Advertisement

Festivals: ಹಬ್ಬಗಳು ಮರೆಯಾಗುತ್ತಿವೆಯೇ?

03:40 PM Apr 19, 2024 | Team Udayavani |

ದಿಮ್ಸಲ್, ದಿಮ್ಸಲ್‌ ಒಂದು ರಾತ್ರಿ ಪೂರ್ತಿ ಕೂಗ್ಲಿಕ್ಕೆ ಶಿವರಾತ್ರಿ, ಡಿಜೆಗೆ ಹುಚೆದ್ದು ಹೆಜ್ಜೆ ಹಾಕಲಿಕ್ಕೆ ಚೌತಿ, ಪಟಾಕಿ ಸೌಂಡ್‌ಗೆ ದೀಪಾವಳಿ, ದ್ವಾಸಿ ಕದುಕೆ ಹೊಸಲಜ್ಜಿ, ಕೂಗ್‌ ಹಾಕ್ಲಿಕ್ಕೆ ಬಲಿಂದ್ರ ಪೂಜೆ ಮನೆಯವರನ್ನೆಲ್ಲ ಒಟ್ಟಿಗೆ ಸೇರಿಸುವುದಕ್ಕೆ ಹೊಸ್ತ್ (ಕದಿರು ಹಬ್ಬ) ಇದೆಲ್ಲ ನಮ್ಮ ಆಚರಣೆಗಳು ಮತ್ತು ಹಬ್ಬಗಳು. ‌ಹಾಗೇ ಇವೆಲ್ಲ ಹಬ್ಬಗಳಿಗಿಂತ ಮಿಗಿಲಾಗಿ ಸಂತಸದ ಮನೋರಂಜನಾತ್ಮಕವಾದ ಕ್ಷಣಗಳಾಗಿವೆ ಮತ್ತು ನಾವು ಜೀವನದಲ್ಲಿ ಮುಂದೆ ಸಾಗಿದಂತೆ ಮುಂದೆ ನಾವು ನೆನೆಯುವ ಸವಿ ನೆನಪುಗಳಾಗಿವೆ.

Advertisement

ಹಬ್ಬ ಎಂದಾಗ ಮನೆಯ ಹಿರಿಯವರೆಲ್ಲ ಆಚರಣೆಗಳ ಕಡೆಗೆ ಗಮನ ಕೊಟ್ಟರೆ ನಾವು ಯುವಕರು ಹಬ್ಬಗಳಲ್ಲಿ ಸಿಗುವಂತಹ ಆ ಮಜವಾದ ಕ್ಷಣಗಳ ಕಡೆಗೆ ಗಮನವಹಿಸುತ್ತೇವೆ.

ನಾವು ಕರಾವಳಿಗರು ಎಲ್ಲ ರೀತಿಯ ಹಬ್ಬಗಳನ್ನ ಆಚರಿಸಿಕೊಂಡು ಬಂದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಹಬ್ಬಗಳು ಮರೆಯಾಗುತ್ತಿವೆ ಎಂಬುದು ಎಲ್ಲರಲ್ಲಿ ಕೇಳಿ ಬರುತ್ತಿರುವಂತಹ ಮಾತು. ಇದು ಒಂದು ರೀತಿಯಲ್ಲಿ ನಿಜ ಎಂದು ಹೇಳಬಹುದು. ಮಾನವನ ಮೂಲವನ್ನ ನೋಡ್ತಾ ಹೋದರೆ ಮಾನವ ಜಾತಿ ತನ್ನ ಬದುಕಿಗೆ ಬೇಕಾದ ಎಲ್ಲ ವ್ಯವಸ್ಥೆಗಳಾದ ನಂತರ ಮನೋರಂಜನೆಯ ಕಡೆಗೆ ಮುಖ ಮಾಡುತ್ತಾನೆ. ಮೊದಲೆಲ್ಲ ಇವಾಗಿನ ತರ ಟಿವಿ ಮೊಬೈಲ್‌ ಹಾಗೆ ಇನ್ನಿತರ ಮನೋರಂಜನ ಮಾಧ್ಯಮಗಳು ಇರಲಿಲ್ಲ. ಹಾಗಾಗಿ ನಮ್ಮ ಪೂರ್ವಿಕರೆಲ್ಲರೂ ಹಬ್ಬಗಳ ಕಡೆಗೆ ಮುಖ ಮಾಡಿದರು.

