Advertisement

ಎಡಗೈ ಗುಡ್ಡದ ಮೇಲೆ!

07:15 AM Dec 26, 2017 | Harsha Rao |

ಜಗತ್ತಿನಲ್ಲಿರುವ ಶೇ.10 ಎಡಗೈ ಮಂದಿಯನ್ನು ನಂಬಿಕೊಂಡು ಯಾವ ಉತ್ಪನ್ನವೂ ಮಾರುಕಟ್ಟೆಗೆ ಬರುವುದಿಲ್ಲ. ಬಲಗೈ ಮಂದಿ ಬಳಸುವ ವಸ್ತುಗಳಿಗೆ ಇವರು ಅನುಸರಿಸಿಕೊಂಡು ಹೋಗುವುದು ಅನಿವಾರ್ಯ. ಆದರೆ, ಇಲ್ಲೊಬ್ಬಳು ಎಡಚರ ಪುಟಾಣಿಯ ತಾಯಿ, ಹಾಗೆ ಯೋಚಿಸಲೇ ಇಲ್ಲ…

Advertisement

ನಾಲಕ್ಕು ವರುಷದ ಆ ಪುಟ್ಟಿಯ ಗಲ್ಲ ಅರಳಿತ್ತು. ಪ್ರಧಾನಿ ನರೇಂದ್ರ ಮೋದಿ, ಎಡಗೈಯನ್ನು ಮೇಲೆತ್ತಿ ವಿಜಯದ ಚಿಹ್ನೆ ತೋರಿಸುತ್ತಿದ್ದಾಗ, ಈಕೆ ಟಿವಿ ಕಡೆಗೆ ಕೈತೋರಿಸುತ್ತಾ, “ಅಮ್ಮಾ… ಮೋದಿನೂ ನನ್ನಂತೆ ಲೆಫ‌ುr’ ಎನ್ನುತ್ತಿದ್ದಳು. “ಹೌದು ಪುಟ್ಟಾ… ಅವೂÅ ಲೆಫ್ಟಿà’ ಎನ್ನುವಾಗ ತಾಯಿ ಶ್ವೇತಾ ಸಿಂಗ್‌ ತಲೆಯಲ್ಲಿ ಹಿಂದಿನ ಕೆಲವು ದೃಶ್ಯಗಳು ಜೀಕುತ್ತಿದ್ದವು. ಮೋದಿ ಎಡಗೈಯನ್ನೇ ಪ್ರಧಾನವಾಗಿ ಬಳಸಿದ ಕ್ಷಣಗಳ ಪುಟ್ಟ ಚಲನಚಿತ್ರ ಅದು. ಮಂಗಳಯಾನ ಕಕ್ಷೆ ಸೇರಿದಾಗ, ಬಲಗೈ ಮೇಲೆ ಎಡಗೈಯಿಟ್ಟು ಚಪ್ಪಾಳೆ ತಟ್ಟಿದ್ದ ಮೋದಿ; ಹೈದರಾಬಾದ್‌ ಹೌಸ್‌ನಲ್ಲಿ ಬರಾಕ್‌ ಒಬಾಮ ಜತೆಗೆ ಎಡಗೈಯಲ್ಲಿ ಚಹಾ ಕಪ್‌ ಹಿಡಿದಿದ್ದ ಮೋದಿ; ರಾಜ್‌ಕೋಟ್‌ನಲ್ಲಿ ಕ್ರಿಕೆಟ್‌ ಪಂದ್ಯ ಉದ್ಘಾಟಿಸುವಾಗ, ಲೆಫ್ಟ್ ಹ್ಯಾಂಡ್‌ ಬ್ಯಾಟಿಂಗ್‌ ಮಾಡಿದ್ದ ಮೋದಿ; ಅಂದ್ಯಾವತ್ತೋ ಸಲ್ಮಾನ್‌ಖಾನ್‌ ಜತೆ ಸಂಕ್ರಾಂತಿಯ ಗಾಳಿಪಟ ಹಾರಿಸುವಾಗ, ಎಡಗೈ ಮುಂದೆ ಮಾಡಿಯೇ, ಬಣ್ಣದ ಪಟಗಳನ್ನು ಆಕಾಶಕ್ಕೆ ತೇಲಿಸಿದ್ದ ಮೋದಿ… ಹೀಗೆ ಎಡಗೈನಲ್ಲೇ “ಥಮ್ಸ್‌ಅಪ್‌’ ಹೇಳಿದ ಮೋದಿಯವರು ಕಣ್ಮುಂದೆ ಬಂದಹಾಗಾಯ್ತು.

