Advertisement

ಅಡಿಕೆ ಒಣಗುವ ಹಂತದಲ್ಲೂ ಮಳೆ ಅಡ್ಡಿ

12:32 AM Feb 18, 2022 | Team Udayavani |

ಸುಳ್ಯ: ನಿರಂತರ ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಅಡಿಕೆ ಬೆಳೆಗಾರರು ಇದೀಗ ಅಕಾಲಿಕ ಮಳೆಯಿಂದಾಗಿ ಮತ್ತೆ ಸಂಕಷ್ಟಕ್ಕೀಡಾಗಿದ್ದಾರೆ.

Advertisement

ಕಳೆದ ವರ್ಷ ಬಿಡುವಿಲ್ಲದೆ ಸುರಿಯುವ ಮೂಲಕ ಅಡಿಕೆ ಕೊçಲನ್ನು ವಿಳಂಬವಾಗಿಸಿದ್ದ ಮಳೆಯು ಅಡಿಕೆ ಒಣಗಲು ಹಾಕಿ ಕೊನೆ ಹಂತದಲ್ಲಿರುವ ಸಮಯದಲ್ಲಿ ಮತ್ತೆ ಸುರಿಯಲಾರಂಭಿಸಿದೆ.

ಹೊಡೆತದ ಮೇಲೆ ಹೊಡೆತ:

ಅಡಿಕೆ ಕೃಷಿಯನ್ನೇ ಜೀವನಾಧಾರ ವಾಗಿಸಿಕೊಂಡವರು ಇಲ್ಲಿನ ಕೃಷಿಕರು. ಎಲ್ಲರ ಅಂಗಳದಲ್ಲೂ ಒಣಗಲು ಹಾಕಿದ ಅಡಿಕೆ ಇದ್ದು, ಕಡು ಬೇಸಗೆ ಆಗಿರುವ ಕಾರಣ ಯಾರೂ ಕೂಡ ಪ್ಲಾಸ್ಟಿಕ್‌ನಿಂದ ಮುಚ್ಚುವುದಿಲ್ಲ. ಕಡಬ, ಸುಳ್ಯ ತಾಲೂಕುಗಳಲ್ಲಿ ಮೂರು ದಿನಗಳಿಂದ ಸುರಿದ ಮಳೆ ಒಣಗಿದ ಅಡಿಕೆಯನ್ನು ತೊಯ್ದು ತೊಪ್ಪೆ ಮಾಡಿದೆ. ಕೆಲವರು ಪ್ಲಾಸ್ಟಿಕ್‌ ಹೊದೆಸಿ ಅಲ್ಪ ರಕ್ಷಣೆ ಮಾಡಿದರೂ ಕೆಲವರಿಗೆ ಅದನ್ನೂ ಮಾಡಲು ಅವಕಾಶವಾಗಿಲ್ಲ. ಒಟ್ಟಿನಲ್ಲಿ ಅಂಗಳದಲ್ಲಿರುವ ಅಡಿಕೆಯನ್ನು ಮಳೆಯಿಂದ ರಕ್ಷಿಸುವುದೇ ಕೃಷಿಕರಿಗೆ ಸವಾಲಾಗಿದೆ.

ಇನ್ನೂ ಕೆಲವು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಗಲಿನ ತಾಪಮಾನವೂ ದಿನದಿಂದ ದಿನಕ್ಕೆ ಏರುತ್ತಿದ್ದು, ಹವಾಮಾನ ಏರುಪೇರಾದರೆ ಎಲ್ಲ ವಿಧದ ಕೃಷಿಗೂ ಪ್ರತಿಕೂಲವಾಗಲಿದೆ.

Advertisement

ಕೈಗೆ ಬಂದ ತುತ್ತು… :

ಕೊಳೆ ರೋಗ, ಹಳದಿ ಎಲೆ ರೋಗ, ಕಾರ್ಮಿಕರ ಕೊರತೆ ಇತ್ಯಾದಿ ಸಮಸ್ಯೆಗಳಿಂದ ಕಂಗೆಟ್ಟಿರುವ ಅಡಿಕೆ ಬೆಳೆಗಾರರು ಹೇಗೋ ಏನೋ ಕೈಗೆ ಸಿಕ್ಕ ಫ‌ಸಲನ್ನು ಕೊಯಿದು ಅಂಗಳದಲ್ಲಿ ಹರವಿದ್ದರು. ಸಾಕಷ್ಟು ಬಿಸಿಲು ತಾಗಿ ಇನ್ನೇನು ಒಣಗಿರುವ ಅಡಿಕೆಯನ್ನು ಚೀಲದಲ್ಲಿ ತುಂಬಿ ದಾಸ್ತಾನು ಮಾಡಬೇಕು ಎನ್ನುವಷ್ಟರಲ್ಲಿ ಅಕಾಲಿಕ ಮಳೆ ಸಂಕಷ್ಟ ತಂದೊಡ್ಡಿದೆ. ಈ ಮಳೆ ಒಣಗುತ್ತಿರುವ ಅಡಿಕೆಗಷ್ಟೇ ಅಲ್ಲ; ಹಿಂಗಾರಕ್ಕೂ ಪ್ರತಿಕೂಲವಾಗುವ ಆತಂಕ ಕೃಷಿಕರದ್ದು. ಹಿಂಗಾರದಲ್ಲಿ ಮಳೆ ನೀರು ನಿಂತು ಬಿಸಿಲಿನಿಂದ ಉಷ್ಣಾಂಶ ಹೆಚ್ಚಾಗಿ ನಳ್ಳಿ (ಎಳೆ ಅಡಿಕೆ) ಉದುರುವ ಸಾಧ್ಯತೆಯ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಇತರ ಬೆಳೆಗೂ ಆತಂಕ :

ಪ್ರಸ್ತುತ ಮರಗಿಡಗಳು ಹೂವು ಬಿಡುವ ಸಮಯ. ಅಕಾಲಿಕ ಮಳೆಯಿಂದಾಗಿ ಬಿಟ್ಟಿರುವ ಹೂಗಳು ಹಗಲಿನ ಬಿಸಿಲಿನಲ್ಲಿ ಕರಟಿ ಹೋಗುತ್ತಿವೆ. ಗೇರು, ಮಾವು ಸೇರಿದಂತೆ ಇತರ ಬೆಳೆಗಳೂ ಹಾನಿಗೀಡಾಗುವ ಆತಂಕ ಎದುರಾಗಿದೆ.

ಅಕಾಲಿಕ ಮಳೆ ಕೃಷಿಕರಿಗೆ ಸಂಕಷ್ಟವನ್ನು ತಂದೊಡ್ಡುತ್ತಿದೆ. ಒಣಗಲು ಹಾಕಿದ ಅಡಿಕೆಯನ್ನು ರಾತೋರಾತ್ರಿ ಚೀಲಕ್ಕೆ ತುಂಬಿಸುವ ಪರಿಸ್ಥಿತಿ ಬಂದಿದೆ. ಒಟ್ಟಿನಲ್ಲಿ ಅಕಾಲಿಕ ಮಳೆ ಅಡಿಕೆ ಕೃಷಿಗೆ ಹಾಗೂ ಪ್ರಸ್ತುತ ಹೂ ಬಿಡುವ ಗಿಡ ಮರಗಳಿಗೂ ಹಾನಿಕಾರಕವಾಗಿದೆ. ಜಿನ್ನಪ್ಪ ಗೌಡ ಪಂಜ, ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next