ಜಾಗತಿಕ ಹಿಂಜರಿತ ಎಲ್ಲ ದೇಶಗಳು, ಕಂಪೆನಿಗಳು ಮತ್ತು ವೈಯಕ್ತಿಕವಾಗಿ ಎಲ್ಲರ ಮೇಲೂ ಶೀಘ್ರದಲ್ಲೇ ಪರಿಣಾಮ ಬೀರಲಿದೆ. ಈ ಪರಿಸ್ಥಿತಿಯಿಂದ ಪಾರಾಗಲು ಆರ್ಥಿಕವಾಗಿ ಸಿದ್ಧರಾಗುವುದು ಉತ್ತಮ ಮಾರ್ಗ ವಾಗಿದೆ. ಇದಕ್ಕೆ ಮೊದಲು ಮಾಡ ಬೇಕಾಗಿರುವುದು ಈಗಿನಿಂದಲೇ ಉಳಿತಾಯ. ಐಶಾರಾಮಿ ಮತ್ತು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವುದು ಅನಿವಾರ್ಯ.
ಜಾಗತಿಕ ಮತ್ತು ದೇಶೀಯ ಆರ್ಥಿಕತೆಗಳು ನಿಂತ ನೀರಲ್ಲ. ಸದಾ ಚಲನೆಯುಳ್ಳದ್ದು. ಹಾಗೆಂದು ಋತು ಬದಲಾವಣೆಯುಂತೆ ನಿಯಮಿತವೂ ಅಲ್ಲ.
ಆರ್ಥಿಕ ತಜ್ಞರು ಸಂಭಾವ್ಯ ಪಲ್ಲಟಗಳನ್ನು ಪೂರ್ವಾನುಮಾನ ಮಾಡಲು ಶಕ್ತರಾಗಿದ್ದಾರೆ. ಈಗ ಜಾಗತಿಕವಾಗಿ ಸುಮಾರು ಒಂದು ವರ್ಷದ ವರೆಗೆ ವಿಸ್ತರಿಸುವ ಆರ್ಥಿಕ ಹಿಂಜರಿತದ ಪೂರ್ವಾನುಮಾನ ಮಾಡಲಾಗಿದೆ. ಇದರ ಪರಿಣಾಮವಾಗಿ ಈ ಆರ್ಥಿಕ ವಿಕೋಪವನ್ನು ಎದುರಿಸಲು ಎಲ್ಲ ರಂಗಗಳು ತಯಾರಾಗುತ್ತಿವೆ; ಅಗತ್ಯ ಕ್ರಮಗಳನ್ನು ಯೋಚಿಸುತ್ತಿವೆ ಮತ್ತು ಕಾರ್ಯರೂಪಕ್ಕೆ ತರುತ್ತಿವೆ. ಇವುಗಳಲ್ಲಿ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಉದ್ಯೋಗ ಕಡಿತ ಉದ್ಯೋಗಿಗಳನ್ನು ಸಂಬಂಧಿಸಿದ್ದು.
ಎಲ್ಲ ಉದ್ಯಮಗಳು ಸಂಭಾವ್ಯ ಆರ್ಥಿಕ ಕುಸಿತದ ಪ್ರಭಾವವನ್ನು ಕಡಿಮೆ ಮಾಡಲು ಮಾರ್ಗೋಪಾಯಗಳನ್ನು ಹುಡುಕುತ್ತಿವೆ. ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಅಮೆರಿಕದ ಕೆಲವು ಬೃಹತ್ ಉದ್ಯಮಗಳು ಉದ್ಯೋಗ ಕಡಿತದ ಯೋಜನೆಯನ್ನು ಜಾರಿಗೊಳಿಸಿವೆ. ಈ ಕಡಿತ ಒಂದು ಕ್ಷೇತ್ರದ ಉದ್ದಿಮೆಗಳಿಗೆ ಸೀಮಿತವಾಗದಿರುವುದು ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ. ಇದು ಮುಂದಿನ ಜಾಗತಿಕ ಆರ್ಥಿಕ ಹಿಂಜರಿತ ಇಡೀ ಆರ್ಥಿಕತೆಯನ್ನು ಬಾಧಿಸಲಿದೆ ಎಂಬುದರ ಮುನ್ಸೂಚನೆಯಾಗಿದೆ. ಇದನ್ನು 2008ರ ಆರ್ಥಿಕ ಹಿನ್ನಡೆಗೆ ಹೋಲಿಸುವವರೂ ಇದ್ದಾರೆ. ಪ್ರಮಾಣ ಎಷ್ಟೇ ಇದ್ದರೂ ತೊಡಕಂತೂ ನಿಜ ಎನ್ನಬಹುದು. ಹೆಸರಾಂತ ಜಾಲತಾಣ ಕಂಪೆನಿಗಳಾದ ಮೆಟಾ, ಟ್ವಿಟರ್, ಅಮೆಜಾನ್ ಕೂಡ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.