ನಾಲ್ಕು ವರ್ಷದ ಪುಟಾಣಿಗೆ ಈ “ಎಡ’ ದೃಶ್ಯಗಳನ್ನೆಲ್ಲ ವಿವರಿಸಿದರೆ, ಅರ್ಥವಾಗುವುದಿಲ್ಲ ಎಂದು ಸುಮ್ಮನಾದರು ಶ್ವೇತಾ. ಆದರೆ, ಅವರ ಆಲೋಚನೆ ಮುಗಿಯುವ ಮುನ್ನ, ಮಗಳ ಮುಖ ಬಾಡಿಹೋಗಿತ್ತು. ಮುಂಚೆ ಮೂಡಿದ್ದ ನಗು ಕ್ಷಣದಲ್ಲೇ ಆವಿಯಾಗಿತ್ತು. “ಯಾಕೆ ಪುಟ್ಟಾ?’, ಮಗಳ ತಲೆ ನೇವರಿಸಿ, ಕೇಳಿದರು ಶ್ವೇತಾ. 

“ಇಲ್ಲಮ್ಮಾ… ನನ್ನೆಲ್ಲ ಗೆಳತಿಯರು ಪೆನ್ಸಿಲ್‌ ಶಾರ್ಪನರ್‌ ಅನ್ನು ಎಷ್ಟು ಸುಲಭವಾಗಿ, ಎಷ್ಟೊಂದು ವೇಗದಲ್ಲಿ ಬಳಸುತ್ತಾರೆ. ಆದರೆ, ಅದು ನನ್ನಿಂದ ಸಾಧ್ಯವಿಲ್ಲ’ ಎಂದು ಅದೇ ಎಡಗೈಯಿಂದ ಥಮ್ಸ್‌ ಡೌನ್‌ ಮಾಡಿ, ಅಸಹಾಯಕತೆ ಹರವಿಟ್ಟಳು ಮಗಳು!

ಆ ಪುಟ್ಟ ಕಂದಮ್ಮನ ದುಃಖಕ್ಕೆ ಕಿವಿಗೊಟ್ಟ ತಾಯಿ ಶ್ವೇತಾ, ಸುಮ್ಮನೆ ಕೂರಲಿಲ್ಲ. ಅಥವಾ ಆ ದೂರನ್ನು ಪ್ರಧಾನಿಯ ತನಕವೂ ಮುಟ್ಟಿಸಲಿಲ್ಲ. ಅಪ್ಸರಾ ಮತ್ತು ನಟರಾಜ್‌ ಪೆನ್ಸಿಲ್‌ ಉತ್ಪಾದಿಸುವ, “ಹಿಂದೂಸ್ತಾನ್‌ ಪೆನ್ಸಿಲ್ಸ್‌ ಪ್ರೈವೇಟ್‌ ಲಿ.’ಗೆ ಒಂದು ಮೇಲ್‌ ಹಾಕಿದರು ಶ್ವೇತಾ. ಅದರ ಚುಟುಕು ಸಾರಾಂಶ ಹೀಗಿತ್ತು;

Advertisement

“”ನಾನು 4 ವರ್ಷದ ಮಗಳ ತಾಯಿ. ನನ್ನ ಮಗಳು ಓದುವುದರಲ್ಲಿ ಜಾಣೆ. ಬರೆಯಲು ಎಡಗೈಯನ್ನು ಬಳಸುವಳು. ಆಕೆಯದ್ದು ಎಡಗೈ ಎನ್ನುವುದು ದೊಡ್ಡ ಸಮಸ್ಯೆಯೇ ಅಲ್ಲ. ಆದರೆ, ನನ್ನ ಮಗಳು ಈ ಜಗತ್ತಿನಲ್ಲಿ ಬಲಗೈ ಮಂದಿಗಾಗಿಯೇ ಉತ್ಪಾದಿಸಿರುವ ವಸ್ತುಗಳೊಂದಿಗೆ ಒಂದು ತಿಕ್ಕಾಟ ಅನುಭವಿಸುತ್ತಿದ್ದಾಳೆ. ಅದರಲ್ಲಿ ನಿಮ್ಮ ಪೆನ್ಸಿಲ್‌ ಶಾರ್ಪನರ್‌ ಕೂಡ ಒಂದು. ಬೇರೆಲ್ಲ ಮಕ್ಕಳು ಅತಿ ಸುಲಭವಾಗಿ ಶಾರ್ಪನರ್‌ನಲ್ಲಿ ಪೆನ್ಸಿಲ್‌ ಅನ್ನು ಹರಿತಗೊಳಿಸುತ್ತಾರೆ. ಆದರೆ, ಮಾರುಕಟ್ಟೆಯಲ್ಲಿರುವ ಶಾರ್ಪನರ್‌ ಅನ್ನು ವಿಶೇಷವಾಗಿ ಬಲಗೈ ಮಂದಿಗಾಗಿಯೇ ರೂಪಿಸುವುದರಿಂದ, ನನ್ನ ಮಗಳಂಥ ಸಹಸ್ರಾರು ಎಡಗೈ ಪುಟಾಣಿಗಳಿಗೆ ಇದನ್ನು ಬಳಸುವುದು ಬಹಳ ಕಷ್ಟವಾಗುತ್ತಿದೆ. ಅವರಿಗೆಲ್ಲ ಇದೊಂದು ಹೇಳಲಾಗದಂಥ ಮಾನಸಿಕ ಹಿಂಸೆ”.