ವರ್ಷವಿಡೀ ತಮ್ಮ ಕೆಲಸಗಳಲ್ಲಿ ವಿಲೀನರಾಗಿರುವಂತಹವರೆಲ್ಲರೂ ಹಬ್ಬದ ದಿನ ಒಟ್ಟಿಗೆ ಸೇರಿ ಆಚರಿಸುವ ಮೂಲಕ ತಮ್ಮೊಳಗಿನ ದುಃಖ ಉದ್ವೇಗ ಎಲ್ಲವನ್ನು ಹೋಗಲಾಡಿಸಿಕೊಳ್ಳುತ್ತ ಸಂತಸದ ಕ್ಷಣಗಳನ್ನು ತಮ್ಮದಾಗಿಸಿ ಕೊಳ್ಳುತ್ತಾರೆ. ಹೀಗೆ ಮನೋರಂಜನೆಗಾಗಿ ಹಬ್ಬಗಳು ಪ್ರಾರಂಭಗೊಂಡವು ಎಂದು ಕೂಡ ಹೇಳಬಹುದಾಗಿದೆ.

ಈ ಹಬ್ಬಗಳು ಮತ್ತೆ ಆಚರಣೆಗಳಾದ ಅನಂತರ ನಾವು ನಮ್ಮೂರಿನಲ್ಲಿ ಜಾತ್ರೆಗಳನ್ನು ಕೂಡ ನೋಡಬಹುದು. ಈ ಜಾತ್ರೆಗಳು ಭಕ್ತಿ ಹಾಗೂ ಭಾವನೆಗಳ ಸಮ್ಮಿಲನ ವಾಗಿದ್ದರೂ ಕೂಡ ಮನೋರಂಜನ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಹೀಗೆ ಕಾಲಕಾಲಕ್ಕೆ ದೇವಸ್ಥಾನಗಳು ನಿರ್ಮಾಣಗೊಂಡವು ಒಂದೊಂದು ಕುಟುಂಬದವರು ಒಂದೊಂದು ದೇವಸ್ಥಾನವನ್ನು ನಂಬತೊಡಗಿದರು. ಹೀಗೆ ಮುಂದೆ ವಾರ-ವಾರಕ್ಕೆ ಏನಾದರೂ ಒಂದು ಆಚರಣೆಗಳು, ಕಾರ್ಯಕ್ರಮಗಳು, ಹಬ್ಬಗಳು ಇದ್ದೇ ಇರುತ್ತಿದ್ದವು.

