Advertisement

ರಾಜಕೀಯಕ್ಕೆ ಬರಬಹುದಲ್ಲವೇ ವಿದೇಶಿ ಪ್ರತಿಭೆಗಳು?

01:35 AM Jul 23, 2017 | |

ರಾಷ್ಟ್ರೀಯ ಸೀಮೆಗಳ ಆಚೆಗೂ ಒಂದು ರಾಜಕೀಯ ಪ್ರತಿಭೆಯಿದೆಯೆಂದರೆ, ಆ ಪ್ರತಿಭೆಯನ್ನು ನಾವೇಕೆ ಬಳಸಿಕೊಳ್ಳಬಾರದು? ಅವರ ಸೇವೆಯನ್ನು ನಾವೇಕೆ ಪಡೆಯಬಾರದು? ಬಹುರಾಷ್ಟ್ರೀಯ ಕಂಪನಿಗಳಂತೂ ಯಾವಾಗಲೂ ಇದನ್ನೇ ಮಾಡುತ್ತಿಲ್ಲವೇ? ಎಲ್ಲೇ ಪ್ರತಿಭೆಯಿರಲಿ, ಅದನ್ನು ಹುಡುಕಿತಂದು ಅವು ಬೆಳೆಸುತ್ತವೆ. 

Advertisement

ಭಾರತೀಯ ಮೂಲದ ಲಿಯೋ ವರಾದ್ಕರ್‌ ಐರ್ಲೆಂಡ್‌ನ‌ ಪ್ರಧಾನಮಂತ್ರಿಯಾಗಿ ಆಯ್ಕೆಯಾದಾಗ, ನಮ್ಮ ದೇಶ ಐರ್ಲೆಂಡಿಗರ ಈ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿತು. ಏಕೆಂದರೆ ಒಂದು ರೀತಿಯಲ್ಲಿ ಈ ಘಟನೆ ನಮ್ಮ ಪಾಲಿಗೆ ರಾಷ್ಟ್ರೀಯ ಗೌರವದಂತೆ ಕಂಡಿತು. ಮುಂಬೈನ ನನ್ನ ಗೆಳೆಯನೊಬ್ಬ ಈ ಸುದ್ದಿಯನ್ನು ಉಲ್ಲೇಖೀಸುತ್ತಾ ಬಹಳ ಹೆಮ್ಮೆಯಿಂದ ಹೇಳಿದ “”ನೋಡಿ, ಹೇಗೆ ನಮ್ಮ ಹುಡುಗ ಅವರ ನಾಯಕನಾಗಿಬಿಟ್ಟ!”

ಆಗ ನಾನು “”ಹಿಂದೆ ನೀವು ಸೋನಿಯಾ ಗಾಂಧಿಯವರ ಆಯ್ಕೆ ವಿಚಾರವನ್ನು ಇದೇ ಆಧಾರದ ಮೇಲೆಯೇ ವಿರೋಧಿಸಿದ್ದಿರಲ್ಲ?” ಎಂದು ನೆನಪು ಮಾಡಿಕೊಟ್ಟೆ. ಆಗ ಆತ ತುಸು ಧ್ವನಿ ತಗ್ಗಿಸಿ ಅಂದ “”ಅದೇ ಬೇರೆ, ಇದೇ ಬೇರೆ”
ಸತ್ಯವೇನೆಂದರೆ ಭಾರತೀಯ ಮೂಲದವರೊಬ್ಬರು ಐರ್ಲೆಂಡ್‌ನ‌ ಪ್ರಧಾನಿಯಾಗಿದ್ದನ್ನು ತಿಳಿದು ನನಗೂ ಖುಷಿಯಾಯಿತು. ಒಂದು ಕಾಲದಲ್ಲಿ ಅಸಂಭವವಾಗಿದ್ದ ಸಂಕಷ್ಟಗಳನ್ನೆಲ್ಲ ಈಗ ಸುಲಲಿತವಾಗಿ ಪಾರು ಮಾಡಿ ಅಧಿಕಾರಕ್ಕೇರಿದ್ದಾರೆ 38 ವರ್ಷದ ವರಾದ್ಕರ್‌. ಒಂದು ತಲೆಮಾರಿನ ಹಿಂದಕ್ಕೆ ಹೋಗಿ ನೋಡಿ. 