Related Articles
ಜಾಗತಿಕ ಆರ್ಥಿಕ ಹಿಂಜರಿತದ ಕಾರ್ಮೋಡದ ಹಿನ್ನೆಲೆಯಲ್ಲಿ ಕೆಲವು ಕಂಪೆನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿರುವುದು ಚಿಂತೆಯನ್ನು ಹೆಚ್ಚಿಸಿದೆ. ತಮ್ಮ ವೆಚ್ಚ ನೀಗಿಸಲು ಮತ್ತು ಹಿಂಜರಿತವನ್ನು ಎದುರಿಸಲು ಈ ಕ್ರಮಗಳು ಮುನ್ನೆಲೆಗೆ ಬಂದಿವೆ. ಅಮೆರಿಕದಲ್ಲಿ ದಿಗ್ಗಜ ಕಂಪೆನಿಗಳು ಮಾಡಿರುವ ಉದ್ಯೋಗ ಕಡಿತದ ಲಭ್ಯ ಸಂಖ್ಯೆಗಳು ಇಂತಿವೆ:
ಅಮೆಜಾನ್ ತನ್ನ ಒಟ್ಟು ಉದ್ಯೋಗಗಳ ಶೇ.10ರಷ್ಟನ್ನು ಕಡಿತಗೊಳಿಸುವ ತಯಾರಿ ಯಲ್ಲಿದೆ. ಫೇಸ್‌ಬುಕ್ 11,400 ಉದ್ಯೋಗ ಗಳನ್ನು ಕಡಿತ ಮಾಡುವುದಾಗಿ ಈಗಾಗಲೇ ಘೋಷಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯ ತತ್ಪರವಾಗಿದೆ. ಹಾಗೆ ನಿರ್ಗಮಿಸುವ ಉದ್ಯೋಗಿ ಗಳಿಗೆ ಅನುಕೂಲವಾಗುವಂತೆ 3-6 ತಿಂಗಳುಗಳ ಕಾಲ ಪೇ ರೋಲಿನಲ್ಲಿ ಉಳಿಸಿಕೊಂಡು ಉದ್ಯೋಗಿಗಳಿಗೆ ಅನುಕೂಲ ಮತ್ತು ಸ್ವಲ್ಪ ಮಟ್ಟಿನ ಸಾಂತ್ವನ ನೀಡಿದೆ. ಡಿಸ್ನೆ, ವಾಲ್ ಮಾರ್ಟ್, ಸೇಲ್ಸ್ ಫೋರ್ಸ್, ಲಿಫ್ಟ್ ಉದ್ಯೋಗ ಕಡಿತಕ್ಕೆ ತಯಾರಾಗುತ್ತಿರುವ ಇತರ ಪ್ರಮುಖ ಕಂಪೆನಿಗಳು.
ಕಂಪೆನಿಗಳು ಉದ್ಯೋಗಿಗಳನ್ನು ತೆಗೆದು ಹಾಕಲು ಮುಖ್ಯ ಕಾರಣಗಳನ್ನು ಹೀಗೆ ಸಾಮಾನ್ಯಿàಕರಿಸಬಹುದು.
