ನವದೆಹಲಿ: ಕೋವಿಡ್ 19 ಸೋಂಕು ಮತ್ತು ಒಮಿಕ್ರಾನ್ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕೆಂದು ಕಾಂಗ್ರೆಸ್ ಮುಖಂಡರೊಬ್ಬರು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಲು ಅಸಾಧ್ಯ ಎಂದು ದೆಹಲಿ ಹೈಕೋರ್ಟ್ ಸೋಮವಾರ (ಜನರಿ31) ತಿಳಿಸಿದೆ.
ಇದನ್ನೂ ಓದಿ:ಎಐಎಡಿಎಂಕೆಯೊಂದಿಗೆ ರಾಷ್ಟ್ರ ಮಟ್ಟದ ಮೈತ್ರಿ ಮುಂದುವರಿಯಲಿದೆ : ಅಣ್ಣಾಮಲೈ
ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಕೆಲವು ವಾರಗಳು ಅಥವಾ ತಿಂಗಳ ಕಾಲ ಚುನಾವಣೆ ಮುಂದೂಡಬೇಕೆಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಜಗದೀಶ್ ಶರ್ಮಾ ದಾಖಲಿಸಿರುವ ಪಿಐಎಲ್ ಕ್ಲುಲ್ಲಕವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ದೇಶದಲ್ಲಿ ಕೋವಿಡ್ 19 ಪ್ರಕರಣಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಅರ್ಜಿದಾರ, ಕಾಂಗ್ರೆಸ್ ಮುಖಂಡ ಜಗದೀಶ್ ಶರ್ಮಾ ಮಂಗಳ ಗ್ರಹದಲ್ಲಿ ವಾಸಿಸುತ್ತಿದ್ದಾರೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಪಿಐಎಲ್ ಬಗ್ಗೆ ಅಸಮಧಾನವ್ಯಕ್ತಪಡಿಸಿರುವ ಹೈಕೋರ್ಟ್ ಪೀಠದ ಜಸ್ಟೀಸ್ ವಿಪಿನ್ ಸಾಂಘ್ವಿ ಮತ್ತು ಜಸ್ಮೀತ್ ಸಿಂಗ್, ಇದೊಂದು ಕ್ಷುಲ್ಲಕ ಅರ್ಜಿಯಾಗಿದೆ. ನೀವೇನು (ಅರ್ಜಿದಾರ) ಮಂಗಳ ಗ್ರಹದಲ್ಲಿ ವಾಸವಾಗಿದ್ದೀರಾ? ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ, ನೀವು ಈ ಅರ್ಜಿಯನ್ನು ಹಿಂಪಡೆಯಬೇಕು ಅಥವಾ ನಾವು ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಬೇಕೋ ಎಂಬುದಾಗಿ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆದಿರುವುದಾಗಿ ವರದಿ ತಿಳಿಸಿದೆ.
ಉತ್ತರಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ಫೆಬ್ರುವರಿ 17ರಿಂದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 7ರಂದು ಮುಕ್ತಾಯಗೊಳ್ಳಲಿದೆ. ಮಾರ್ಚ್ 10ರಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಹಿರಂಗವಾಗಲಿದೆ.