Advertisement

ಅಡಕೆ ತೋಟ ಪುನರ್‌ ನಿರ್ಮಾಣಕ್ಕೆ ಬೆಂಬಲ

12:51 PM Sep 10, 2019 | Team Udayavani |

ಶಿರಸಿ: ಜಿಲ್ಲೆಯಲ್ಲಿ ಅತಿ ನೆರೆಗೆ ಉಂಟಾದ ಹಾನಿಗೆ ಅಡಕೆ ಬೆಳೆಗಾರರು ಕೂಡ ಕಂಗಾಲಾಗಿದ್ದು, ತೋಟ ಪಟ್ಟಿಗಳ ದುರಸ್ತಿ, ಹೊರ ಕಂಟ ದುರಸ್ತಿ, ತೋಟಗಳಲ್ಲಿ ಮರಗಳ ನಾಶ ಸೇರಿದಂತೆ ಅನೇಕ ಕಾರ್ಯಗಳ ಮೂಲಕ ಪುನರ್‌ ಸೃಷ್ಟಿಯ ಕೆಲಸ ಆಗಬೇಕಿದೆ. ಈಗ ಈ ಕಾರ್ಯಕ್ಕೆ ಬೆಂಬಲವಾಗಿ ರಾಷ್ಟ್ರೀಯ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಲ ಕೊಡಲಿದೆ.

Advertisement

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸುಮಾರು 2,853 ಹೆಕ್ಟೇರ್‌ ಅಡಕೆ ತೋಟಗಳಿಗೆ ಹಾನಿ ಆಗಿದೆ. ಇಂತಹ ತೊಟಗಳ ಪುನಶ್ಚೇತನಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ತೊಟಗಾರಿಕಾ ಇಲಾಖೆ ನೆರವು ನೀಡಲು ಮುಂದಾಗಿದೆ.

ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಹೊಳೆಹಳ್ಳಗಳು ತುಂಬಿ ಹರಿದು ಅಡಕೆ ತೋಟಗಳನ್ನು ನಾಶ ಮಾಡಿವೆ. ಸುಳಿಯಾಗಿ ಬಂದ ಗಾಳಿಯಿಂದ ಅಡಕೆ ಮರಗಳು ಮುರಿದು ಹೋಗಿವೆ. ಮುಖ್ಯವಾಗಿ ತೋಟದ ಪಕ್ಕದ ಧರೆ ಕುಸಿದು ತೋಟವನ್ನೇ ಬುಡಮೇಲು ಮಾಡಿವೆ. ಅತಿವೃಷ್ಟಿಯಿಂದ ಗ್ರಾಮೀಣ ರೈತರ ಬದುಕಾದ ಅಡಕೆ ಬೇಸಾಯ ಬಾಣಲೆಗೆ ಕೆಡಗಿದೆ.

ಮುಖ್ಯವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹೊನ್ನಾವರ ತಾಲೂಕಿನ ಸಾವಿರಾರು ಕುಟುಂಬಗಳು ಈ ಹಾನಿಯಿಂದ ಕಂಗಾಲಾಗಿವೆ. ಈ ಮಧ್ಯೆ ಅಡಕೆ ಕೊಳೆ ರೋಗ ಕೂಡ ಬೇರೆ ಪರಿಣಾಮ ಬೀರುತ್ತಿದೆ.

ಈ ಹಿನ್ನೆಲೆಯಲ್ಲಿ ಸಣ್ಣ, ಅತಿಸಣ್ಣ ಹಾಗೂ ಪರಿಶಿಷ್ಟ ಜಾತಿ, ಪಂಗಡದ ರೈತರು ಉದ್ಯೋಗ ಖಾತ್ರಿ ಯೋಜನೆಯ ನೆರವಿಗೆ ಆರ್ಹತೆ ಪಡೆದುಕೊಳ್ಳಲಿದ್ದಾರೆ.

Advertisement

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶೇ.25 ಕ್ಕಿಂತ ಹೆಚ್ಚಿನ ಹಾನಿಯಾದ ಅಡಕೆ ತೋಟ ನಿರ್ಮಿಸಲು ಪ್ರತಿ ಹೆಕ್ಟರ್‌ಗೆ 73, 684ರೂ. ಹಾಗೂ ಶೇ.50ಕ್ಕಿಂತ ಹೆಚ್ಚಿನ ಹಾನಿಯಾದರೆ ಪ್ರತಿ ಹೆಕ್ಟರ್‌ಗೆ 1.38,777ರೂ.ಗಳ ಈ ಸವಲತ್ತು ಪಡೆಯಬಹುದಾಗಿದೆ. ರೈತರು ತಮ್ಮ ಅಧಿಕೃತ ಜಮೀನಿನ ಕನಿಷ್ಠ 20 ಗುಂಟೆ ವಿಸ್ತೀರ್ಣದಲ್ಲಿ ಹಾನಿಗೊಳಗಾದ ಅಡಕೆ ತೋಟವನ್ನು ಪುನಶ್ಚೇತನಗೊಳಿಸಬಹುದಾಗಿದೆ.

ಈ ಯೋಜನೆಯ ಲಾಭ ಪಡೆಯಲು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ರೈತರು ಇಲಾಖೆಗೆ ಸಲ್ಲಿಸಿದ ಅರ್ಜಿ ಸಂಬಂಧಿಸಿದ ವಿಶೇಷ ಗ್ರಾಪಂ ಸಭೆ ಆಯೋಜಿಸಿ ಠರಾವು ಅಂಗಿಕರಿಸಿ ನಿಯಮದಂತೆ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.

ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಎಲ್ಲರಿಗೂ ಅಳವಡಿಕೆ ಮಾಡಿಕೊಡಬೇಕು. ಪ್ರತೀ ಗಿಡ ನೆಟ್ಟರೂ ಅದಕ್ಕೂ ಗಿಡದ ಮೊತ್ತ, ನಾಟಿ ಮೊತ್ತವನ್ನೂ ಕೊಡುವಂತೆ ಆಗಬೇಕು. ಆಗ ಮಾತ್ರ ಎಲ್ಲರಿಗೂ ನೆರವಾಗುತ್ತದೆ. • ವೆಂಕಟೇಶ ಹೆಗಡೆ, ರೈತ

ಉದ್ಯೋಗ ಖಾತ್ರಿ ಯೋಜನೆ ಮೂಲಕ ರೈತರು ತೋಟದ ಪುನಶ್ಚೇತನಕ್ಕೆ ಮುಂದಾಗಬಹುದು. ಅದಕ್ಕೆ ಇಲಾಖೆಯ ನೆರವಿದೆ.
• ಸತೀಶ ಹೆಗಡೆ, ತೋಟಗಾರಿಕಾ ಅಧಿಕಾರಿ

 

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next