“ಅಯ್ಯೋ ಈ ವ್ಯಕ್ತಿಗೆ ವಯಸ್ಸು ಬಹಳ ಕಮ್ಮಿಯಿದೆ’ “ಎಲ್ಲರಿಗಿಂತ ಭಿನ್ನವಾಗಿದ್ದಾರೆ(ಸಲಿಂಗಿ)’ “ಅವರ ಮೈಬಣ್ಣ ದಟ್ಟವಾಗಿದೆ’ “ಅವರ ಹೆಸರೇ ಅವರು ವಿದೇಶಿ ಮೂಲದವರು ಎನ್ನುವುದನ್ನು ಸಾರುತ್ತಿದೆ’ ಎನ್ನುವ ಸಂಗತಿಗಳೇ ಆಗ ಬಹುದೊಡ್ಡ ಅಡ್ಡಿಗಳಾಗಿರುತ್ತಿದ್ದವು. ಆದರೆ, ಈಗ ವರಾದ್ಕರ್‌ ಅವರ ಗೆಲುವು, ಜಗತ್ತು ಪೂರ್ವಗ್ರಹಗಳನ್ನೆಲ್ಲ ದಾಟಿ ಎಷ್ಟು ಮುಂದೆ ಸಾಗಿದೆ ಎನ್ನುವುದನ್ನು ತೋರಿಸುತ್ತಿದೆ. ಆದಾಗ್ಯೂ, ಅನ್ಯ ಕಾರಣಗಳಿಗಾಗಿ ವಿದೇಶಿಯರ ಬಗ್ಗೆ ಪ್ರಪಂಚದಾದ್ಯಂತ ಇಂದು ದ್ವೇಷ ಹೆಚ್ಚಾಗುತ್ತಿದೆ ಎನ್ನುವುದೂ ಸತ್ಯ. ಆದರೂ ಐರ್ಲೆಂಡ್‌ನ‌ ಪ್ರಧಾನಿಯ ಆಯ್ಕೆ ಹೊಸ ಕ್ರಮವೊಂದಕ್ಕೆ ಹಾದಿ ಮಾಡಿ ಕೊಡುತ್ತಿದೆಯೇ ಎನ್ನುವ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕು.
 
ಐರಿಷ್‌ ರಿಪಬ್ಲಿಕ್‌ನ ಸಂಸ್ಥಾಪಕ ಎಮನ್‌ ಡೀ ವಲೇರಾ ಹುಟ್ಟಿದ್ದು ನ್ಯೂಯಾರ್ಕ್‌ನಲ್ಲಿ, ಅವರ ತಂದೆ ಸ್ಪೇನ್‌ ಮೂಲದವರು. ಆದರೆ ಅವರು ಐರ್ಲೆಂಡ್‌ನ‌ ಪ್ರಧಾನಿಯಾದರು. ಹೀಗೆ ಆದದ್ದು ಆ ಕಾಲದಲ್ಲೂ ದುರ್ಲಭ ಘಟನೆಯೇನೂ ಆಗಿರಲಿಲ್ಲ.
  
ಉದಾಹರಣೆಗೆ, ಫ್ರೆಂಚರು ಮತ್ತು ಜರ್ಮನ್ನರ ನಡುವೆ ಅಸಂಖ್ಯ ಯುದ್ಧಗಳು ನಡೆದಿರುವುದು ನಮಗೆಲ್ಲ ತಿಳಿದಿದೆ. ಆದರೂ ಒಂದು ದಶಕದ ಹಿಂದೆ ಫ್ರಾನ್ಸ್‌ನಲ್ಲಿದ್ದ ವಿತ್ತಮಂತ್ರಿಯೊಬ್ಬರು ಜರ್ಮನ್‌ ಮೂಲದವರಾಗಿದ್ದರು(ಸ್ಟ್ರಾಸ್‌ ಕಾನ್‌). ಅದೇ ವೇಳೆ ಜರ್ಮನಿಯಲ್ಲಿ ಲಾಫೋಂತೇನ್‌ ಎಂಬ ಫ್ರೆಂಚ್‌ ಹೆಸರಿನ ವಿತ್ತಮಂತ್ರಿಯಿದ್ದರು!

