ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಯುವತಿಯಿಂದ ಅರೆನಗ್ನ ನೃತ್ಯ ಮಾಡಿಸುವ ಮೂಲಕ ವ್ಯಕ್ತಿಗಳನ್ನು ವೇಶ್ಯಾವಾಟಿಕೆಗೆಆಹ್ವಾನಿಸುತ್ತಿದ್ದ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿಯ ಇನಾಯತ್ (30), ಚಿಕ್ಕ ಆಡುಗೋಡಿಯ ಜಲಾಲ್ ಪಾಷಾ (35) ಮತ್ತು ಕೆ.ಜಿ.ನಗರದ ರಾಹುಲ್ (26) ಬಂಧಿತರು. ಇವರ ವಶದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ರಕ್ಷಿಸಲಾಗಿದೆ.
ಬಂಧಿತರ ಪೈಕಿ ಜಲಾಲ್ ಪಾಷಾ ಈ ಹಿಂದೆ ತಿಲಕನಗರದ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದಿದ್ದು, ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ. ಬೇರೆ ರಾಜ್ಯದ ಯುವತಿಯರನ್ನು ಕರೆತಂದು ನಗರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿರುವಾಗಿ ಮಡಿವಾಳ ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಮಡಿವಾಳ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ದಂಡ ಹಾಕಿ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯಿಂದ ಬೆಲ್ಲಿ ಡ್ಯಾನ್ಸ್: ಪ್ರಸ್ತುತ ರಕ್ಷಿಸಿರುವ ಯುವತಿಯು ವಿವೇಕನಗರದಲ್ಲಿ ನೆಲೆಸಿದ್ದು, ಆಕೆಯನ್ನು ಪಶ್ಚಿಮ ಬಂಗಾಳದಿಂದ ಕರೆ ತಂದಿದ್ದ ಜಲಾಲ್ ಪಾಷಾ, ಆಕೆಯನ್ನು ಅರೆನಗ್ನವಾಗಿಸಿ, ಮಡಿವಾಳದ ಮಾರುತಿನಗರದ ಮುಖ್ಯ ರಸ್ತೆಯಲ್ಲಿ ಆಕೆಯಿಂದ ಬೆಲ್ಲಿ ಡ್ಯಾನ್ಸ್ ಮಾಡಿಸುತ್ತಿದ್ದ. ಸಾಲದೆಂಬಂತೆ, “ಹಣ ಕೊಡಿ ಮಜಾ ಮಾಡಿ’ ಎಂದು ದಾರಿಹೊಕರನ್ನು ದಂಧೆಗೆ ಆಹ್ವಾನಿಸುತ್ತಿದ್ದ.
ಇನ್ನುಳಿದ ಇಬ್ಬರು ಆರೋಪಿಗಳು ಗ್ರಾಹಕರನ್ನು ಸೆಳೆಯುತ್ತಿದ್ದರು. ಇದನ್ನು ಕಂಡ ದಾರಿಹೋಕರಿಗೆ ಇರುಸು ಮುರುಸು ಉಂಟಾಗುತ್ತಿತ್ತು. ಯುವತಿಯನ್ನು ಮಾರಾಟದ ವಸ್ತುವಾಗಿ ಬಳಸುವುದನ್ನು ಕಂಡ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮ್‌ಗೆ (100) ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕಂಟ್ರೋಲ್ ರೂಮ್ ಸಿಬ್ಬಂದಿ ಕೂಡಲೇ ಮಡಿವಾಳ ಠಾಣೆ ವ್ಯಾಪ್ತಿಯ ಪಿಂಕ್ ಹೊಯ್ಸಳಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಪಿಂಕ್ ಹೊಯ್ಸಳ ಸಿಬ್ಬಂದಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಯುವತಿಯನ್ನು ರಕ್ಷಿಸಿ ಮಹಿಳಾ ಸಾಂತ್ವನ ಕೇಂದ್ರದ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.