ಹುಬ್ಬಳ್ಳಿ: ಲಾಕ್‌ಡೌನ್‌ನಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್‌ಗಳಿಂದ ಹಣ ಪಡೆಯಲು ಇಂತಿಷ್ಟೇ ಎಂದು ನಿಗದಿ ಪಡಿಸಿರುವುದು ಸಮಸ್ಯೆ ಉಂಟು ಮಾಡುತ್ತಿದೆ ಎಂಬುದು ಅನೇಕ ಗ್ರಾಮೀಣ ಗ್ರಾಹಕರ ಅನಿಸಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಎಸ್‌ಬಿಐ, ಕರ್ನಾಟಕ ಬ್ಯಾಂಕ್, ಮಲಪ್ರಭಾ ಗ್ರಾಮೀಣ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲೆಡೆ ಹಣದ ಸಮಸ್ಯೆ ಎದುರಾಗಿದೆ. ಯಾವ ಬ್ಯಾಂಕ್ ಶಾಖೆಗೆ ಹೋದರೂ ಹಣ ಇಲ್ಲದಿರುವ ಮಾತುಗಳು ಕೇಳಿ ಬರುತ್ತಿವೆ.
ಪ್ರತಿದಿನ ಐದು ಸಾವಿರ ರೂ.ಗಳಿಗಿಂತ ಹೆಚ್ಚಿನ ಹಣ ವಹಿವಾಟ ನಡೆಸಲು ಬಿಡುತ್ತಿಲ್ಲ. ತಮ್ಮ ಖಾತೆಯಿಂದ ಹಣ ಎಷ್ಟೇ ಇದ್ದರೂ ಕೂಡಾ ಗ್ರಾಹಕರ ಕೈಗೆ ಸಿಗುತ್ತಿರುವುದು ಮಾತ್ರ ಕೇವಲ ಐದು ಸಾವಿರ ರೂ., ಗಳು ಮಾತ್ರ. ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಕಲಘಟಗಿ ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಬ್ಯಾಂಕ್‌ಗಳ ಸ್ಥಿತಿ ಇದೇ ಆಗಿದೆ.
ಚೆಕ್ ನೀಡಿದರೆ ಹೆಚ್ಚು ಹಣ: ಬ್ಯಾಂಕ್‌ನಲ್ಲಿ ನೇರ ಹಣ ತೆಗೆದುಕೊಳ್ಳಲು ಹೋದರೆ ಕೇವಲ ಐದು ಸಾವಿರ ರೂ.ಗಳನ್ನು ನೀಡುತ್ತಾರೆ. ಆದರೆ ಅದೇ ಚೆಕ್ ತೆಗೆದುಕೊಂಡು ಹೋದರೆ ಹೆಚ್ಚು ಹಣ ಸಿಗುತ್ತಿದೆ. ಚೆಕ್ ಒಯ್ದರೆ ನೀಡುತ್ತಿದ್ದು, ನೇರವಾಗಿ ತೆಗೆಯಲು ಹೋದರೆ ಯಾಕೆ ನೀಡುತ್ತಿಲ್ಲ ಎಂಬುದು ಅನೇಕರ ಪ್ರಶ್ನೆ. ಗ್ರಾಮೀಣ ಭಾಗದ ಎಲ್ಲ ಬ್ಯಾಂಕ್‌ಗಳ ಮುಂದೆ ಗ್ರಾಹಕರ ಸರದಿ ಹೇಳತಿರದಾಗಿದೆ. ಇದೀಗ ಸರಕಾರದಿಂದ ಜನ್‌ಧನ ಖಾತೆಗೆ ಹಣ ಸಹ ಜಮಾವಣೆ ಮಾಡಲಾಗಿದ್ದು, ಅದನ್ನು ತೆಗೆದುಕೊಳ್ಳಲು ಆಗಮಿಸುವ ಗ್ರಾಹಕರು ಸುಮಾರು ಹೊತ್ತು ಬ್ಯಾಂಕಿನ್ ಸರದಿಯಲ್ಲಿ ನಿಂತುಕೊಂಡು ಹಣ ತೆಗೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಸರಕಾರ ಜನ್‌ಧನ್ ಖಾತೆಗೆ ಹಾಕಿರುವ 500 ರೂ.ಗಳ ತೆಗೆಸಿಕೊಳ್ಳಲು ಮಹಿಳೆಯರು ಬೆಳಗಿನಿಂದಲೇ ಸರದಿಯಲ್ಲಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಒಂದೆಡೆ ಬ್ಯಾಂಕ್ ಅಧಿಕಾರಿಗಳು ನಿಮ್ಮ ಹಣ ಎಲ್ಲಿಯೂ ಹೋಗಲ್ಲ, ಇಂದಿಲ್ಲ ನಾಳೆ ಬಂದು ತೆಗೆಸಿಕೊಳ್ಳಿ ಎಂದು ಹೇಳುತ್ತಿದ್ದರೂ ಕೇಳದ ಗ್ರಾಹಕರು ಇಂದೇ ಹಣ ಬೇಕು ಎನ್ನುವಂತೆ ಸರದಿಯಲ್ಲಿ ನಿಂತು ಹಣ ಪಡೆಯಲು ದುಂಬಾಲು ಬೀಳುತ್ತಿದ್ದಾರೆ.