2008ರಲ್ಲಿ ಬರಾಕ್‌ ಒಬಾಮಾರ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಆ ದೇಶದ ಉದಾರ ಮನಸ್ಥಿತಿಯ ಪ್ರದರ್ಶವಾಗಿತ್ತು. ಒಬಾಮಾ ಕೆನ್ಯಾದ ಮೂಲದ ವಲಸಿಗನ ಮಗ.  ಆದರೂ ವಿಶ್ವಸ್ತರದಲ್ಲಿ ಈ ವಿಚಾರವಾಗಿ ಅಮೆರಿಕವನ್ನೇ ಅಗ್ರಣಿ ದೇಶ ಎಂದು ಹೇಳಲಾಗುವುದಿಲ್ಲ. ಅರ್ಜೆಂಟೀನಾದ ಜನತೆ ಸಿರಿಯಾದ ವಲಸಿಗನ ಮಗನಾದ ಕಾರ್ಲೋಸ್‌ ಸೌಲ್‌ ಮೆನೆಮ್‌ ಅವರನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದರು. ಇನ್ನು ಪೆರು ಕೂಡ ಅಲ್ಬಟೋì ಫ‌ುಜಿಮೋರಿ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿತು(ಅವರ ಅಪ್ಪ ಅಮ್ಮ ಜಪಾನಿಯರಾಗಿದ್ದರು). 
 
ಇದನ್ನೆಲ್ಲ ಹೇಳುತ್ತಿರುವುದಕ್ಕೆ ಕಾರಣವಿದೆ. ರಾಷ್ಟ್ರೀಯ ಸೀಮೆಗಳ ಆಚೆಗೂ ಒಂದು ರಾಜಕೀಯ ಪ್ರತಿಭೆಯಿದೆಯೆಂದರೆ, ಆ ಪ್ರತಿಭೆಯನ್ನು ನಾವೇಕೆ ಬಳಸಿಕೊಳ್ಳಬಾರದು? ಬಹುರಾಷ್ಟ್ರೀಯ ಕಂಪನಿಗಳಂತೂ ಯಾವಾಗಲೂ ಇದನ್ನೇ ಮಾಡುತ್ತಿಲ್ಲವೇ? ಎಲ್ಲೇ ಪ್ರತಿಭೆಯಿರಲಿ, ಅದನ್ನು ಹುಡುಕಿತಂದು ಅವು ಬೆಳೆಸುತ್ತವೆ. ಮಧ್ಯಯುಗದಲ್ಲಂತೂ ರಾಜರು ಅನ್ಯ ಪ್ರದೇಶಗಳ ಯೋಧರನ್ನು ಹಣ ಕೊಟ್ಟು ತಮ್ಮ ಪರವಾಗಿ ಹೋರಾಡಲು ಕರೆಸಿಕೊಳ್ಳುತ್ತಿದ್ದರು. ವಸಾಹತು ಆಡಳಿತಕ್ಕೂ ಮುನ್ನ ಭಾರತೀಯ ಸೇನೆಯಲ್ಲಿ ಉಜ್ಬೇಕ್‌ನ ಅಶ್ವಾರೋಹಿಗಳಿದ್ದರು, ಫ್ರೆಂಚ್‌ ಜನರಲ್‌ಗ‌ಳಿದ್ದರು ಮತ್ತು ಫಿರಂಗಿಗಳನ್ನು ಸಂಭಾಳಿಸಲು  ಟರ್ಕಿಯ ವಿಶೇಷಜ್ಞರಿದ್ದರು. ಆಗ ಯಾರಿಗೂ ಈ ಸಂಗತಿಗಳೆಲ್ಲ ತಪ್ಪು ಎನಿಸಲೇ ಇಲ್ಲ. ಆದರೆ ನಾವು ನಮ್ಮ ನಾಯಕರಲ್ಲಿ ರಾಷ್ಟ್ರೀಯ ಛಾಪನ್ನು ಆಪೇಕ್ಷಿಸುತ್ತೇವೆ. ಅವರಲ್ಲಿ ಭಾರತೀಯತೆಯ ನಿರ್ದಿಷ್ಟ ಗುರುತು ಇರಬೇಕೆಂದು ಬಯಸುತ್ತೇವೆ. 
 
