Advertisement

ಕ್ಷೇತ್ರದ ಪ್ರದೇಶಗಳಿಗೆ ಬೇಕಿದೆ ಮೂಲಸೌಕರ್ಯ

01:47 PM Apr 04, 2018 | |

ಆನೇಕಲ್‌: ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ, ಅಂತಾರಾಷ್ಟ್ರೀಯ ಖ್ಯಾತಿಯ ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನವನ್ನು ಒಳಗೊಂಡಿರುವ ಆನೇಕಲ್‌ ಕ್ಷೇತ್ರವು ರಿಯಲ್‌ ಎಸ್ಟೇಟ್‌ ದೃಷ್ಟಿಯಿಂದ
ಅಭಿವೃದ್ಧಿಯಾಗಿದ್ದರೂ, ಇಂದಿಗೂ ಕ್ಷೇತ್ರದ ಹಲವಾರು ಪ್ರದೇಶಗಳಿಗೆ ಮೂಲ ಸೌಕರ್ಯಗಳು ಸಿಕ್ಕಿಲ್ಲ.

Advertisement

ಎಲೆಕ್ಟ್ರಾನಿಕ್‌ ಸಿಟಿ, ಬೊಮ್ಮಸಂದ್ರ, ಅತ್ತಿಬೆಲೆಯಂತಹ ಕೈಗಾರಿಕಾ ಪ್ರದೇಶಗಳ ಜತೆ ಜತೆಗೆ 21ಗ್ರಾಪಂಗಳನ್ನು ಹೊಂದಿರುವ ಆನೇಕಲ್‌ ಕ್ಷೇತ್ರದ ಒಂದು ಭಾಗಕ್ಕೆ ದಟ್ಟ ಅರಣ್ಯವಿದ್ದರೆ, ಮತ್ತೂಂದು ಭಾಗದಲ್ಲಿ ನೆರೆ ರಾಜ್ಯ ತಮಿಳು 
ನಾಡು ಗಡಿಯಿದೆ. ಕೈಗಾರಿಕಾ ಪ್ರದೇಶ ಗಳಿಂದ ಕ್ಷೇತ್ರದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ತೀವ್ರಗತಿಯಲ್ಲಿ ಬೆಳವಣಿಯಾಗುತ್ತಿದ್ದು, ಕೆಲವು ಕೆರೆ, ಕಾಲುವೆಗಳ ಜಾಗ ಒತ್ತುವರಿಯಾಗಿದೆ.

ಆನೇಕಲ್‌ ಕ್ಷೇತ್ರದ ಕೆಲವು ಭಾಗಗಳಿಗೆ ಕಾವೇರಿ ನೀರು ಪೂರೈಕೆಯಾಗುತ್ತಿದ್ದು, ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳು ಡಾಂಬರೀಕರಣ ಕಾಣದೆ ಗುಂಡಿಮಯವಾಗಿ, ಜನರು ಸಂಚಾರಕ್ಕೆ ತೊಂದರೆಯಾಗಿದೆ.

ಇದರೊಂದಿಗೆ ಕ್ಷೇತ್ರದಲ್ಲಿ ಹಲವಾರು ಸರ್ಕಾರಿ ಜಮೀನುಗಳು, ರಾಜಕಾಲುವೆಗಳು, ಕೆರೆ ಪ್ರದೇಶಗಳು ಒತ್ತುವರಿ ಮಾಡಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಸರ್ಕಾರಿ ಭೂಮಿ ಉಳಿಸುವ ಪ್ರಯತ್ನಕ್ಕೆ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ತೋರಿಲ್ಲ ಎಂಬ ಆರೋಪವೂ ಇದೆ. ಇವೆಲ್ಲದರ ನಡುವೆಯೂ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಚಾಲನೆ ಸಿಕ್ಕಿರುವುದು ಕ್ಷೇತ್ರದ ಜನರಲ್ಲಿ ನೆಮ್ಮದಿ ತಂದಿದೆ.