ಹೀಗೆ ಮೇಲ್‌ ಹಾಕಿದ ಕೆಲವೇ ದಿನಗಳಲ್ಲಿ “ಹಿಂದೂಸ್ತಾನ್‌ ಪೆನ್ಸಿಲ್ಸ್‌’ನಿಂದ ಪ್ರತ್ಯುತ್ತರ ಬಂತು. ಅಂಚೆಯಣ್ಣ ಶ್ವೇತಾ ಅವರ ಮನೆಗೆ ಒಂದು ಪಾರ್ಸೆಲ್‌ ತಂದಿಟ್ಟಿದ್ದ. ಅದರಲ್ಲಿ ವಿಶೇಷವಾಗಿ ಎಡಗೈ ಪುಟಾಣಿಗಾಗಿಯೇ ರೂಪಿಸಿದ ಮೂರು ಶಾರ್ಪನರ್‌ಗಳಿದ್ದವು! “”ಈ ಶಾರ್ಪನರ್‌ ಅನ್ನು ಎಡಚರರಿಗಾಗಿಯೇ ರೂಪಿಸಿದ್ದೇವೆ. ನಿಮ್ಮ ಮಗಳು, ಆಕೆಗಿಷ್ಟದ ನಟರಾಜ- ಅಪ್ಸರಾ ಪೆನ್ಸಿಲ್‌ ಅನ್ನು ಈ ಶಾರ್ಪನರ್‌ನಲ್ಲಿಯೇ ನುಣುಪು ಮಾಡಿ, ಖುಷಿಪಡುವಳೆಂದು ನಂಬಿದ್ದೇವೆ. ಎಡಚರರಿಗಾಗಿಯೇ ರೂಪಿಸಿದ ಈ ಶಾರ್ಪನರ್‌ಗಳನ್ನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡುತ್ತೇವೆ” ಎಂಬ ವಿವರ ಆ ಪತ್ರದಲ್ಲಿತ್ತು.

– – –
ಅವರು ಎಡಚರರು. ಅವರಿಗೆ ಎಡಗೈಯೇ ಮೇಲೆ ಅಥವಾ ಅವರಿಗೆ ಅದೇ ಬಲ! ವಿಶ್ವದಲ್ಲಿ ಶೇ.10ರಷ್ಟು ಜನ ಮಾತ್ರ ಎಡಗೈಯನ್ನು ಬಳಸುತ್ತಾರೆಂದು ಕೇಳಿದ್ದೇವೆ. ಬ್ರಿಯಾನ್‌ ಲಾರಾರಿಂದ ಸೌರವ್‌ ಗಂಗೂಲಿ, ಗೌತಮ್‌ ಗಂಭೀರ್‌ ವರೆಗೆ ಕ್ರಿಕೆಟಿನಲ್ಲಿ ಎಡಗೈ ಆಟಗಾರ ಕಮಾಲ್‌ ನೋಡಿದ್ದೇವೆ. ಬಲಗೈಯಲ್ಲಿ ಬ್ಯಾಟ್‌ ಬೀಸಿ, ಎಡಗೈಯಲ್ಲಿ ಸಹಿ ಹಾಕುವ ಸಚಿನ್‌ರನ್ನೂ ಮೆಚ್ಚಿದ್ದೇವೆ. ಅಮಿತಾಭ್‌ ಬಚ್ಚನ್‌, ಡಾ. ವಿಷ್ಣುವರ್ಧನ್‌ರವರು ಪರದೆ ಮೇಲೆ ಕೊಡುವ ಎಡಗೈ ಪಂಚ್‌ಗಳಿಗೂ ಶಿಳ್ಳೆ ಹೊಡೆದಿದ್ದೇವೆ. ಗಾಂಧೀಜಿ ಕೋಲು ಹಿಡಿದಿದ್ದೂ ಅದೇ ಎಡಗೈಯಲ್ಲೇ, ಕೋಟಿ ಕೋಟಿ ರೂ. ವಹಿವಾಟುಗಳಿಗೆ ರತನ್‌ ಟಾಟಾ ಸಹಿಹಾಕಿದ್ದೂ ಅದೇ ಎಡಗೈನಲ್ಲಿಯೇ. ಇವೆಲ್ಲ ಲೆಕ್ಕ ಒಪ್ಪಿಸುವಾಗ, ಐನ್‌ಸ್ಟಿàನ್‌, ನ್ಯೂಟನ್‌, ಅರಿಸ್ಟಾಟಲ್‌ ಕೂಡ ಬಂದುಹೋಗುತ್ತಾರೆ. ಈ ಎಡಗೈ ಮಂದಿ ಬಹಳ ಚಾಣಾಕ್ಷರು, ಅಪ್ರತಿಮರು ಅಂತೆಲ್ಲ ಸರ್ವೆಗಳು ಆಗಾಗ್ಗೆ ನಮ್ಮ ಮೆದುಳ ಬೇಲಿಯನ್ನು ಜಿಗಿದಾಗ, “ಹೌದಲ್ವೆ!’ ಎಂಬ ತೀರ್ಪು ನಮ್ಮೊಳಗೂ ಹುಟ್ಟುತ್ತದೆ.

