Advertisement

ಆರೇಲ್ತಡಿ: ಶಾಲೆ ಆವರಣದಲ್ಲಿದೆ ಅಪಾಯಕಾರಿ ಮರ 

12:30 PM Jul 04, 2018 | |

ಸವಣೂರು: ಸವಣೂರು ಗ್ರಾಮದ ಆರೇಲ್ತಡಿ ಶಾಲಾ ಆವರಣದಲ್ಲಿರುವ ಅಕೇಶಿಯಾ ಮರಗಳನ್ನು ತೆರವುಗೊಳಿಸುವಂತೆ ಸಲ್ಲಿಸಿದ ಬೇಡಿಕೆಗೆ ಯಾವುದೇ ಸ್ಪದಂನೆ ಇಲ್ಲ. ಈ ಮರಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಯಾರು ಹೊಣೆಗಾರರು ಎಂಬುದು ಹೆತ್ತವರ ಪ್ರಶ್ನೆ. ಆರೇಲ್ತಡಿ ಕಿ.ಪ್ರಾ. ಶಾಲಾ ಆವರಣದಲ್ಲಿ ಹಲವು ಅಕೇಶಿಯಾ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಯಾವ ಸಮಯದಲ್ಲಿ ಬೀಳಬಹುದು ಎಂಬುದನ್ನು ಊಹಿಸಲು ಅಸಾಧ್ಯವಾಗಿದೆ. ಅರಣ್ಯ ಇಲಾಖೆ ಏಕೆ ಈ ಮರಗಳನ್ನು ತೆರವುಗೊಳಿಸಲು ಮೀನ-ಮೇಷ ಎಣಿಸುತ್ತಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

Advertisement

ಗ್ರಾ.ಪಂ. ಸಭೆಯಲ್ಲಿ ನಿರ್ಣಯ
ಐದು ವರ್ಷಗಳಿಂದ ಈ ಮರ ತೆರವು ವಿಚಾರ ಸವಣೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಗೊಳ್ಳುತ್ತಿದ್ದು, ಪ್ರತಿ ಬಾರಿಯೂ ಅರಣ್ಯ ಇಲಾಖೆಗೆ ಕೇಳಿಕೊಳ್ಳುವುದೆಂದು ನಿರ್ಣಯಿಸಲಾಗುತ್ತದೆ. ಆದರೆ ಪಂ. ಸಭೆಯ ನಿರ್ಣಯಕ್ಕೆ ಅರಣ್ಯ ಇಲಾಖೆ ಯಾವುದೇ ಸ್ಪಂದನೆ ನೀಡಿದಂತೆ ಕಾಣುತ್ತಿಲ್ಲ.

ಮರ ಸತ್ತು ಹೋಗಿದೆ
ಇಲಾಖೆ ಗುರುತು ಹಾಕಿದ ಮರಗಳಲ್ಲಿ ಕೆಲವು ಸತ್ತು ಹೋಗಿದ್ದು, ಬೀಳುವ ಹಂತಕ್ಕೆ ಬಂದಿವೆ. ಅರಣ್ಯ ಇಲಾಖೆ ಗುರುತು ಹಾಕಿರುವುದರಿಂದ ಯಾರೂ ಇದನ್ನು ಮುಟ್ಟುತ್ತಿಲ್ಲ. ಒಂದು ವೇಳೆ ಈ ಮರಗಳು ಬಿದ್ದರೆ ಆಗುವ ಅನಾಹುತಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ.

ವಿದ್ಯಾರ್ಥಿಗಳೇ ಧ್ವನಿ ಎತ್ತಿದರು
ಈ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಶಾಲಾ ವಿದ್ಯಾರ್ಥಿಗಳೇ ಮಕ್ಕಳ ಗ್ರಾಮಸಭೆಯಲ್ಲಿ ಪ್ರಸ್ತಾವಿಸಿ, ಒತ್ತಾಯಿಸಿದ್ದರು. ಆದರೆ ಆ ಸಭೆಗೆ ಅರಣ್ಯ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಬಾರದೆ ಮಕ್ಕಳ ಆಗ್ರಹಕ್ಕೆ ಸ್ಪಂದನೆ ದೊರಕಿರಲಿಲ್ಲ.

ಪಕ್ಕದಲ್ಲಿದೆ ಅಂಗನವಾಡಿ ಕೇಂದ್ರ
ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲೇ ಅಂಗನವಾಡಿ ಕೇಂದ್ರವೂ ಇದೆ. ಗಾಳಿ-ಮಳೆ ಬರುವ ಸಮಯದಲ್ಲಿ ಇಲ್ಲಿನ ಪುಟಾಣಿಗಳಿಗೂ ಭಯದ ವಾತಾವರಣವೇ. ಅಲ್ಲದೆ, ಅಂಗನವಾಡಿ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್‌ ತಂತಿಯ ಮೇಲೆಯೇ ಅಕೇಶಿಯಾ ಮರ ಬಾಗಿದ್ದು, ಅಪಾಯಕ್ಕೆ ಎಡೆ ಮಾಡಿದೆ.

Advertisement

ಗುರುತು ಮಾಯವಾಗಿದೆ
ಈ ಶಾಲೆಯ ಆವರಣದಲ್ಲಿರುವ ಮರಗಳನ್ನು ತೆರವುಗೊಳಿಸುವ ಸಲುವಾಗಿ ಅರಣ್ಯ ಇಲಾಖೆ ಮರಗಳಿಗೆ ಕೆಂಪು ಬಣ್ಣದಿಂದ ಸಂಖ್ಯೆ ಬರೆದು ಗುರುತು ಹಾಕಿ ಹಲವು ವರ್ಷಗಳು ಕಳೆದಿವೆ. ಮಾಡಿದ ಗುರುತು ಮಾಸಿ ಹೋಗುತ್ತಿದ್ದರೂ ಅರಣ್ಯ ಇಲಾಖೆಯ ಸುಳಿವೇ ಇಲ್ಲ.

ಪರಿಶೀಲಿಸಿ ತೆರವು
ಈ ರೀತಿಯ ಸಮಸ್ಯೆ ಇರುವ ಕುರಿತು ತನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಮರ ತೆರವುಗೊಳಿಸುವ ಕೆಲಸ ಮಾಡಲಾಗುವುದು.
– ಎನ್‌. ಸುಬ್ರಹ್ಮಣ್ಯ ರಾವ್‌
 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,
ಪುತ್ತೂರು ಉಪವಿಭಾಗ

ತೆರವು ಮಾಡಿ
ಮಕ್ಕಳಿರುವ ಈ ಶಾಲೆಯ ಆವರಣದಲ್ಲಿ ಗುರುತು ಹಾಕಿರುವ ಎಲ್ಲಾ ಮರಗಳನ್ನು ತೆರವುಗೊಳಿಸಬೇಕು.ಮಳೆಗಾಲವಾದರಿಂದ ಮರ ಮುರಿದು ಬೀಳುವ ಅಪಾಯವಿದ್ದು ಅರಣ್ಯ ಇಲಾಖೆ ಶೀಘ್ರ ಗಮನಹರಿಸಿ ಸಮಸ್ಯೆ ದೂರ ಮಾಡಬೇಕು.
 - ಪ್ರಕಾಶ್‌ ಕುದ್ಮನಮಜಲು,
ಸದಸ್ಯರು, ಸವಣೂರು ಗ್ರಾ.ಪಂ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next