ಆದರೂ ಜಗತ್ತಿನಲ್ಲಿ ಇಂದು ಇಂಥದ್ದೊಂದು ಯೋಚನೆ ಬದಲಾಗುತ್ತಿರುವುದು ಸುಳ್ಳಲ್ಲ. 2015ರಲ್ಲಿ ಜಾರ್ಜಿಯಾದ ನಿವೃತ್ತ ಅಧ್ಯಕ್ಷ (2013-14) ಮಿಖೈಯಿಲ್‌ ಸಾಕಾಶ್‌ವಿಲಿ ಅವರ ಮುಂದೆ ಮತ್ತೂಮ್ಮೆ ಅಧಿಕಾರಕ್ಕೇರುವ ಅವಕಾಶವಿರಲಿಲ್ಲ. ಏಕೆಂದರೆ ಒಬ್ಬ ವ್ಯಕ್ತಿ ಕೇವಲ ಎರಡು ಬಾರಿ ಮಾತ್ರ ಅಧ್ಯಕ್ಷರಾಗಬಹುದು ಎನ್ನುವ ನಿಯಮ ಅಲ್ಲಿನ ಸಂವಿಧಾನದಲ್ಲಿದೆ. ಆದರೆ ಸಾಕಾಶ್‌ವಿಲಿ ಅವರ ವಯಸ್ಸು 50ಕ್ಕಿಂತಲೂ ಕಡಿಮೆಯಿದೆ. ಹೀಗಿರುವಾಗ ಇಷ್ಟು ಬೇಗ ನಿವೃತ್ತ ಜೀವನ ನಡೆಸಲು ಸಾಧ್ಯವಾಗದು ಎಂದು ನಿರ್ಧರಿಸಿದ ಅವರು ತಮ್ಮ ದೇಶ ತೊರೆದು ಉಕ್ರೇನ್‌ಗೆ ಹೋದರು. ಉಕ್ರೇನ್‌ನ ನಾಗರಿಕತ್ವ ಪಡೆದು, ಓಬ್ಲಾಸ್ಟ್‌ ಪ್ರಾಂತ್ಯದ ಗವರ್ನರ್‌ ಆಗಿಬಿಟ್ಟರು!  ಉಕ್ರೇನ್‌ನ ರಾಜಕಾರಣಿಯಾಗಿ ಒಂದು ವರ್ಷದ ನಂತರ ಕೆಲ ಅಡ್ಡಿಗಳು ಎದುರಾಗಿ ಅವರು ಗವರ್ನರ್‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆದರೂ ಸಾಕಾಶ್‌ವಿಲಿ ಅವರಿಗೆ ಇನ್ನೂ 49 ವರ್ಷ ವಯಸ್ಸು. ಹೀಗಾಗಿ ಇನ್ನೊಂದು ದೇಶಕ್ಕೆ ಹೋಗಿ ಅಲ್ಲಿ ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ(ಉದಾಹರಣೆಗೆ ಭಾರತಕ್ಕೆ) ಎಂದು ಅವರಿಗೆ ಯಾರಾದರೂ ಸಲಹೆ ನೀಡಬಹುದೇನೋ!

