Advertisement
ಅರ್ಜೆಂಟೀನಾದಲ್ಲಿ ಒಂದು ವರ್ಷದ ಓದು ಸುತ್ತಾಟಕ್ಕೆ ನೆನ್ನೆ ಮೊನ್ನೆಯಷ್ಟೇ ಹೊರಟಿದ್ದೆ ಎನಿಸುತ್ತಿದ್ದರೂ ಈಗಾಗಲೇ ನನ್ನ ಪ್ರಯಾಣ ಕೊನೆಯಾಗುತ್ತಿದೆ. ಅದೂ ಎಂತಹ ವರ್ಷ! ಈ ಪ್ರಯಾಣ ಕೈಗೊಂಡಾಗ ಚೈನಾದ ವೂಹಾನಿನ ಈ ನಿಗೂಢ ಕಾಯಿಲೆಯ ಬಗ್ಗೆ ಯಾವ ಮಟ್ಟದ ಆತಂಕವೂ ಇರಲಿಲ್ಲ ಎನ್ನುವುದು ಸೋಜಿಗದಂತೆ ಈಗ ಕಾಣುತ್ತದೆ.
Related Articles
Advertisement
ಜೂನ್‌ನ ಹೊತ್ತಿಗೆ ಎಲ್ಲ ಸರಿ ಹೋಗುತ್ತದೆ ಎಂದು ನನ್ನ ವಸತಿ ಸಂಗಾತಿ ಹೇಳಿದ್ದು ಈಗ ನೆನಪಾಗುತ್ತಿದೆ. ಆ ಜೂನ್- ಆಗಸ್ಟಾಗಿ, ಅಕ್ಟೋಬರಿಗೆ ತಿರುಗಿ, ಡಿಸೆಂಬರ್ ಬಂದು ಜನವರಿಯಾದರೂ, ಇನ್ನೂ ಸುಗಮವಾಗಿ ಕೊನೆಗೊಳ್ಳುವ ಸೂಚನೆಗಳೇ ಕಾಣುತ್ತಿಲ್ಲ. ಒಂದಾದ ಮೇಲೆ ಒಂದರಂತೆ ನನ್ನಂತಹವರ ಫ್ಲೈಟ್‌ಗಳನ್ನು ರದ್ದು ಮಾಡುತ್ತಾ, ಆಟಗಾರರನ್ನೂ, ಸೆಲೆಬ್ರಿಟಿಗಳನ್ನೂ ಎಗ್ಗಿಲ್ಲದೇ ಆಸ್ಟ್ರೇಲಿಯಾದ ಒಳ ಹೊರಗೆ ಹಾರಾಡಿಸುತ್ತಿದ್ದರು. ನನ್ನ ದೇಶದ ಸರಕಾರ ನನ್ನನ್ನು ನನ್ನ ಮನೆಯಿಂದ ಹೊರಗಿಡಲು ಸರ್ವಪ್ರಯತ್ನ ಮಾಡುತ್ತಿರುವುದು ನಂಬಲಾಗದಂತಹ ವಿಚಿತ್ರ ಅನುಭವವಾಗಿ ನನ್ನನ್ನು ತಟ್ಟಿತು.
ನನ್ನ ಹಾಗೇ ಅನುಭವಿಸುತ್ತಿರುವವರನ್ನು ಆನ್‌ಲೈನ್‌ನಲ್ಲಿ ಹುಡುಕಿದಾಗ ಫೇಸ್‌ಬುಕ್‌ನಲ್ಲಿ ಸಿಕ್ಕ ದಕ್ಷಿಣ ಅಮೆರಿಕದಲ್ಲಿ ಸಿಕ್ಕುಳಿದ ಆಸ್ಟ್ರೇಲಿಯನ್ನರ ಗುಂಪೊಂದರಲ್ಲಿ ಹಲವಾರು ಮಂದಿ ಹಿಂದಿರುಗಲು ತಾವು ಪಡುತ್ತಿದ್ದ ಪಾಡಿನ ಕತೆಗಳನ್ನು ಹಂಚಿಕೊಳ್ಳುವುದನ್ನು ನೋಡಿದೆ. ಅಲ್ಲಿದ್ದವರ ಜತೆ ಮಾತಾಡಿದಾಗ ಮತ್ತೆ ಆಸ್ಟ್ರೇಲಿಯಾಕ್ಕೆ ಹಿಂದಿರುಗಿ ಮನೆಯವರನ್ನೂ ಸಂಗಾತಿಗಳನ್ನೂ ನೋಡುತ್ತೇನೆ ಎನ್ನುವ ಆಶಾಕಿರಣ ನನ್ನ ಮನದಲ್ಲೂ ಮೂಡಿತು ಎಂದೇ ಹೇಳಬೇಕು.
ನೀವು ಇದನ್ನು ಓದುತ್ತಿರುವಾಗ, ಸುಮಾರು ಮೂವತ್ತು ಸಾವಿರ ಆಸ್ಟ್ರೇಲಿಯನ್ನರು ಪ್ರಪಂಚದ ಹಲವೆಡೆ ಹಿಂದಿರುಗಲು ಕಾಯುತ್ತಿದ್ದು, ಸರಕಾರ ಯುಕೆ, ಯುಎಸ್ ಹಾಗೂ ಏಷಿಯಾಗಳಲ್ಲಿ ಸಹಾಯ ಮಾಡುತ್ತಿದ್ದರೂ ದಕ್ಷಿಣ ಅಮೆರಿಕದಲ್ಲಿ ಯಾವುದೇ ಸಹಾಯವಿಲ್ಲದೆ ಸಿಲುಕಿಕೊಂಡಿದ್ದಾರೆ ಎನ್ನುವುದು ವಿಷಾದಕರ.
ಆಸ್ಟ್ರೇಲಿಯಾದ ನನ್ನೂರು ಸಿಡ್ನಿಯಲ್ಲಿ ನಾನು ಹದಿನಾಲ್ಕು ದಿನಗಳ ಕಡ್ಡಾಯ ಕ್ವಾರಂಟೈನ್ ಅನ್ನು ಪೂರೈಸುತ್ತಿದ್ದೇನೆ. ನನ್ನ ಮನೆಯವರನ್ನು ಒಂದು ವರ್ಷದ ಬಳಿಕ, ಬಹುಶಃ ನಮ್ಮ ಬದುಕಿನ ಒಂದು ಅತ್ಯಂತ ವಿಷ್ಣ ವರ್ಷದ ಬಳಿಕ, ಮತ್ತೆ ತಬ್ಬಿಕೊಳ್ಳುತ್ತೇನೆ. ಮನೆಯವರೊಡನೆ ಸೇರಿಕೊಳ್ಳುತ್ತಿರುವ ನಾನು ಅತ್ಯಂತ ಅದೃಷ್ಟವಂತೆ ಅನಿಸುವಾಗಲೂ, ತಮ್ಮ ಕುಟುಂಬದವರಿಂದ ಬೇರ್ಪಟ್ಟು ಸಿಕ್ಕಿಕೊಂಡಿರುವವರನ್ನು ನೋಡಿ ನನ್ನ ಮನಸ್ಸು ಆರ್ದ್ರವಾಗಿ ನೆನೆಯುತ್ತದೆ.
ತನ್ಮಯ ನಾವಡ, ಅರ್ಜೆಂಟೀನ
ಅನುವಾದ: ಸುದರ್ಶನ್ ಎನ್.