ್ಷಗಳ ವಾದವೇನು?
ಒಂದೊಮ್ಮೆ ನಿಯಮ 267ರ ಅನ್ವಯ ಅವಕಾಶ ನೀಡದೇ, 176ರ ಅನ್ವಯ ಅವಕಾಶ ನೀಡಿದರೆ, ಚರ್ಚೆಗೆ ಸಮಯ ಸಾಕಾಗುವುದಿಲ್ಲ ಎಂದು ವಿಪಕ್ಷಗಳು ಹೇಳುತ್ತಿವೆ. ಕಳೆದ ಎರಡು ತಿಂಗಳಿಂದ ಮಣಿಪುರ ಗದ್ದಲ ಮುಂದುವರಿದಿದ್ದು ಈ ಬಗ್ಗೆ ಸುದೀರ್ಘ‌ ಚರ್ಚೆಯಾಗಬೇಕು. ಪ್ರಧಾನಿಗಳೇ ಉತ್ತರ ನೀಡಬೇಕು ಎಂಬುದು ಅವುಗಳ ಆಗ್ರಹ.

ಸರಕಾರದ ವಾದವೇನು?
ಮಣಿಪುರ ಗದ್ದಲ ಬಗ್ಗೆ ಚರ್ಚೆ ನಡೆಸಲು ನಿಯಮ 176 ಸಾಕು. ಅಲ್ಲದೆ ಪ್ರಧಾನಿಯವರೇ ಉತ್ತರ ಕೊಡಬೇಕು ಎಂದೇನಿಲ್ಲ. ಗೃಹ ಸಚಿವ ಅಮಿತ್‌ ಶಾ ಅವರು ಉತ್ತರ ಕೊಡುತ್ತಾರೆ ಎಂದಿದೆ. ಆದರೆ ಇದಕ್ಕೆ ವಿಪಕ್ಷಗಳು ಒಪ್ಪಿಗೆ ನೀಡಿಲ್ಲ. ಹೀಗಾಗಿ ಮೊದಲ ಎರಡು ದಿನಗಳ ಅಧಿವೇಶನ ಗದ್ದಲದಿಂದಾಗಿಯೇ ಕೊಚ್ಚಿ ಹೋಗಿದೆ.

ನಿಯಮ 176 ಅಂದರೇನು?
ಸಂಸತ್‌ನ ನಿಯಮ 176 ಅನ್ವಯ ಯಾವುದೇ ವಿಷಯವನ್ನು ಎರಡೂವರೆ ಗಂಟೆಗಳ ವರೆಗೆ ಚರ್ಚೆ ನಡೆಸಬಹುದು. ಇದನ್ನು ದಾಟಿ ಮುಂದಕ್ಕೆ ಹೋಗುವಂತಿಲ್ಲ. ಈ ಎರಡೂವರೆ ಗಂಟೆಗಳ ಅವಧಿಯಲ್ಲಿ ನಿಗದಿತ ವಿಷಯದ ಬಗ್ಗೆ ಚರ್ಚೆ ಮುಗಿಸಬೇಕು. ಆಗ ಕಡಿಮೆ ಸದಸ್ಯರಿಗೆ ಮತ್ತು ಕಡಿಮೆ ಅವಧಿಯ ಸಮಯ ಸಿಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next