ಜಾಗತಿಕ ಹಣದುಬ್ಬರ. ಮತ್ತು ಹೆಚ್ಚುತ್ತಿರುವ ವೆಚ್ಚಗಳು.
ಜಾಹೀರಾತು ಮಾರುಕಟ್ಟೆಯ ಕುಸಿತ.
ಕೆಲವು ಕ್ಷೇತ್ರಗಳಲ್ಲಿ ಬೇಡಿಕೆ ಕುಸಿತ, ನಿರೀಕ್ಷಿತ ಆದಾಯ ಬರದಿರುವುದು.
ಕೃತಕ ಬುದ್ಧಿ ಮತ್ತೆಯ ಬೆಳವಣಿಗೆಯಿಂದ ಸ್ವಯಂಚಾಲಿತ ವ್ಯವಸ್ಥೆಯ ಪರಿಣಾಮವಾಗಿ ಉದ್ಯೋಗ ನಷ್ಟ.
ಉಕ್ರೇನ್ ಮೇಲಣ ರಷ್ಯಾ ದಾಳಿ.
ಒಂದು ಅಂಕಿಅಂಶಗಳ ಪ್ರಕಾರ ಜಾಗತಿಕವಾಗಿ ಸೆಪ್ಟಂಬರ್ 22ರ ಹೊತ್ತಿಗೆ ನಿರುದ್ಯೋಗದ ಪ್ರಮಾಣ ಶೇ.3.5 ಇದ್ದದ್ದು ಡಿಸೆಂಬರ್ 22 ರ ಹೊತ್ತಿಗೆ ಶೇ. 3.7ಕ್ಕೆ ಏರಲಿದೆ. ಜೂನ್ 2023ರ ಹೊತ್ತಿಗೆ ನಿರುದ್ಯೋಗದ ಪ್ರಮಾಣ ಶೇ.4.3ಕ್ಕೆ ವೃದ್ಧಿಸಲಿದೆ. ಮುಂದಿನ ವರ್ಷದ ಕೊನೆಯ ತನಕ ಹಾಗೆಯೇ ಮುಂದುವರಿಯಲಿದೆ ಎನ್ನಲಾಗಿದೆ. ಪರಿಣಾಮವಾಗಿ ಜಾಗತಿಕ ಜಿಡಿಪಿ ಶೇ. 0.2 ಕುಸಿಯಲಿದೆ. ವಿವಿಧ ಅನುಮಾನಗಳ ಪ್ರಕಾರ ಹೆಚ್ಚಿನ ಉದ್ಯೋಗ ಕಡಿತ ಅಮೆರಿಕದಲ್ಲಿ ಆಗಲಿದೆ. ಪರಿಣಾಮ ಇತರ ಆರ್ಥಿಕತೆಗಳನ್ನು ತಕ್ಕ ಮಟ್ಟಿಗೆ ಬಾಧಿಸದಿರದು.
ಮುಂದಿನ ದಿನಗಳಲ್ಲಿ ಈ ಪಟ್ಟಿ ಇನ್ನೂ ಉದ್ದಕ್ಕೆ ಬೆಳೆಯಬಹುದು. ಬೇರೆ ಆರ್ಥಿಕತೆಗಳಿಗೂ ಇದೇ ವ್ಯಾಧಿ ಹರಡುವ ಕಾರಣ ಒಟ್ಟು ಪರಿಣಾಮವನ್ನು ನಾವೇ ಊಹಿಸಬಹುದು! ಈ ಪಿಡುಗು ಭಾರತವನ್ನು ಸ್ವಲ್ಪ ಮಟ್ಟಿಗೆ ಬಾಧಿಸಲಿದೆ. ಪ್ರಮಾಣ ಕಡಿಮೆಯಿದ್ದರೂ ಕೆಲವು ಕಂಪೆನಿಗಳು ಮುನ್ನೆಚ್ಚರಿಕೆಯ ಕ್ರಮವಾಗಿ ಉದ್ಯೋಗ ಕಡಿತದ ಯೋಜನೆಗಳನ್ನು ಹೊರತರುತ್ತಿವೆ. ವಿದೇಶೀ ಒಡೆತನದ ಕೆಲವು ಕಂಪೆನಿಗಳು ಶೀಘ್ರದಲ್ಲಿ ಅನುಷ್ಠಾನ ಮಾಡುವ ಮುನ್ಸೂಚನೆಯನ್ನೂ ನೀಡಿವೆ.