ಎಲ್ಲ ಗ್ರಾಹಕರು ಒಂದೇ ಬಾರಿಗೆ ಆಗಮಿಸಿ ನಮಗಿಷ್ಟು ಹಣ ಬೇಕು ಎಂದರೇ ಸ್ವಲ್ಪ ತೊಂದರೆಯಾಗುತ್ತದೆ. ಆದ್ದರಿಂದ ಬ್ಯಾಂಕ್‌ಗಳಲ್ಲಿ ಹಣದ ಕೊರತೆಯಾಗದಂತೆ ಹಾಗೂ ಎಲ್ಲ ಗ್ರಾಹಕರಿಗೆ ಹಣ ವಿತರಿಸಲಾಗುತ್ತಿದೆ. ಯಾರೊಬ್ಬರಿಗೂ ತೊಂದರೆಯಾಗದಂತೆ ವಹಿವಾಟು ನಡೆಸಲಾಗುತ್ತಿದೆ. ಇದಲ್ಲದೇ ಬ್ಯಾಂಕ್‌ನಲ್ಲಿ ಇಂತಿಷ್ಟು ಹಣ ಜಮಾ ಇರಬೇಕೆಂದು ಇದೆ. ಆ ನಿಟ್ಟಿನಲ್ಲಿ ಹಣದ ಸಂಗ್ರಹಣೆ ಇರುತ್ತದೆ. ಹೆಚ್ಚು ಹಣ ಬೇಕಾದಲ್ಲಿ ಗ್ರಾಹಕರು ಮುಂಚಿತ ತಿಳಿಸಿದ್ದಲ್ಲಿ ಅವರಿಗೆ ನೀಡಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಹೆಚ್ಚಿನ ಹಣ ಬೇಕಾಗಿದ್ದಲ್ಲಿ ಮುಂಚಿತವಾಗಿ ತಿಳಿಸಬೇಕು.
– ಗ್ರಾಮೀಣ ಬ್ಯಾಂಕ್ ಅಧಿಕಾರಿ,
ಎಸ್‌ಬಿ ಖಾತೆ ಹೊಂದಿರುವವರುಸಾವಿರಾರು ರೂ.ಗಳ ಹಣ ಖಾತೆಯಲ್ಲಿದ್ದರೂ ಸಹ ತೆಗೆದುಕೊಳ್ಳಲು ಆಗುತ್ತಿಲ್ಲ, ಬ್ಯಾಂಕ್‌ಗಳಲ್ಲಿ ಪ್ರತಿ ಗ್ರಾಹಕರಿಗೂ ಕೇವಲ ಐದು ಸಾವಿರ ರೂ.ಗಳನ್ನು ಮಾತ್ರ ವಿತರಿಸುತ್ತಿದ್ದಾರೆ. ಹೆಚ್ಚು ಹಣ ಬೇಕಾದರೆ ಚೆಕ್ ತೆಗೆದುಕೊಂಡು ಬರಬೇಕು. ಇದನ್ನು ನೋಡಿದರೆ ತಾರತಮ್ಯ ಮಾಡಿದಂತೆ ಆಗುತ್ತಿದೆ. ಎಲ್ಲರಿಗೂ ಕಡ್ಡಾಯವಾಗಿ ಒಂದೇ ನಿಯಮ ಜಾರಿ ಮಾಡಿ, ಯಾರೊಬ್ಬರಿಗೂ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಬ್ಯಾಂಕ್ ಅಧಿಕಾರಿಗಳು ಮುಂದಾಗಬೇಕು.
– ಸುರೇಶ, ಹೆಬಸೂರ ಗ್ರಾಮಸ್ಥ
–ಬಸವರಾಜ ಹೂಗಾರ