ರಾಜಕೀಯವಾಗಿ ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ಆನೇಕಲ್‌ನಲ್ಲಿ ಸತತ 18ವರ್ಷಗಳು ಶಾಸಕರಾಗಿದ್ದ ಬಿಜೆಪಿಯ ಎ.ನಾರಾಯಸ್ವಾಮಿ ಅವರನ್ನು 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಿವಣ್ಣ ಅವರು 50 
ಸಾವಿರ ಮತಗಳಿಂದ ಪರಾಭವಗೊಳಿಸಿದ್ದರು.

Advertisement

ಇದೀಗ ಮತ್ತೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆನೇಕಲ್‌ ಕ್ಷೇತ್ರದಲ್ಲಿ ಒಟ್ಟು 4 ಪುರಸಭೆಗಳು, 1 ನಗರಸಭೆ ಹಾಗೂ 21 ಗ್ರಾಮ ಪಂಚಾಯಿತಿ ಗಳನ್ನು ಹಾಗೂ ಬಿಬಿಎಂಪಿಯ ಕೆಲ ಪ್ರದೇಶಗಳನ್ನೂ ಹೊಂದಿದೆ. ಆನೇಕಲ್‌ ಮೀಸಲು ಕ್ಷೇತ್ರವಾಗಿ ದಲಿತ ಸಮುದಾಯದ ಮತಗಳು ಹೆಚ್ಚಿನ ಸಂಖೆಯಲ್ಲಿದ್ದರೂ ರೆಡ್ಡಿ ಹಾಗೂ ಒಕ್ಕಲಿಗ ಸಮುದಾಯ ಇಲ್ಲಿ ನಿರ್ಣಾಯಕವಾಗಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ?
ಸರ್ಕಾರಿ ಶಾಲೆಗಳು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಕೆಲವು ಕಡೆಗಳಲ್ಲಿ ಶಾಲಾ ಕಟ್ಟಡಗಳು ಶಿಥಿಲಗೊಂಡು ಆತಂಕ ಮೂಡಿಸಿವೆ. ಕೈಗಾರಿಕಾ ಪ್ರದೇಶಗಳಿಗೆ ಸಮರ್ಪಕವಾದ ಮೂಲಸೌಕರ್ಯಗಳು ಲಭಿಸಿಲ್ಲ. ಜತೆಗೆ ಕೈಗಾರಿಕಾ ಪ್ರದೇಶಗಳಲ್ಲಿನ ಕಂಪನಿಗಳಲ್ಲಿ ಸ್ಥಳೀಯರಿಗೆ ಆದ್ಯತೆ ಸಿಕ್ಕಿಲ್ಲ ಎಂಬ ದೂರಿದೆ. ವಸತಿ ವಂಚಿತರಿಗೆ ಮನೆ ಅಥವಾ ನಿವೇಶನ ಹಂಚಿಕೆ, ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ, ಅಂತರ್ಜಲ ವೃದ್ಧಿಗೆ ಹೆಚ್ಚಿನ ಮಹತ್ವ ದೊರಕಿಲ್ಲ.

ಕ್ಷೇತ್ರದ ಬೆಸ್ಟ್‌ ಏನು?
ಆನೇಕಲ್‌ ಕೆರೆಗಳಿಗೆ ನೀರು ತುಂಬುವ ಏತ ನೀರಾವರಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಆನೇಕಲ್‌ , ಚಂದಾಪುರ ಸೂರ್ಯ ಸಿಟಿ, ಹೆಬ್ಬಗೋಡಿಯ ಹಲವಾರು ಭಾಗಗಳಿಗೆ ಕಾವೇರಿ ನೀರು ಹರಿಸಲಾಗುತ್ತಿದೆ. ಇನ್ನು ಕ್ಷೇತ್ರದ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದ್ದು, ನೀರಿನ ಸಮಸ್ಯೆಯಿರುವ ಕಡೆಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಇದರೊಂದಿಗೆ ಅಂಬೇಡ್ಕರ್‌ ಮೈದಾನ ಹಾಗೂ ಭವನ ನಿರ್ಮಿಸಲಾಗಿದ್ದು, ಕ್ಷೇತ್ರದಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಶಾಸಕರು ಏನಂತಾರೆ?
ಈ ಹಿಂದೆ ಆಡಳಿತದಲ್ಲಿದ್ದವರು ಕ್ಷೇತ್ರವನ್ನು ಪಾಳು ಬೀಳುವಂತೆ ಮಾಡಿದ್ದರು. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರ ಅಭಿವೃದ್ದಿಗೆ ದುಡಿದಿದ್ದು, ಸರ್ಕಾರದ ಕಾರ್ಯಕ್ರಮ ಜನರಿಗೆ ತಲುಪಿಸಲು ಪ್ರಯತ್ನ ಮಾಡಿದ್ದು, ಜನರು ಕೈಬಿಡುವುದಿಲ್ಲ.
ಬಿ.ಶಿವಣ್ಣ 

