Advertisement

ಆಸ್ಟ್ರೇಲಿಯವನ್ನು ಅಟ್ಟಾಡಿಸಿದ ಆರ್ಜೆಂಟೀನಾ

07:22 PM Dec 04, 2022 | Team Udayavani |

ಅಲ್‌ ರಯಾನ್‌: ಲ್ಯಾಂಡ್‌ಮಾರ್ಕ್‌ ಮ್ಯಾಚ್‌ನಲ್ಲಿ ಸ್ಫೂರ್ತಿಯಾದ ಲಿಯೋನೆಲ್‌ ಮೆಸ್ಸಿ, ಫಿಫಾ ವಿಶ್ವಕಪ್‌ನಲ್ಲಿ ಆರ್ಜೆಂಟೀನಾವನ್ನು ಕ್ವಾರ್ಟರ್‌ ಫೈನಲ್‌ಗೆ ಕೊಂಡೊಯ್ದ ಹೀರೋ ಆಗಿ ಮೂಡಿಬಂದಿದ್ದಾರೆ.

Advertisement

ಕಳೆದ ರಾತ್ರಿ “ಅಹ್ಮದ್‌ ಬಿನ್‌ ಅಲ್‌ ಸ್ಟೇಡಿಯಂ’ನಲ್ಲಿ ನಡೆದ ಆಸ್ಟ್ರೇಲಿಯ ಎದುರಿನ ಪಂದ್ಯವನ್ನು ಆರ್ಜೆಂಟೀನಾ 2-1 ಅಂತರದಿಂದ ಗೆದ್ದಿತು. ಮೊದಲ ಗೋಲು ಮೆಸ್ಸಿ ಕಾಲ್ಚಳಕದಲ್ಲಿ ದಾಖಲಾಯಿತು.

ಇದು ಮೆಸ್ಸಿ ಆಡಿದ ಫುಟ್‌ಬಾಲ್‌ ಇತಿಹಾಸದ 1,000ನೇ ಪಂದ್ಯ, ನಾಯಕನಾಗಿ ಕಾಣಿಸಿಕೊಂಡ 100ನೇ ಪಂದ್ಯ. ಇದನ್ನು ಸೂಪರ್‌ ಸ್ಟಾರ್‌ ಮೆಸ್ಸಿ ಸ್ಮರಣೀಯಗೊಳಿಸುವಲ್ಲಿ ಯಶಸ್ವಿಯಾದರು. ಶುಕ್ರವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಆರ್ಜೆಂಟೀನಾದ ಎದುರಾಳಿ ನೆದರ್ಲೆಂಡ್ಸ್‌. ಇದು 1998ರ ಕ್ವಾರ್ಟರ್‌ ಫೈನಲ್‌ ಪಂದ್ಯದ ಪುನರಾವರ್ತನೆ ಆಗಲಿದೆ. ಇನ್ನೊಂದು ಪಂದ್ಯದಲ್ಲಿ ಡಚ್‌ ಪಡೆ ಅಮೆರಿಕವನ್ನು 3-1 ಅಂತರದಿಂದ ಮಣಿಸಿ ಹೊರದಬ್ಬಿತ್ತು.

ಮೆಸ್ಸಿ ಮ್ಯಾಜಿಕ್‌:

ಪಂದ್ಯದ 35ನೇ ನಿಮಿಷದಲ್ಲಿ ಮೆಸ್ಸಿ ಮೊದಲ ಗೋಲು ಸಿಡಿಸಿದರು. ಇದು ವಿಶ್ವಕಪ್‌ನಲ್ಲಿ ಮೆಸ್ಸಿ ಬಾರಿಸಿದ 9ನೇ ಗೋಲು. ಇದರೊಂದಿಗೆ ಡೀಗೊ ಮರಡೋನಾ ಅವರ 8 ಗೋಲುಗಳ ವಿಶ್ವಕಪ್‌ ದಾಖಲೆ ಪತನಗೊಂಡಿತು. ಹಾಗೆಯೇ ಇದು ವಿಶ್ವಕಪ್‌ ನಾಕೌಟ್‌ ಪಂದ್ಯದಲ್ಲಿ ಮೆಸ್ಸಿ ಬಾರಿಸಿದ ಮೊದಲ ಗೋಲು ಕೂಡ ಹೌದು!

Advertisement

ವಿರಾಮದ ತನಕ ಆರ್ಜೆಂಟೀನಾ ಈ ಮುನ್ನಡೆಯನ್ನು ಕಾಯ್ದುಕೊಂಡಿತು. 57ನೇ ನಿಮಿಷದಲ್ಲಿ ಜೂಲಿಯನ್‌ ಅಲ್ವರೇಜ್‌ ದ್ವಿತೀಯ ಗೋಲು ಬಾರಿಸಿದರು. ಆರ್ಜೆಂಟೀನಾದ ಗೆಲುವು ಖಾತ್ರಿಯಾಯಿತು. 77ನೇ ನಿಮಿಷದಲ್ಲಿ ಆಸ್ಟ್ರೇಲಿಯದ ಎಂಝೊ ಫೆರ್ನಾಂಡಿಸ್‌ ಸಮಾಧಾನಕರ ಗೋಲೊಂದನ್ನು ಹೊಡೆದು ಸೋಲಿನ ಅಂತರವನ್ನು ತಗ್ಗಿಸುವಲ್ಲಿ ಯಶಸ್ವಿಯಾದರು. ಆಸೀಸ್‌ ಪಾಲಿಗೆ ಇದೊಂದು ಅನಿರೀಕ್ಷಿತ ಗೋಲ್‌ ಆಗಿತ್ತು.

“ಇವೆಲ್ಲ ಸ್ಮರಣೀಯ, ಅದ್ಭುತ ಅನುಭವಗಳು. ಇಂದು ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ನಾನು ನಿಜಕ್ಕೂ ಖುಷಿಪಡುತ್ತೇನೆ’ ಎಂದು ಮೆಸ್ಸಿ ಹೇಳಿದರು.

ಆರ್ಜೆಂಟೀನಾ 1986ರ ಬಳಿಕ ವಿಶ್ವಕಪ್‌ ಗೆದ್ದಿಲ್ಲ. ಅಂದಿನ ಕಪ್‌ ಮರಡೋನಾ ಕಾಲಾವಧಿಯಲ್ಲಿ ಬಂದಿತ್ತು.

ಆರ್ಜೆಂಟೀನಾ ಗ್ರೇಟ್‌ ಕಮ್‌ಬ್ಯಾಕ್‌:

45 ಸಾವಿರ ವೀಕ್ಷಕರ ಸಾಮರ್ಥ್ಯವುಳ್ಳ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯದ ಹಳದಿ ಜೆರ್ಸಿ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ ಆರ್ಜೆಂಟೀನಾದ ಅಬ್ಬರದ ಆಟದ ಮುಂದೆ ಕಾಂಗರೂ ಫ್ಯಾನ್ಸ್‌ ಥಂಡಾ ಹೊಡೆದರು. ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತು ಆಘಾತಕ್ಕೊಳಗಾಗಿದ್ದ ಆರ್ಜೆಂಟೀನಾ ಪಾಲಿಗೆ ಇದು ಗ್ರೇಟ್‌ ಕಮ್‌ಬ್ಯಾಕ್‌.

 

Advertisement

Udayavani is now on Telegram. Click here to join our channel and stay updated with the latest news.

Next