Advertisement

ಹಾಗಾದ್ರೆ ಈ ಹಬ್ಬಗಳೆಲ್ಲ ಯಾಕೆ ಈಗ ಮರೆಯಾಗುತ್ತಿವೆ. ಹೀಗೆ ಹಬ್ಬಗಳೆಲ್ಲ ಕಾಣೆಯಾಗುವುದು ಪ್ರಾರಂಭವಾಗಿದ್ದು ಸಿನೆಮಾಗಳು, ಮಾಲ್‌ಗ‌ಳು, ಗೇಮ್‌ಗಳು, ಸೋಶಿಯಲ್‌ ಮೀಡಿಯಾಗಳು ಹಾಗೆ ಆಧುನಿಕ ಜೀವನಶೈಲಿ ಹೀಗೆ ಮನೋರಂಜನೆಗಾಗಿ ನಾನಾ ಕ್ಷೇತ್ರ ಬೆಳೆಯಲಿಕ್ಕೆ ಪ್ರಾರಂಭವಾದಾಗ ಇಲ್ಲಿ ನಮ್ಮ ಆಚರಣಗಳಲ್ಲಿ ಸಿಗುವ ಮನೋರಂಜನೆ ಏನೂ ಅಲ್ಲ ಎಂಬಂತ ಭಾವನೆ ಯುವಕರ, ಮಕ್ಕಳ ಹಾಗೂ ಜನರ ಎಲ್ಲರ ಮನಸ್ಸನ್ನು ಮೋಡಿ ಮಾಡಿತು. ಹೀಗೆ ನಮ್ಮ ಆಚರಣೆ ಬರೀ ಮನೋರಂಜನೆ ಮಾತ್ರವಲ್ಲ ವೈಜ್ಞಾನಿಕವಾಗಿ ಹಾಗೂ ದೈವಿಕವಾಗಿ ನಮಗೆ ಹಿತೈಷಿಯಾಗಿದೆ ಎಂಬುದನ್ನು ನಾವು ಮರೆತುಬಿಟ್ಟೆವು. ಇದು ಒಂದು ರೀತಿಯಲ್ಲಿ ಹಬ್ಬಗಳು ಮರೆಯಾಗಲು ಕಾರಣವಾದರೆ ಬೆಳೆಯುತ್ತಿರುವ ಆಧುನಿಕ ಸಮಾಜದಲ್ಲಿ ಮನೆಯ ಬಾಗಿಲನ್ನು ಯಾವಾಗಲೂ ಮುಚ್ಚುವುದು ಇನ್ನೊಂದು ಕಾರಣವಾಗಿದೆ. ಇದು ಹೇಗೆಂದರೆ ಮೊದಲು ಪ್ರತಿಯೊಬ್ಬ ಮನುಷ್ಯನಲ್ಲೂ ನಂಬಿಕೆ,ವಿಶ್ವಾಸ ಇದ್ದವು. ಆಚೆ ಈಚೆ ಮನೆಯಲ್ಲಿ ಆತ್ಮೀಯತೆ ಮತ್ತು ಒಡನಾಟ ಇತ್ತು.

ಈಗ ಕಾಲ ಎಲ್ಲಿವರೆಗೆ ಬಂದಿದೆ ಎಂದರೆ ಈ ಖಾಸಗಿತನಕ್ಕೆ ಒತ್ತು ಕೊಡುತ್ತಾ ಪಕ್ಕದ ಮನೆಯವರ ಹೆಸರು ಕೂಡ ಗೊತ್ತಿರದಷ್ಟು ಮೂಢರಾಗಿಬಿಟ್ಟಿದ್ದೇವೆ ನಾವು. ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ಮೊಗ್ನರಾಗಿ ಮನುಷ್ಯರಿಗಿಂತ ನಾವು ಆಧುನಿಕ ರೋಬೋಟ್‌ ಗಳಾಗಿ ಜೀವನ ಮಾಡುತ್ತಿದ್ದೇವೆ. ಜೀವನವನ್ನು ಅನುಭವಿಸುವ ಬದಲು ಸವೆಸುತ್ತಿದ್ದೇವೆ.

ನವಯುಗದ ಭ್ರಮೆಯಿಂದ ಹೊರಬಂದು ಆತ್ಮೀಯತೆ ಹಾಗೂ ಒಡನಾಟವನ್ನು ಬೆಳೆಸಿಕೊಂಡಾಗ ನಮ್ಮ ಸಂಸ್ಕೃತಿ, ನಮ್ಮ ಆಚರಣೆ, ನಮ್ಮ ಸಂಬಂಧ ಹಾಗೂ ನಮ್ಮೂರು ವೈಭವಿಕೃತವಾಗಿರುತ್ತದೆ. ನಮ್ಮಲ್ಲಿನ ರೋಬೋಟ್‌ ಮನಸ್ಥಿತಿ ಒಡೆದು ಹೋಗಿ ನಮ್ಮ ಜೀವನವನ್ನು ನೋಡುವ ರೀತಿಯೂ ಬದಲಾಗುತ್ತದೆ. ಇವೆಲ್ಲದರ ಮೊದಲ ಹೆಜ್ಜೆ ಮತ್ತೆ ನಮ್ಮ ಆಚರಣೆ ಹಬ್ಬಗಳ ಕಡೆಗೆ ಮುಖ ಮಾಡುವಮೂಲಕ ನಮ್ಮ ಮನಸ್ಥಿತಿಗೆ ಅಂಟಿದ್ದ ಸಂಕುಚಿತ ಭಾವ ಮರೆಯಾಗಲಿದೆ.

-ರಿಶಿರಾಜ್‌

ಭಂಡಾರ್ಕಾರ್ಸ್‌ ಕಾಲೇಜು ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next