ಆದರೆ, ಇವರೆಲ್ಲ ಎಷ್ಟೇ ದೊಡ್ಡವರಿರಲಿ, ಎಡಗೈ ಜಗತ್ತೇ ಸಣ್ಣದು ಎನ್ನುವ ನಿರ್ಲಕ್ಷ್ಯ ಮಾತ್ರ ಜೀವಂತ ಇದ್ದೇ ಇದೆ. ಜಗತ್ತಿನಲ್ಲಿರುವ ಶೇ.10 ಮಂದಿ ಎಡಚರರನ್ನು ನಂಬಿಕೊಂಡು ಯಾವ ಉತ್ಪನ್ನವೂ ಮಾರುಕಟ್ಟೆಗೆ ಬರುವುದಿಲ್ಲ ಎನ್ನುವ ಅಂಶದಲ್ಲೇ ಅದು ವ್ಯಕ್ತವಾಗುತ್ತದೆ. ಬಲಗೈ ಮಂದಿ ಬಳಸುವ ವಸ್ತುಗಳಿಗೆ ಇವರು ಅನುಸರಿಸಿಕೊಂಡು ಹೋಗುವುದು ಅನಿವಾರ್ಯ. ಹಾಗಿದ್ದರೆ, ಅವರೆಲ್ಲ ಎಡಚರರಾಗಿದ್ದೇ ತಪ್ಪೇ ಎಂಬ ಪ್ರಶ್ನೆಯೂ ಇದರೊಂದಿಗೆ ಹುಟ್ಟುತ್ತದೆ.

ನಮ್ಮ ದೇಹದಲ್ಲಿ ಅಂಗಾಂಗಗಳು ಕಾರ್ಯನಿರ್ವಹಿಸುವುದು ಮೆದುಳಿನ ಸೂಚನೆಯಂತೆಯೇ. ಮಗು ಹುಟ್ಟುವುದಕ್ಕೂ ಮುನ್ನ ಕೆಲವೊಮ್ಮೆ ಅದರ ಶರೀರದಲ್ಲಿ ಟೆಸ್ಟೋಸ್ಟಿರಾನ್‌ ಹಾರ್ಮೋನ್‌ನಲ್ಲಿ ಏರುಪೇರಾದಾಗ, ಮೆದುಳು ಎಡಬದಿಯ ಅಂಗಗಳಿಗೆ ಆದ್ಯತೆ ನೀಡುತ್ತಾ ಹೋಗುವುದರಿಂದ ಮಗು ಎಡಚರವಾಗುತ್ತದೆ ಎಂದು ವೈದ್ಯರೇನೋ ವಿಶ್ಲೇಷಿಸುತ್ತಾರೆ. ಬಳಿಕ ಅದೇ ಮಗು ದೊಡ್ಡದಾಗಿ, ತಾನು ಅನುಭವಿಸುವ “ಎಡಚರ ಕಿರಿಕಿರಿ’ಗೆ ಕಿವಿಗೊಡುವ ಮನಸ್ಸುಗಳು ಬಹಳ ಕಡಿಮೆ.

ಮಕ್ಕಳಿಗೆ ಆ ಕಿರಿಕಿರಿ ಆರಂಭದಲ್ಲಿ ಸ್ಪೈರಲ್‌ ಬೈಂಡಿಂಗ್‌ ನೋಟ್‌ಬುಕ್‌ನಿಂದಲೇ ಅನುಭವಕ್ಕೆ ಬರುತ್ತದೆ. ಎಡಗೈಯಿಂದ ಏನೇ ಬರೆಯಲು ಹೋದರೂ, ಬೈಂಡರ್‌ ರಿಂಗ್‌ ಮೇಲೆ ಕೈಇಟ್ಟುಕೊಳ್ಳುವಾಗ ಅಡಚಣೆ ಅನುಭವಕ್ಕೆ ಬರುತ್ತದೆ. ಇನ್ನು ಎಡಚರರು ಅಕೌಂಟೆಂಟ್‌ ಆದರಂತೂ ಮುಗಿದೇ ಹೋಯಿತು. ಬಲಚರರಂತೆ ಸಲೀಸಾಗಿ ನಂಬರುಗಳನ್ನು ಟೈಪಿಸಲು ಅವರಿಗೆ ಆಗುವುದೇ ಇಲ್ಲ. ಏಕೆಂದರೆ, ಕಂಪ್ಯೂಟರ್‌ ಕೀಲಿಮಣೆಗಳಲ್ಲಿ ಅಂಕಿಸಂಖ್ಯೆಗಳಿರುವುದೇ ಬಲಭಾಗದಲ್ಲಿ!
ಎಡಚರರಿಗೆ ಎಡಗೈಯಿಂದ ಸಲೀಸಾಗಿ ಕತ್ತರಿ ಹಿಡಿಯಲು ಆಗುವುದಿಲ್ಲ. ಕುರ್ಚಿಯ ಡೆಸ್ಕ್ಗಳು ಯಾವತ್ತೂ ಇವರಿಗೆ ಪೂರಕ ಆಗಿರುವುದಿಲ್ಲ. ಅಳತೆ ಮಾಡುವ ಟೇಪ್‌ಗ್ಳು ಕೂಡ ಬಲಚರರ ಸ್ನೇಹಿಯೇ. ಕಂಪ್ಯೂಟರ್‌ ಮೌಸ್‌ ಕೂಡ “ಬಲಪಂಥೀಯ’ವಾಗಿಯೇ ಇರುತ್ತೆ. ನಲ್ಲಿಗಳನ್ನು ತಿರುಗಿಸುವಾಗಲೂ ಮಣಿಕಟ್ಟು ಪ್ರಯಾಸಪಟ್ಟುಕೊಳ್ಳುತ್ತದೆ. ಕಾರಿನ ಮಿರರ್‌ ಸರಿಮಾಡುವಾಗಲೂ ಕೊಂಚ ಬ್ರೇಕ್‌ ಒತ್ತುವುದು ಅನಿವಾರ್ಯವೇ ಆಗಿರುತ್ತದೆ.

ಆದರೆ, ಈ ಎಡಚರರ ಸಂಯಮ ದೊಡ್ಡದು. ಅವರು ಪಡುವ ಈ ಪ್ರಯಾಸಗಳೆಲ್ಲ ಪುಟ್ಟವು. ಏನೋ ದೊಡ್ಡ ಕ್ರಾಂತಿಗೆ ಕಾರಣವಾದುದ್ದಲ್ಲ ಎನ್ನುವ ಸಂಗತಿಯನ್ನು ಬಹುಶಃ ಎಡಚರರೇ ನಿರ್ಧರಿಸಿ ಸುಮ್ಮನಿರಲೂಬಹುದು. ಹಾಗಾಗಿ, ಯಾರೂ ಶ್ವೇತಾ ಅವರಂತೆ ಆ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲವೋ, ಗೊತ್ತಿಲ್ಲ.
– – –
ಎಡಗೈ ಮಂದಿಗೆ ಏನೇನು ಟ್ರಬಲ್‌?
– ಪೆನ್ಸಿಲ್‌ ಶಾರ್ಪನರ್‌
– ಸ್ಪೈರಲ್‌ ಬೈಂಡಿಂಗ್‌
– ಕೀ ಬೋರ್ಡಿನ ನಂಬರ್
– ಕಾರಿನ ಮಿರರ್‌
– ಕತ್ತರಿ
– ನಲ್ಲಿ/ ಮುಚ್ಚಳ
– ಕುರ್ಚಿಯ ಡೆಸ್ಕ್ಗಳು

– ಸುಮೇಧ ಎಂ. ಎಸ್‌

Advertisement

Udayavani is now on Telegram. Click here to join our channel and stay updated with the latest news.

Next