Advertisement

1970ರ ದಶಕದಲ್ಲಿ ಲಿಬಿಯಾದ ನಾಯಕ ಮುಅಮ್ಮರ್‌ ಗದ್ದಾಫಿ ಈಜಿಪ್ತ್ನೊಂದಿಗೆ ಸೇರಿ “ಯುನೈಟೆಡ್‌ ಅರಬ್‌ ರಿಪಬ್ಲಿಕ್‌’ ಹೆಸರಿನಲ್ಲಿ ಏಕ ಪ್ರಾಂತ್ಯವೊಂದರ ರಚನೆಗೆ ಸಲಹೆ ನೀಡಿದ್ದರು. ಆದರೆ ಗದ್ದಾಫಿ ಕನಸು ಈಡೇರಲಿಲ್ಲ. ಇದಕ್ಕೆ ಕಾರಣ ಅವರು ಈ ವಿಷಯವಾಗಿ ಆಡಿದ ಅವಿವೇಕದ ಮಾತುಗಳು. ಗದ್ದಾಫಿ ಈ ವಿಲೀನದ ಬಗ್ಗೆ ತಮ್ಮ ಆಪ್ತರಿಗೆ ತಮಾಷೆಯಾಗಿ ಹೀಗೆ ಹೇಳಿದರಂತೆ: “”ನನ್ನ ತಲೆಯಲ್ಲಿ ಯುನೈಟೆಡ್‌ ಅರಬ್‌ ರಿಪಬ್ಲಿಕ್‌ ಯೋಚನೆ ಹುಟ್ಟುವುದಕ್ಕೆ ಕಾರಣವೇನು ಗೊತ್ತೇ? ಒಂದು, ಈಜಿಪ್ತ್ನಲ್ಲಿ ಬಹಳಷ್ಟು ಜನರಿದ್ದಾರೆ, ಆದರೆ ಅಲ್ಲಿ ಅಸಲಿ ನಾಯಕರೇ ಇಲ್ಲ. ಇನ್ನು ಲಿಬಿಯಾದಲ್ಲಿ ಬಹಳಷ್ಟು ನಾಯಕರಿದ್ದಾರೆ, ಆದರೆ ಅಸಲಿ ಜನರೇ ಇಲ್ಲ”.  ಗದ್ದಾಫಿ ತಮ್ಮ ಆಪ್ತರೊಂದಿಗೆ ಆಡಿದ ಈ ಮಾತು ಈಜಿಪ್ತ್ನ ಅಧಿಕಾರಿಗಳ ಕಿವಿಗೂ ತಲುಪಿತು. ಆಗ ಅವರು ಈ ವಿಲೀನ ಪ್ರಕ್ರಿಯೆಯಿಂದ ಹಿಂದೆ ಸರಿದುಬಿಟ್ಟರು. ಹುಟ್ಟುವ ಮೊದಲೇ “ಯುನೈಟೆಡ್‌ ಅರಬ್‌ ರಿಪಬ್ಲಿಕ್‌’ ಮಣ್ಣು ಸೇರಿತು.

ಯೋಚಿಸಿ ನೋಡಿ. ಸಿಂಗಾಪುರದ ಹೆಸರನ್ನು ಎತ್ತರಕ್ಕೇರಿಸಿದ ಲೀ ಕುಆನ್‌ ಯೀವ್‌ರ ಹೆಸರು ಜಗತ್‌ಪ್ರಸಿದ್ಧವಾಗಿದೆ. ಆದರೆ ಲೀ ಕುಆನ್‌ ಅವರಿಗೆ ತಮ್ಮ ಅಗಾಧ ದೂರದೃಷ್ಟಿ ಮತ್ತು ಅನುಭವವನ್ನು ಸಿಂಗಾಪುರಕ್ಕಷ್ಟೇ ಬಳಸಲು ಸಾಧ್ಯವಾಯಿತು. ತಮ್ಮ ಅನುಭವ ಸಾರವನ್ನು ಅನ್ಯ ರಾಷ್ಟ್ರಗಳಿಗೆ ಹರಿಸುವ ಅವಕಾಶ ಅವರಿಗೆ ಸಿಗಲಿಲ್ಲ.  

ನಾನು ಹೇಳುತ್ತಿರುವ ಲಾಜಿಕ್‌ ಈ ಕಾಲದಲ್ಲಿ ಬಹಳ ಅದ್ಭುತವಾಗಿ ಫ‌ಲ ನೀಡಬಲ್ಲದು. ಯೋಚಿಸಿ ನೋಡಿ, ಈಗ ಬ್ರಿಟನ್‌ನಲ್ಲಿ ಬ್ರೆಕ್ಸಿಟ್‌ ನಿರ್ಧಾರದಿಂದಾಗಿ ಅರಾಜಕತೆ ತುಂಬಿಕೊಂಡಿದೆ. ಈ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಬ್ರಿಟನ್‌, ಬರಾಕ್‌ ಒಬಾಮಾರ ಸೇವೆಯನ್ನು ಪಡೆಯಿತೆಂದರೆ ಹೇಗಿರುತ್ತದೆ?  
 
ಜಗತ್ತಿನಲ್ಲಿ ಸಾಧ್ಯತೆಗಳಂತೂ ತಲೆ ತಿರುಗಿಸುವಂತೆ ಇವೆ. ಅಲ್ಲವೇ?.

– ಶಶಿ ತರೂರ್‌
ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next