ಕಲಬುರಗಿ: ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿ ಶರಣಬಸವೇಶ್ವರರ 108 ಮೂರ್ತಿಗಳ ಪ್ರತಿಷ್ಠಾಪನೆ, ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೇಮಲ್ಲಾಪುರ ಶರಣಬಸವೇಶ್ವರ ಆಶ್ರಮದ ಪೀಠಾಧಿಪತಿ ಶ್ರೀ ಪ್ರಣವಾನಂದ ರಾಮಸ್ವಾಮಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಗರ್ಭಗುಡಿಯಲ್ಲಿ ಆರೂವರೆ ಅಡಿ ಎತ್ತರದ ಶರಣಬಸವೇಶ್ವರ ಮೂರ್ತಿ ಮತ್ತು ಎರಡು ಬದಿಯಲ್ಲಿ ಎರಡು ಅಡಿ ಎತ್ತರದ 107 ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈಗಾಗಲೇ ದೇವಸ್ಥಾನ ನಿರ್ಮಾಣದ ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಮೂರ್ತಿಗಳ ನಿರ್ಮಾಣಕ್ಕೆ ಕೇರಳದಿಂದ ಶಿಲೆ ತರಿಸಲಾಗುತ್ತಿದೆ. 2020ರೊಳಗೆ ದೇವಸ್ಥಾನ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ. ದೇವಸ್ಥಾನ ಉದ್ಘಾಟನೆ ದಿನ ಕಲಬುರಗಿಯಿಂದ ಆರೇಮಲ್ಲಾಪುರಕ್ಕೆ ಜ್ಯೋತಿ ತೆಗೆದುಕೊಂಡು ಹೋಗಲಾಗುತ್ತದೆ. ಭಕ್ತಾದಿಗಳು ತನು-ಮನ-ಧನದಿಂದ ಸಹಾಯ, ಸಹಕಾರ ನೀಡಿದಲ್ಲಿ ಇನ್ನುಳಿದ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.
ಆರೇಮೆಲ್ಲಾಪುರ ಗ್ರಾಮದಲ್ಲಿ 60 ವರ್ಷ ಹಿಂದೆ ಗ್ರಾಮಸ್ಥರು ಶರಣಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಕಲಬುರಗಿ ಶರಣಬಸವೇಶ್ವರ ದೇವಸ್ಥಾನದ ಪರಂಪರೆಯಂತೆ ಪೂಜಾ ವಿಧಿ ವಿಧಾನಗಳನ್ನು ಮಾಡುತ್ತಾ ಬಂದಿದ್ದರು. 2010ರಲ್ಲಿ ಶರಣಬಸವೇಶ್ವರ ಮಹಾಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಆರ್ಶೀವಾದದಿಂದ ಮತ್ತು ಗ್ರಾಮದ ಭಕ್ತರ ಕೋರಿಕೆಯಂತೆ ಆಶ್ರಮ ಪೀಠಾಧಿಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆಶ್ರಮದಲ್ಲಿ ಸಾಮೂಹಿಕ ವಿವಾಹ, ದಾಸೋಹ, ಭಜನೆ, ಪುರಾಣ ಪ್ರವಚನ, ಸದ್ಭಾವನ ಪಾದಯಾತ್ರೆ ಮತ್ತು ದೈನಂದಿನ ಪೂಜೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಆರೇಮಲ್ಲಾಪುರ ಗ್ರಾಮದ ಭಾವನ್ಮಠದ ಜಗನ್ನಾಥದಾಸ ಸರಸ್ವತಿ, ಮಂಜಪ್ಪ ಮಣಪುರ, ಶ್ರೀರಾಮ ಸೇನೆ ಮುಖಂಡ ಮಲ್ಲಿಕಾರ್ಜುನ ಧೋಳೆ ಇದ್ದರು.
ಮಗುವಿಗೆ ನಾಮಕರಣ
ಶರಣಬಸವೇಶ್ವರ ದೇವಸ್ಥಾನದಲ್ಲಿ ತಾವು 2015ರಲ್ಲಿ ಮೀರಾ ಅವರನ್ನು ಪಾಣಿಗ್ರಹಣ (ವಿವಾಹ) ಮಾಡಿಕೊಂಡಿದ್ದು, 2018ರ ನ.28ರಂದು ಪುತ್ರರತ್ನ ಪ್ರಾಪ್ತಿಯಾಯಿತು. ಬುಧವಾರ ಡಾ| ಶರಣಬಸವಪ್ಪ ಅಪ್ಪ ಅವರು ಮಗುವಿಗೆ ಶರಣಬಸವ ವೇದಪ್ರಕಾಶ ಎಂದು ನಾಮಕರಣ ಮಾಡಿದರು. ಜತೆಗೆ ಆಶ್ರಮದ ಉತ್ತರಾಧಿಕಾರಿಯೆಂದು ಘೋಷಿಸಲಾಯಿತು. ಪತ್ನಿ ಮೀರಾ ಐಎಎಸ್ ಪ್ರಿಲಿಮ್ನರಿ ಪರೀಕ್ಷೆ ತೇರ್ಗಡೆಗೊಂಡಿದ್ದು, ಮುಖ್ಯ ಪರೀಕ್ಷೆ ತಯಾರಿಯಲ್ಲಿದ್ದಾರೆ ಎಂದು ಶ್ರೀ ಪ್ರಣವಾನಂದ ರಾಮಸ್ವಾಮಿ ತಿಳಿಸಿದರು.