ಕ್ಷೇತ್ರ ಮಹಿಮೆ
ತಮಿಳುನಾಡು ಗಡಿ ಭಾಗದಲ್ಲಿರುವುದರಿಂದ ಹೊಸೂರು, ಧರ್ಮಪುರಿ ಕಡೆಯಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರು ನೆಲೆಸಿರುವುದು ಆನೇಕಲ್‌ನಲ್ಲಿ. ಬೆಂಗಳೂರು ನಗರಕ್ಕೆ ತರಕಾರಿ, ಹಣ್ಣು, ಹೂವು ಸಹ ಆನೇಕಲ್‌ನ ಕೆಲವು ಭಾಗಗಳಿಂದ ಪೂರೈಕೆಯಾಗುತ್ತದೆ.

ಶಾಸಕರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಇನ್ನು ಕ್ಷೇತ್ರದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ. ರಾಜಕಾಲುವೆ, ಒತ್ತುವರಿ ಮಾಡುತ್ತಿದ್ದರೂ, ತಡೆಗೆ ಯಾರು ಮುಂದಾಗಿಲ್ಲ. 
ಪುರುಷೋತ್ತಮ್‌ ಆನೇಕಲ್‌

ಹಲವಾರು ವಸತಿ ವಂಚಿತರು ಇಂದಿಗೂ ಭೂಮಿಗಾಗಿ ಹೋರಾಡುತ್ತಿದ್ದಾರೆ. ಆದರೆ, ಅವರಿಗೆ ನಿವೇಶನ ಅಥವಾ ಮನೆ ಕೊಡಿಸುವ ಕಾರ್ಯವಾಗಿಲ್ಲ. ಅಂತರ್ಜಲ ಅಭಿವೃದ್ಧಿ, ಉದ್ಯಾನ ಸಂರಕ್ಷಣೆಗೆ ಆದ್ಯತೆ ಸಿಕ್ಕಿಲ್ಲ. 
 ಮುರಳಿಮೋಹನ್‌ ಕಾಟಿ

ಕ್ಷೇತ್ರದ ಬಹುಪಾಲು ಅಭಿವೃದ್ಧಿಯಾಗಿದ್ದು, ಕ್ಷೇತ್ರದಲ್ಲಿನ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಮೂಲಕ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕಿದೆ. ಪರಿಸರ ಸಂರಕ್ಷಣೆಗೂ ಹೆಚ್ಚು ಆದ್ಯತೆ ನೀಡಬೇಕಿದೆ. 
ಪಾಂಡುರಂಗ

ಹಲವಾರು ರಸ್ತೆಗಳಿಗೆ ಡಾಂಬರೀಕರಣ ಮಾಡಿದ ಕೆಲವೇ ದಿನಗಳಲ್ಲಿ ಕಿತ್ತು ಬಂದಿವೆ. ಇಂತಹ ಕಾಮಗಾರಿಗಳಿಂದ ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆಯೇ ಹೊರತು, ಸಾರ್ವಜನಿಕರಿಗಲ್ಲ. 
ಮಹೇಶ್‌ ಕುಮಾರ್‌ ಯಾದವ್‌

ಸುನೀಲ್‌ /ಎನ್‌.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next