ಒಟ್ಟಿನಲ್ಲಿ ಲಕ್ಷುರಿ ಸೌಲಭ್ಯದ ಜತೆಗೆ ಕೈತುಂಬಾ ಸಂಬಳ ಪಡೆಯುತ್ತಿದ್ದ ದೈತ್ಯ ಕಂಪೆನಿಗಳ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ನಿರುದ್ಯೋಗಿಗಳ ಪ್ರಮಾಣ ಹೆಚ್ಚಳವಾಗುವ ಆತಂಕ ಎದುರಾಗಿದೆ.
ಪ್ರಸ್ತುತ ಬದಲಾಗುತ್ತಿರುವ ವಸ್ತುಸ್ಥಿತಿಯಿಂದ ಭಾರತ ಕೂಡ ಅಬಾಧಿತವಾಗಿಲ್ಲ. ಆದರೆ ನಮ್ಮ ಔದ್ಯೋಗಿಕ ಅಂಶ ಮತ್ತು ನಮೂನೆಗಳನ್ನು ಗಮನಿಸಿದರೆ ನಮ್ಮ ಮೇಲೆ ಆತಂಕಕಾರೀ ನಷ್ಟ ಉಂಟಾಗುವ ಸಾಧ್ಯತೆ ಕಡಿಮೆ. ಇತರ ದೇಶಗಳಿಗೆ ಹೋಲಿಸಿದರೆ ಇಲ್ಲಿನ ವೇತನ, ಖರ್ಚು-ವೆಚ್ಚಗಳು ಮತ್ತು ಇತರ ಅಂಶಗಳು ಮಿತಿ ಮೀರಿಲ್ಲ ಎನ್ನಬಹುದು.
ಪರಿಸ್ಥಿತಿಯನ್ನು
ಎದುರಿಸುವುದು ಹೇಗೆ?
ಭಾರತ ಕೂಡ ಇಂತಹ ಆರ್ಥಿಕ ಬಿಕ್ಕಟ್ಟಿಗೆ ಸಿದ್ಧವಾಗುತ್ತಿದೆ. ಇತರ ದೇಶಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿರುವಾಗ ನಮ್ಮ ದೇಶ ಇದರ ಪರಿಣಾಮದಿಂದ ಪೂರ್ಣವಾಗಿ ಪಾರಾಗಲು ಸಾಧ್ಯವಿಲ್ಲ. ಕಳೆದ ಕೆಲವು ತ್ರೆ„ಮಾಸಿಕಗಳಲ್ಲಿ ಹಣದುಬ್ಬರ ತೀವ್ರವಾದ ಏರಿಕೆ ಕಂಡಿದೆ. ಷೇರು ಮಾರುಕಟ್ಟೆಯಲ್ಲಿ ಈ ಏರಿಳಿತಗಳನ್ನು ನಾವು ಕಂಡಿದ್ದೇವೆ. ಜಾಗತಿಕ ಹಿಂಜರಿತ ಎಲ್ಲ ದೇಶಗಳು, ಕಂಪೆನಿಗಳು ಮತ್ತು ವೈಯಕ್ತಿಕವಾಗಿ ಎಲ್ಲರ ಮೇಲೂ ಶೀಘ್ರದಲ್ಲೇ ಪರಿಣಾಮ ಬೀರಲಿದೆ. ಈ ಪರಿಸ್ಥಿತಿಯಿಂದ ಪಾರಾಗಲು ಆರ್ಥಿಕವಾಗಿ ಸಿದ್ಧರಾಗುವುದು ಉತ್ತಮ ಮಾರ್ಗವಾಗಿದೆ. ಇದಕ್ಕೆ ಮೊದಲು ಮಾಡಬೇಕಾಗಿರುವುದು ಈಗಿನಿಂದಲೇ ಉಳಿತಾಯ. ಐಶಾರಾಮಿ ಮತ್ತು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವುದು ಅನಿವಾರ್ಯ. ಸುಮಾರು ಆರು ತಿಂಗಳಿನ ಅನಿವಾರ್ಯ ಬಾಧ್ಯತೆಗಳಿಗಾಗುವಷ್ಟು ಉಳಿತಾಯ ಅಗತ್ಯ. ಮನೆ ಬಾಡಿಗೆ, ಇಎಂಐ(ಸಮಾನ ಸಾಲದ ಕಂತುಗಳು) ಈ ತರದ ಬಾಧ್ಯತೆಗಳಲ್ಲಿ ಬರುತ್ತವೆ. ಅನಿಯಮಿತ ಖರ್ಚುಗಳು, ಕ್ರೆಡಿಟ್ ಕಾರ್ಡ್ ಬಳಕೆಯ ಮೇಲೆ ಹತೋಟಿ ಸಾಧಿಸಬೇಕು. ಇನ್ನೊಂದು ಗಮನ ಹರಿಸಬೇಕಾದ ಅಂಶವೆಂದರೆ ಆರೋಗ್ಯ ವಿಮೆ. ಕೆಲಸ ಕಳೆದುಕೊಂಡ ಸಮಯದಲ್ಲಿ ಅನಾರೋಗ್ಯ ಬಾಧಿಸಿದರೆ ಭಾರೀ ಹಣ ಒಟ್ಟು ಗೂಡಿಸುವುದು ಕಷ್ಟವಾದೀತು.
ನಮ್ಮ ದೇಶದಲ್ಲಿ ಕೂಡ ನವೋದ್ಯಮಗಳ ಸಹಿತ ಸುಮಾರು 25,000 ಉದ್ಯೋಗ ನಷ್ಟಗಳಾಗಿವೆ ಎಂದು ಅನುಮಾನಿಸಲಾಗಿದೆ. ಶಿಕ್ಷಣ ಕ್ಷೇತ್ರ, ಅನ್‌ಎಕಾಡಮಿ ಮುಂತಾದ ಕ್ಷೇತ್ರ ಗಳಲ್ಲಿ ಉದ್ಯೋಗಿ ಗಳು ತಮ್ಮ ಕೆಲಸ ಕಳೆದುಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಕೊರೊನಾ ಎಲ್ಲರ ನಿದ್ದೆಗೆಡಿಸಿದರೆ ಮುಂದಿನ ದಿನಗಳಲ್ಲಿ ಜಗತ್ತನ್ನು ಕಾಡಲಿದೆ ಎನ್ನಲಾಗಿರುವ ಆರ್ಥಿಕ ಹಿಂಜರಿತದ ಹೊಡೆತದಿಂದ ಪಾರಾಗುವ ನಿಟ್ಟಿನಲ್ಲಿ ಬೃಹತ್ ಕಂಪೆನಿಗಳು ಜಾರಿಗೊಳಿಸುತ್ತಿರುವ ಉದ್ಯೋಗ ಕಡಿತ ನೀತಿಯ ಪರಿಣಾಮ ಖಾಸಗೀ ವಲಯದ ಉದ್ಯೋಗಿಗಳ ಭವಿಷ್ಯದ ಮೇಲೆ ತೂಗು ಕತ್ತಿಯಂತೆ ಓಲಾಡತೊಡಗಿದ್ದು ಅವರ ನೆಮ್ಮದಿ ಕೆಡಿಸಲಾರಂಭಿಸಿದೆ. ಅಂತಹ ಸಾಧ್ಯತೆಗಳ ಬಗ್ಗೆ ಮುನ್ನೆಚ್ಚರ ವಹಿಸುವುದೇ ಜಾಣತನ.
-ಡಾ| ಕೊಳ್ಚಪ್ಪೆ ಗೋವಿಂದ ಭಟ್, ಮಂಗಳೂರು